ರೋಶ್ನಿ ನಡಾರ್ ಮಲ್ಹೋತ್ರಾ ಅವರು ಭಾರತದ ಜನಪ್ರಿಯ ಬಿಲಿಯನೇರ್ ಮಹಿಳಾ ಉದ್ಯಮಿಯಾಗಿದ್ದಾರೆ. ಭಾರತದಲ್ಲಿ ನೆಲೆಸಿರುವ ಅಂತಾರಾಷ್ಟ್ರೀಯ ಐಟಿ ಸರ್ವೀಸ್ ಹಾಗೂ ಕನ್ಸಲ್ಟಿಂಗ್ ಕಂಪನಿಯಾದ ಎಚ್‌ಸಿಎಲ್‌ಟೆಕ್‌ನ ಅಧ್ಯಕ್ಷೆಯಾಗಿದ್ದಾರೆ.
41 ವರ್ಷದ ರೋಶ್ನಿ ಅವರು 2009ರಲ್ಲಿ ಎಚ್‌ಸಿಎಲ್ ಸೇರಿದ್ದರು. ಅವರು 1976ರಲ್ಲಿ ಎಚ್‌ಸಿಎಲ್ ಅನ್ನು ಸ್ಥಾಪನೆ ಮಾಡಿರುವ ಶಿವ ನಡಾರ್ ಅವರ ಮಗಳು. ಅವರು ಈ ಕಂಪನಿಯನ್ನು ಕ್ಯಾಲುಕ್ಯುಲೇಟರ್ ಹಾಗೂ ಮೈಕ್ರೋ ಪ್ರೊಸೆಸರ್ ಅನ್ನು ತಯಾರಿಸುವುದಕ್ಕೆ ಐದು ಮಂದಿ ಸ್ನೇಹಿತರ ಜತೆ ಸೇರಿಕೊಂಡು ಸ್ಥಾಪಿಸಿದ್ದರು.

ರೋಶ್ನಿ ಅವರು 2020ರಲ್ಲಿ ಎಚ್‌ಸಿಎಲ್‌ನ ಅಧ್ಯಕ್ಷ ಸ್ಥಾನವನ್ನು ತಮ್ಮ ತಂದೆಯವರಿಂದ ತೆಗೆದುಕೊಂಡಿದ್ದರು. ರೋಶ್ನಿ ಅವರು 3,18,000 ಕೋಟಿ ರೂಪಾಯಿಗಳ ಮಾರ್ಕೆಟ್ ಕ್ಯಾಪ್ ಹೊಂದಿರುವ ಈ ತಂತ್ರಜ್ಞಾನ ಕಂಪನಿಯ ಎಲ್ಲ ಪ್ರಮುಖ ನಿರ್ಧಾರ ಹಾಗೂ ಕಾರ್ಯತಂತ್ರಗಳಿಗೆ ಜವಾಬ್ದಾರರಾಗಿದ್ದಾರೆ. ಅವರು ಕಂಪನಿಯ ಸಿಎಸ್‌ಆರ್ ಬೋರ್ಡ್ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ರೋಶ್ನಿ ನಡಾರ್ ನಿವ್ವಳ ಆದಾಯವೆಷ್ಟಿದೆ?
ಭಾರತದಲ್ಲಿ ಲಿಸ್ಟೆಡ್ ಐಟಿ ಕಂಪನಿಯನ್ನು ಮುನ್ನಡೆಸುತ್ತಿರುವ ಮೊದಲ ಮಹಿಳೆ ರೋಶ್ನಿ ಆಗಿದ್ದು, ಎಚ್‌ಸಿಎಲ್ ಕಂಪನಿಯ ಸಂಸ್ಥಾಪಕರ ಏಕೈಕ ಪುತ್ರಿಯೂ ಹೌದು. ಆಕೆಯ ತಂದೆ ಶಿವ ನಡಾರ್ ಅವರು ತಂತ್ರಜ್ಞಾನ ಉದ್ಯಮ ಕ್ಷೇತ್ರದಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಆಗಸ್ಟ್ 20ರ ಮಾಹಿತಿಯಂತೆ ಅವರು 27.3 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿದ್ದಾರೆ. ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ 2,27,010 ಕೋಟಿ ರೂಪಾಯಿ ಆಗಿದೆ.
ರೋಶ್ನಿ ಅವರು ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯಿಂದ ಕಮ್ಯೂನಿಕೇಷನ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಜತೆಗೆ ಅವರು ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ರೋಶ್ನಿ ಅವರು ಶಿವ ನಡಾರ್ ಫೌಂಡೇಷನ್ ಟ್ರಸ್ಟಿ ಕೂಡ ಆಗಿದ್ದು, ಅದು ಶಿಕ್ಷಣ ವಲಯಕ್ಕೆ ಗಮನಹರಿಸುವ ಮೂಲಕ ದೇಶದಲ್ಲಿ ಕೆಲವು ಮುಂಚೂಣಿಯ ಶಾಲೆ ಹಾಗೂ ಕಾಲೇಜುಗಳನ್ನು ಸ್ಥಾಪಿಸಿದೆ.
ರೋಶ್ನಿ ಅವರು ವನ್ಯಜೀವಿ ಹಾಗೂ ಅವುಗಳ ಸಂರಕ್ಷಣೆ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಿಕೊಂಡಿದ್ದಾರೆ. ಅವರು 2018ರಲ್ಲಿ ದಿ ಹ್ಯಾಬಿಟೇಟ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಈ ಫೌಂಡೇಶನ್ ಭಾರತದ ನೈಸರ್ಗಿಕ ಆವಾಸಸ್ಥಾನಗಳು ಮತ್ತು ಅದರ ಸ್ಥಳೀಯ ಪ್ರಭೇದಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ಅವರು ಭಾರತದಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳನ್ನು ಗಮನದಲ್ಲಿಟ್ಟುಕೊಂಡು ಅನಿಮಲ್ ಪ್ಲಾನೆಟ್/ಡಿಸ್ಕವರಿ ಚಾನೆಲ್‌ಗಾಗಿ On The Brink ಹೆಸರಿನ ಟಿವಿ ಸರಣಿ ಶೋಗಳನ್ನು ನಿರ್ಮಿಸಿದ್ದಾರೆ.


Click it and Unblock the Notifications