ಷೇರುಮಾರುಕಟ್ಟೆಯ ದೊಡ್ಡ ಬುಲ್ ರಾಕೇಶ್ ಜುಂಜುನ್‌ವಾಲಾರ ಹಾದಿಯಲ್ಲಿ ನಡೆದು 24 ವರ್ಷದ ಸಂಕರ್ಷ್ ಚಂದಾ ಎಂಬ ವ್ಯಕ್ತಿಯು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ ಕೋಟಿಗಳನ್ನು ಗಳಿಸಿದ್ದಾರೆ. ಈ ವ್ಯಕ್ತಿಯು ಕೇವಲ 17 ವರ್ಷ ವಯಸ್ಸಿರುವಾಗಲೇ ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಸದ್ಯಕ್ಕೆ ಚಂದಾ ಅವರು 100 ಕೋಟಿ ರೂಪಾಯಿ ಆಸ್ತಿಯನ್ನು ಗಳಿಸಿದ್ದಾರೆ.
ಸಂಕರ್ಷ್ ಅವರು ಫಿನ್‌ಟೆಕ್ ವ್ಯವಹಾರವನ್ನು ಸ್ಥಾಪಿಸಿದ್ದು, ಆ ಮೂಲಕ ಷೇರುಮಾರುಕಟ್ಟೆ, ಬಾಂಡ್ಸ್ ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ನೆರವಾಗುತ್ತಿದ್ದಾರೆ. ಬೆನೆಟ್ ವಿಶ್ವವಿದ್ಯಾಲಯವನ್ನು ತೊರೆದು 2017ರಲ್ಲಿ ತಮ್ಮ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಸಂಕರ್ಷ್ ಅವರು ಬಿಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರು.

ಸಂಕರ್ಷ್ ಶರ್ಮಾ ಅವರು ಬಿಟೆಕ್ ಎರಡನೇ ವರ್ಷ ಓದುತ್ತಿರಬೇಕಾದರೆ ಶಿಕ್ಷಣವನ್ನು ಅರ್ಧಕ್ಕೆ ಬಿಡುವುದಕ್ಕೆ ತೀರ್ಮಾನಿಸಿದ್ದರು. ಆ ಮೂಲಕ ಸ್ಟಾಕ್ ಮಾರ್ಕೆಟ್ ವ್ಯವಹಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಸಂಕರ್ಷ್ ಅವರು 2016ರಲ್ಲಿ 12ನೇ ತರಗತಿಯ ಡಿಪ್ಲೋಮಾ ಪದವಿಯನ್ನು ಗಳಿಸಿದ ನಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಲು ಪ್ರಾರಂಭಿಸಿದರು.
ಕೇವಲ 2,000 ರೂಪಾಯಿಯೊಂದಿಗೆ ತಮ್ಮ ಹೂಡಿಕೆಯನ್ನು ಪ್ರಾರಂಭಿಸಿದ್ದರು. "ಎರಡು ವರ್ಷಗಳಲ್ಲಿ ನಾನು 1.5 ಲಕ್ಷ ರೂ. ವನ್ನು ಹೂಡಿಕೆ ಮಾಡಿದ್ದೆ. ನನ್ನ ಷೇರುಗಳ ಮಾರುಕಟ್ಟೆ ಮೌಲ್ಯವು ಎರಡು ವರ್ಷದಲ್ಲಿ 13 ಲಕ್ಷ ರೂ. ಗೆ ಏರಿತ್ತು," ಎಂಬುದಾಗಿ ಸಂಕರ್ಷ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಸಂಕರ್ಷ್ ಅವರು 2017ರಲ್ಲಿ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸುವುದಕ್ಕೆ 8 ಲಕ್ಷ ರೂ. ಗೆ ಷೇರುಗಳನ್ನು ಮಾರಾಟ ಮಾಡಿದ್ದರು. ಅವರು ಸ್ಟಾರ್ಟಪ್ ಮೂಲಕ ಮಾಡಿದ ಹಣವನ್ನು ಮರು ಹೂಡಿಕೆ ಮಾಡಲು ಪ್ರಾರಂಭಿಸಿದರು. ಆ ಮೂಲಕ ದೊಡ್ಡ ಮಟ್ಟದ ಲಾಭವನ್ನು ಗಳಿಸಲಾರಂಭಿಸಿದರು. "ಈಗ ನನ್ನ ಒಟ್ಟು ಆಸ್ತಿ ಮೌಲ್ಯ 100 ಕೋಟಿ ರೂಪಾಯಿ ಆಗಿದೆ," ಎಂದು ವೀಕೆಂಡ್ ಲೀಡರ್‌ಗೆ ತಿಳಿಸಿದ್ದಾರೆ.
"ಇದು ನನ್ನ ಷೇರು ಮಾರುಕಟ್ಟೆಯ ಹೂಡಿಕೆಗಳ ಜತೆಗೆ ನನ್ನ ಕಂಪೆನಿಯ ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ," ಎನ್ನುತ್ತಾರೆ. 23 ವರ್ಷದ ಸಂಕರ್ಷ್ ಈಗ ಹೇಳುವ ಪ್ರಕಾರ, ಅಮೆರಿಕದ ಅರ್ಥಶಾಸ್ತ್ರಜ್ಞ ಬೆಂಜಮಿನ್ ಗ್ರಾಹಾಂ ಅವರ ಬಗ್ಗೆ ಓದಿದ ಬಳಿಕ ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಹುಟ್ಟಿತ್ತು. ಅವರು ತಮ್ಮ 14 ವರ್ಷದಲ್ಲೇ "ಮೌಲ್ಯ ಹೂಡಿಕೆಯ ಪಿತಾಮಹ" ಎಂದು ಕರೆಸಿಕೊಂಡಿದ್ದರು.


Click it and Unblock the Notifications