ಭೋಪಾಲ್ ಮೂಲದ ರಿತಿ ನೇಮಾ ಬೈಗೋನ್ ಎಂಬ ವಿದ್ಯಾರ್ಥಿನಿ ಈ ಬಾರಿಯ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಎಲ್ಲಾ ವಿಶ್ವವಿದ್ಯಾಲಯದ ದಾಖಲೆ ಮುರಿಯುವ ಸಾಧನೆ ಮಾಡಿದ್ದಾರೆ. ರಿತಿ ನೇಮಾ ಅವರು ಇಂದೋರ್‌ನಲ್ಲಿರುವ "ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ" ಕಾಲೇಜಿನ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಡಿಎವಿವಿಯ ಇತಿಹಾಸದಲ್ಲಿ ಅತ್ಯಧಿಕ ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ತಮ್ಮದಾಗಿಸುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ. ರಿತಿ ನೇಮಾ ಇಂದೋರ್ ಐಐಎಂನಲ್ಲಿ ಅತ್ಯುನ್ನತ ಪ್ಯಾಕೇಜ್ ಪಡೆದ ದಾಖಲೆಯನ್ನು ಮೀರಿಸಿದ್ದಾರೆ ಎಂಬುವುದು ವಿಶೇಷ. ವರದಿಗಳ ಪ್ರಕಾರ ಇದು ಐಐಎಂ ಇಂದೋರ್‌ನ ವಿದ್ಯಾರ್ಥಿ ಪಡೆದ 49 ಲಕ್ಷ ಅತ್ಯಧಿಕ ಪ್ಯಾಕೇಜ್‌ಗಿಂತ ಸುಮಾರು 8 ಲಕ್ಷ ರೂಪಾಯಿ ಹೆಚ್ಚಿದೆ.

ರಿತಿ ನೇಮಾ ಅವರಿಗೆ ಆಸ್ಟ್ರೇಲಿಯಾದ ಸಾಫ್ಟ್‌ವೇರ್ ಕಂಪನಿ ಅಟ್ಲಾಸಿಯನ್ 57 ಲಕ್ಷ ರೂ. ಗಳ ವಾರ್ಷಿಕ ಸಂಬಳದ ಆಫರ್ ನೀಡಿ ನೇಮಿಸಿಕೊಂಡಿದೆ. ರಿತಿ ನೇಮಾ ಪ್ಲೇಸ್‌ಮೆಂಟ್ ಪ್ರಕ್ರಿಯೆಯ ಬಗ್ಗೆ ತಿಳಿದ ತಕ್ಷಣವೇ ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ತಮ್ಮದಾಗಿಸಿಕೊಳ್ಳಲು ತಯಾರಿ ಆರಂಭಿಸಿದ್ದಾರೆ. ಈ ವೇಳೆ ಅವರು 4 ನೇ ಸೆಮಿಸ್ಟರ್‌ನಲ್ಲಿದ್ದರು.
ಇಂಟರ್ವ್ಯೂ ಲೆವಲ್ ಮತ್ತು ಅವುಗಳ ಪ್ರಕ್ರಿಯೆಯ ಬಗ್ಗೆ ತಿಳಿಯಲು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಅಭ್ಯಾಸಿಸುವುದು ರಿತಿಯ ಇಂಟರ್ವ್ಯೂ ಎದುರಿಸುವ ತಂತ್ರಗಾರಿಕೆಯಲ್ಲಿ ಒಳಗೊಂಡಿತ್ತು. ಕೇಳಬಹುದಾದ ಪ್ರತಿಯೊಂದು ಪ್ರಶ್ನೆಗೆ ತಯಾರಿ ನಡೆಸಿದ ನಂತರ, ರಿತಿ ನೇಮಾ ತನ್ನ ಸ್ನೇಹಿತರಿಗೆ ಅಣಕು ಸಂದರ್ಶನಗಳನ್ನು ನೀಡುವ ಮೂಲಕ ಸಂದರ್ಶನಕಾರರನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರು.
ಸಂದರ್ಶನದಲ್ಲಿ ಆಯ್ಕೆಯಾಗಲು ರಿತಿ ನೇಮಾ ಅವರು ಆನ್ ಲೈನ್ ಮೂಲಕ ನಡೆದ ಮೂರು ಸುತ್ತಿನ ಇಂಟರ್ವ್ಯೂ ಕ್ಲಿಯರ್ ಮಾಡಬೇಕಿತ್ತು. ಮೊದಲ ಸುತ್ತಿನಲ್ಲಿ ಕೋಡಿಂಗ್ ಕೌಶಲಗಳ ಪರೀಕ್ಷೆ, ಎರಡನೆಯದು ಸಿಸ್ಟಮ್ ಡಿಸೈನ್ ಮತ್ತು ಮೂರನೆಯದು ಮ್ಯಾನೇಜ್ಮೆಂಟ್ ವ್ಯಾಲ್ಯೂ ಕುರಿತು ಇಂಟರ್ವ್ಯೂ ಎದುರಿಸಬೇಕಾಗಿತ್ತು ಎಂದು ವರದಿಯಾಗಿದೆ.
2021-22 ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ 700 ಕ್ಕೂ ಹೆಚ್ಚು ಕಂಪನಿಗಳಿಂದ ಆಫರ್‌ಗಳನ್ನು ಪಡೆದ 405 ಡಿಎವಿವಿ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನದಲ್ಲಿ ನಿಂತು ಎಲ್ಲಾ ದಾಖಲೆ-ಮುರಿಯುವ ವೇತನ ಪ್ಯಾಕೇಜ್ ತಮ್ಮದಾಗಿಸಲು ರಿತಿ ಎಲ್ಲಾ ಲೆವಲ್ ನಲ್ಲೂ ಅತ್ಯುತ್ತಮವಾದದನ್ನು ಸಾಧಿಸಿ ತೋರಿಸಿದ್ದಾರೆ. ರಿತಿ ನೇಮಾ ತಂದೆ ಮೆಡಿಕಲ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಾರೆ.
ಮೂವರು ಸಹೋದರಿಯರಲ್ಲಿ ರಿತಿ ನೇಮಾ ಕೊನೆಯವರಾಗಿದ್ದಾರೆ. ಹಿರಿಯ ಸಹೋದರಿಯಲ್ಲಿ ಒಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಮತ್ತೊಬ್ಬರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ಮೊದಲಿನಿಂದಲೂ ತಾನು ಇಂಜಿನಿಯರಿಂಗ್ ಆಗಬೇಕು ಎಂದು ಬಯಸಿದ್ದ ರಿತಿ ನೇಮಾ ಕಲಿಕೆಯಲ್ಲಿ ಜಾಣ ವಿದ್ಯಾರ್ಥಿಯಾಗಿದ್ದರು.
ಶಾಲಾ ಹಂತದಲ್ಲಿ ಗಣಿತ ಒಲಿಂಪಿಯಾಡ್‌ನಲ್ಲೂ ಚಿನ್ನದ ಪದಕ ಪಡೆದಿರುವ ಇವರು ರೂಬಿಕ್ಸ್ ಕ್ಯೂಬ್ ಸ್ಪರ್ಧೆಯ ವಿಜೇತರೂ ಆಗಿದ್ದಾರೆ. ರಿತಿ ನೇಮಾ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಅವರು ಪ್ರಸ್ತುತ ಅಟ್ಲಾಸಿಯನ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications