ಹೆಸರಾಂತ ಸ್ಟಾಕ್ ಟ್ರೇಡರ್ ಜೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ತಮ್ಮ ಮಾವ ಶಿವಾಜಿ ಪಾಟೀಲ್ (70) ಅವರಿಂದ ಕಲಿತ ಜೀವನ ಪಾಠದ ಹೃದಯಸ್ಪರ್ಶಿ ಕತೆಯೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಾವ ಶಿವಾಜಿ ಪಾಟೀಲ್ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು 70 ವರ್ಷದ ಮಾವ "ಹೇಗೆ ಉತ್ತಮವಾದ ಜೀವನವನ್ನು ನಡೆಸಬೇಕು ಎಂಬ ಕುರಿತು ಒಳ್ಳೆಯ ಪಾಠ ಕಲಿಸಿದರು," ಎಂಬುದನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
"ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಹುದ್ದೆ ಸೇವೆ ಸಲ್ಲಿಸುತ್ತಿದ್ದ ಮಾವ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹಿಮಪಾತದ ಅಪಘಾತಕ್ಕೆ ತುತ್ತಾಗಿ ತಮ್ಮ ಬೆರಳು ಕಳೆದುಕೊಳ್ಳಬೇಕಾಗಿ ಬಂತು. ಬೆರಳು ಕಳೆದುಕೊಂಡ ನಂತರ ಸ್ವಯಂಪ್ರೇರಣೆಯಿಂದ ಸೇನೆಯಿಂದ ನಿವೃತ್ತರಾದರು. ಇದಾದ ನಂತರ ಅವರು ಬೆಳಗಾವಿಯಲ್ಲಿ ಕಿರಾಣಿ ಅಂಗಡಿ ಪ್ರಾರಂಭಿಸಿದರು," ಎಂದ ನಿತಿನ್ ಕಾಮತ್ "ಮಾವ ಪಾಟೀಲರು ಸಂತೃಪ್ತಿಯ ಗುಣದ ದ್ಯೋತಕವಾಗಿದ್ದಾರೆ. ಸ್ವಾತಂತ್ರ್ಯ ಅನುಭವದ ಕೀಲಿಕೈಯೇ ಸಂತೃಪ್ತಿ ಮತ್ತು ನೆಮ್ಮದಿ," ಎಂದು ತಮ್ಮ ಬರಹದಲ್ಲಿ ಹೊಗಳಿದ್ದಾರೆ.

ತಮ್ಮ ಮಾವನವರ ಜೀವನಶೈಲಿಯನ್ನು ವಿವರಿಸುವ ಕಾಮತ್ "ಅವರಿಗೆ 70 ವರ್ಷ ವಯಸ್ಸಾಗಿದೆ. ದಶಕಗಳಷ್ಟು ಹಳೆಯದಾಗಿರುವ ವಿಶೇಷ ಚೇತನರ ಸ್ಕೂಟರ್‌ನಲ್ಲಿ ನಿಯಮಿತವಾಗಿ ಸ್ಥಳೀಯ ಮಾರುಕಟ್ಟೆಗೆ ಹೋಗಿ ತಮ್ಮ ಅಂಗಡಿಗೆ ಬೇಕಾದ ದಿನಸಿಗಳನ್ನು ತರುತ್ತಾರೆ. ಅವರಿಗಿರುವ ಏಕೈಕ ಸಹಾಯ ಹಸ್ತವೆಂದರೆ ನನ್ನ ಅತ್ತೆ, ಅವರು ಅಂಗಡಿಯನ್ನು ನಡೆಸಲು ಮತ್ತು ಮನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ," ಎಂದು ವಿವರಿಸಿದ್ದಾರೆ.
ಈಗಲೂ ಕಿರಾಣಿ ಅಂಗಡಿ ನಡೆಸುತ್ತಿರುವ ಮಾವ
ಕಾಮತ್ ಮತ್ತು ಅವರ ಪತ್ನಿ ಸೀಮಾ ಅವರ ಸಾಧನೆ, ಯಶಸ್ಸಿನ ಹೊರತಾಗಿಯೂ ತಮ್ಮ ಮಾವ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. 2007ರಲ್ಲಿ ತಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ಅನುಮತಿ ಕೇಳಿದಾಗ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ನಿತಿನ್‌ಗೆ ಸರ್ಕಾರಿ ನೌಕರಿ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ನಿತಿನ್.
