ಪ್ರತಿಷ್ಠಿತ ಕಂಪನಿಗಳಲ್ಲಿ ಹೆಚ್ಚಿನ ಸಂಬಳ ಬರುವ ಉದ್ಯೋಗವನ್ನು ತೊರೆದು ತಮ್ಮದೇ ಆದ ಯಶಸ್ವಿ ಉದ್ಯಮವನ್ನು ಪ್ರಾರಂಭಿಸಿರುವ ಹಲವಾರು ಕಥೆಗಳನ್ನು ನಾವು ಕೇಳಿದ್ದೇವೆ. ಅನೇಕರು ಐಎಎಸ್ ಮತ್ತು ಐಪಿಎಸ್‌ನಂಥ ಅಧಿಕಾರಿಯಾಗುವ ಕನಸಿನೊಂದಿಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವುದಕ್ಕೆ ತಮ್ಮ ಉದ್ಯೋಗವನ್ನು ತೊರೆಯುತ್ತಿದ್ದಾರೆ.
ವಿಶೇಷವೆಂದರೆ ಈ ಲೇಖನದಲ್ಲಿ ಯಶಸ್ವಿ ರೈತನಾಗಬೇಕೆಂಬ ಛಲದೊಂದಿಗೆ ಇಬ್ಬರು ಸಹೋದರರು ಉದ್ಯೋಗಕ್ಕೆ ಗುಡ್‌ಬೈ ಹೇಳಿರುವ ಸ್ಟೋರಿ ಇದು. ಅವರೇ ಪುಣೆಯ ಇಬ್ಬರು ಸಹೋದರರಾದ ಸತ್ಯಜಿತ್ ಹಾಂಗೆ ಮತ್ತು ಅಜಿಂಕ್ಯ ಹಾಂಗೆ. ಅವರು ಪುಣೆಯ ಭೋದಾನಿ ಗ್ರಾಮದಲ್ಲಿ 'ಟು ಬ್ರಸರ್ಸ್ ಆರ್ಗ್ಯಾನಿಕ್ ಫಾರ್ಮ್(TBOF)' ಎಂಬ ಸಾವಯವ ಫಾರ್ಮ್ ಅನ್ನು ನಿರ್ಮಿಸಿದ್ದಾರೆ.
ಈ ಇಬ್ಬರು ಸಹೋದರರು ಕೂಡ ಪೂರ್ಣಾವಧಿಯ ಕೃಷಿಯನ್ನೇ ಅವಲಂಬಿಸುವುದಕ್ಕೆ ತಮ್ಮ ಗ್ರಾಮಕ್ಕೆ ಮರಳಿದ್ದರು. ಇದಕ್ಕಾಗಿ ಅವರು ಬ್ಯಾಂಕ್‌ಗಳಲ್ಲಿನ ಹೆಚ್ಚಿನ ಸಂಬಳದ ಹುದ್ದೆಯನ್ನು ತೊರೆದರು. ಈ ಫಾರ್ಮ್ ವಾರ್ಷಿಕ 12 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದು ವರದಿಯಾಗಿದೆ.
ಅಜಿಂಕ್ಯ ಕಂಪ್ಯೂಟರ್ ಸೈನ್ಸ್ ಪದವೀಧರರು. ಪುಣೆಯ ಇಂದಿರಾ ಕಾಲೇಜಿನಲ್ಲಿ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. 39 ವರ್ಷದ ಅವರು ಎಚ್‌ಡಿಎಫ್‌ಸಿ ಮತ್ತು ಎಚ್‌ಎಸ್‌ಬಿಸಿಯಂಥಹ ಕಂಪನಿಗಳೊಂದಿಗೆ ಸುಮಾರು 4 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅಜಿಂಕ್ಯ ಅವರು ಫಾರ್ಮ್‌ನ ದೈನಂದಿನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಅವರ ಸಹೋದರ 42 ವರ್ಷದ ಸತ್ಯಜಿತ್ ಅರ್ಥಶಾಸ್ತ್ರದಲ್ಲಿ ಪದವೀಧರರಾಗಿದ್ದು, ಎಂಬಿಎ ಪದವಿ ಪಡೆದಿದ್ದಾರೆ. ಅವರು ಕೋಟಕ್ ಲೈಫ್ ಇನ್ಶುರೆನ್ಸ್, ಸಿಟಿಕಾರ್ಪ್ ಫೈನಾನ್ಸ್ ಮತ್ತು ಡಿಬಿಎಸ್‌ನಂಥಹ ಕಂಪನಿಗಳಲ್ಲಿ ಒಂದು ದಶಕದ ಕಾಲ ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಿದ್ದಾರೆ. ಸತ್ಯಜಿತ್ ತನ್ನ ಕಿರಿಯ ಸಹೋದರ ಅಜಿಂಕ್ಯ ಅವರೊಂದಿಗೆ ಫಾರ್ಮ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಅವರಿಬ್ಬರು ಜಮೀನುಗಳಿಂದ ಬರುವ ಉತ್ಪನ್ನಗಳನ್ನು ನೈಸರ್ಗಿಕವಾಗಿ ಸಂಸ್ಕರಿಸಿ ಸಾಂಪ್ರದಾಯಿಕ ಆಹಾರಗಳನ್ನು ಕನಿಷ್ಠ ಅಥವಾ ಯಂತ್ರಗಳ ಬಳಕೆಯಿಲ್ಲದೆ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಇಬ್ಬರು ಸಹೋದರರು ತಯಾರಿಸುವ ಉತ್ಪನ್ನಗಳನ್ನು ಅವರ ವೆಬ್‌ಸೈಟ್ ಹಾಗೂ ಅಮೆಜಾನ್.ಕಾಮ್ ನಿಂದಲೂ ಆನ್‌ಲೈನ್ ಮೂಲಕ ಖರೀದಿಸಬಹುದು. ಪ್ರಸ್ತುತ ಟಿಬಿಒಎಫ್ ಲಡ್ಡು, ತುಪ್ಪ, ಕಡಲೆಕಾಯಿ ಬೆಣ್ಣೆ, ಕಡಲೆಕಾಯಿ ಎಣ್ಣೆ ಹಾಗೂ ಸಂಪ್ರದಾಯಿಕ ಗೋಧಿ ಹಿಟ್ಟು ಸೇರಿದಂತೆ ವಿವಿಧ ಸಾವಯವ ವಸ್ತುಗಳನ್ನು ಮಾರಾಟ ಮಾಡುತ್ತಿದೆ.
ಇವರಿಬ್ಬರು ಮಹಾರಾಷ್ಟ್ರದ ಇಂದಪುರ ಜಲ್ಲೆಯ ಭೋದಾನಿ ಗ್ರಾಮದಲ್ಲಿ 21 ಎಕರೆ ಸಾವಯವ ಫಾರ್ಮ್ ಅನ್ನು ಹೊಂದಿದ್ದಾರೆ. ಬಹುತೇಕ ಎಲ್ಲ ಉತ್ಪನ್ನಗಳನ್ನು ರೈತ ಸಮುದಾಯದ ನೆರವಿನೊಂದಿಗೆ ತಮ್ಮ 90 ವರ್ಷ ಹಳೇಯ ಫಾರ್ಮ್ ಕಿಚನ್‌ನಲ್ಲಿಯೇ ತಯಾರಿಸುತ್ತಿರುವುದು ವಿಶೇಷ.
ಈ ಕಂಪನಿಯು ತನ್ನ ಉತ್ಪನ್ನಗಳನ್ನು 18 ದೇಶಗಳಿಗೆ ಮಾರಾಟ ಮಾಡುತ್ತಿದೆ. ಆನ್‌ಲೈನ್ ಜತೆಗೆ ಮುಂಬೈ ಹಾಗೂ ಪುಣೆಯಲ್ಲಿ ನೇರವಾಗಿ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಸಾವಯವ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಜಿಂಕ್ಯ ಹಾಗೂ ಸತ್ಯಜಿತ್ ಅವರು 'ಆರ್ಗಾನಿಕ್ ವಿ' ಎನ್ನುವ ನೆಟ್‌ವರ್ಕ್ ಮೂಲಕ ಸಾಮುದಾಯಿಕ ಜಾಗೃತಿ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ. ಮುಂಬೈ ಸುತ್ತಮುತ್ತಲಿನ ಸುಮಾರು ಒಂದು ಸಾವಿರ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ರೈತನಾಗಿ ಬದಲಾದ ಇಂಜಿನಿಯರ್
ಬಹಳಷ್ಟು ಮಂದಿ ಇಂಜಿನಿಯರಿಂಗ್ ಪದವೀಧರರು ವೃತ್ತಿಜೀವನ ಮುನ್ನಡೆಸಲು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಮಾಡಲು ಇಚ್ಚಿಸುತ್ತಾರೆ. ಆದರೆ ಸಿವಿಲ್ ಇಂಜಿನಿಯರ್ ಜಯಗುರು ಆಚಾರ್ ಹಿಂದಾರು ಇದಕ್ಕಿಂತಲೂ ಭಿನ್ನವಾಗಿ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.
ಜಯಗುರು ಆಚಾರ್ ಹಿಂದಾರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿಯಾಗಿದ್ದಾರೆ. ಜಯಗುರು ಆಚಾರ್ ಅವರು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ತಮ್ಮ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿ ಬಳಿಕ ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದರು.


Click it and Unblock the Notifications