"ಕಿರಾಣಿ ಅಂಗಡಿಯಲ್ಲಿನ ವಿವಿಧ ಉತ್ಪನ್ನಗಳ ಮಾರ್ಜಿನ್‌ಗಳ ಬಗ್ಗೆ ಅವರನ್ನು ಮಾತನಾಡಿಸಿದಾಗ, ಅವರ ಕಣ್ಣಲ್ಲಿ ಉತ್ಸಾಹದ ಮಿನುಗು ಕಂಡೆನು. ತಮ್ಮ ಅಂಗಡಿಯಲ್ಲಿ ಮಾರಾಟವಾಗುವ ಚಿಕ್ಕಿಗಳಿಗೆ 25 ಪರ್ಸೆಂಟ್ ಮಾರ್ಜಿನ್ ಸಿಗುವ ಬಗ್ಗೆ ಮಾತನಾಡುತ್ತಾರೆ, 200 ರೂಪಾಯಿಗೆ ಬಾಕ್ಸ್ ಖರೀದಿಸಿ 250 ರೂಪಾಯಿಗೆ ಮಾರಾಟ ಮಾಡಿ ಸಿಗುವ ಲಾಭದ ಬಗ್ಗೆ ಮಾತನಾಡುತ್ತಾರೆ," ಎಂದು ತಿಳಿಸಿದ್ದಾರೆ.
"ನಾನು ಆರೋಗ್ಯವನ್ನು ಕಾಪಾಡಿಕೊಂಡು ಕೊನೆಯವರೆಗೂ ಉತ್ತಮ ಜೀವನವನ್ನು ಹೇಗೆ ನಡೆಸುವುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ನನಗೆ ಉತ್ತರ ಇಲ್ಲಿ ಸಿಕ್ಕಿದ್ದು ಜೀವನದಲ್ಲಿ ಸಂತೃಪ್ತವಾಗಿರಬೇಕು ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯವಾಗಿರಬೇಕು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಹಣವು ಇದನ್ನೆಲ್ಲಾ ಖರೀದಿಸಿ ಸಾಧ್ಯವಿಲ್ಲ ಮತ್ತು ನನ್ನ ಮಾವ ಇದಕ್ಕೆ ಅತ್ಯುತ್ತಮ ಉದಾಹರಣೆ ಆಗಿದ್ದಾರೆ," ಎಂದು ಬರೆದುಕೊಂಡಿದ್ದಾರೆ.
ನಿತಿನ್ ಕಾಮತ್ ಬಗ್ಗೆ ತಿಳಿಯಿರಿ
ಕೆಲವು ವರ್ಷಗಳ ಹಿಂದೆ ಕಾಲ್‌ಸೆಂಟರ್‌ನಲ್ಲಿ 8 ಸಾವಿರ ರೂಪಾಯಿ ವೇತನಕ್ಕೆ ದುಡಿಯುತ್ತಿದ್ದ ವ್ಯಕ್ತಿಯೋರ್ವ ಈಗ ಬರೋಬ್ಬರಿ 2,094 ಕೋಟಿ ರೂಪಾಯಿ ಆದಾಯವುಳ್ಳ ಸಂಸ್ಥೆಯ ಒಡೆಯ ಎಂದು ಹೇಳಿದರೆ, ನಂಬಲು ಸಾಧ್ಯವೇ? ಹೌದು ಅಂತಹ ಸಾಹಸಕ್ಕೆ ಇಳಿದು ತನ್ನ ಆದಾಯವನ್ನು ಹೆಚ್ಚಿಸಿಕೊಂಡವರು ನಿತಿನ್ ಕಾಮತ್.
ಜೆರೋಧಾ ಪ್ರಸ್ತುತ ಅತೀ ದೊಡ್ಡ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಕೆಲವು ವರ್ಷಗಳ ಹಿಂದೆ 8 ಸಾವಿರ ರೂಪಾಯಿಗೆ ದುಡಿಯುತ್ತಿದ್ದ ನಿತಿನ್ ಕಾಮತ್ ಸ್ಥಾಪನೆ ಮಾಡಿದ್ದಾರೆ. ತನ್ನ ಸಹೋದರ ಹಾಗೂ ಇತರರೊಂದಿಗೆ ಸೇರಿ ಈ ಸಂಸ್ಥೆಯನ್ನು ನಿತಿನ್ ಕಾಮತ್ ಆರಂಭಿಸಿದ್ದಾರೆ. ಹಣಕಾಸು ವರ್ಷ 2022ರಲ್ಲಿ ಸಂಸ್ಥೆಯ ಒಟ್ಟು ಲಾಭವು 2,094 ಕೋಟಿ ರೂಪಾಯಿ ಆಗಿದೆ.


Click it and Unblock the Notifications