ಅನಿಲ್ ರಾಯ್ ಗುಪ್ತಾ ಅವರು ಪ್ರಭಾವಿ ಭಾರತೀಯ ಉದ್ಯಮಿಯಾಗಿದ್ದು, ಅವರು ಎಲೆಕ್ಟ್ರಿಕಲ್ ಕಂಪನಿಯಾದ ಹ್ಯಾವೆಲ್ಸ್ ಇಂಡಿಯಾದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಾಗಿ ಅದನ್ನು ಮುನ್ನಡೆಸುತ್ತಿದ್ದಾರೆ. ಈ ಕಂಪನಿಯನ್ನು ಅವರ ತಂದೆ ಕಿಮತ್ ರಾಯ್ ಗುಪ್ತಾ ಅವರು 1953ರಲ್ಲಿ ಎಲೆಕ್ಟ್ರಿಕಲ್ ಟ್ರೇಡಿಂಗ್ ವ್ಯವಹಾರದ ಹಿನ್ನಲೆಯಲ್ಲಿ ಸ್ಥಾಪಿಸಿದ್ದರು.
ಅನಿಲ್ ಅವರು 2014ರಿಂದ ಈ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಅವರು ಹ್ಯಾವೆಲ್ಸ್ ಇಂಡಿಯಾಗೆ 1992ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರಿದ್ದರು ಹಾಗೂ 2014ರಲ್ಲಿ ಅವರ ತಂದೆಯ ನಿಧನದ ನಂತರ ಕಂಪನಿಯಲ್ಲಿ ಉನ್ನತ ಸ್ಥಾನಕ್ಕ ಏರಿದರು. 54 ವರ್ಷದ ಅನಿಲ್ ಅವರು ಶ್ರೀರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

ಕಾಮರ್ಸ್ ಹಿನ್ನೆಲೆ ಹೊಂದಿರುವ ಅನಿಲ್ ಅವರು ಅಮೆರಿಕದ ಉತ್ತರ ಕೆರೊಲಿನಾದ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದಿಂದ ಮಾರ್ಕೆಟಿಂಗ್ ಮತ್ತು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
ಫೋರ್ಬ್ಸ್ ವರದಿಗಳ ಪ್ರಕಾರ, ಅವರ ತಾಯಿ ವಿನೋದ್ ರಾಯ್ ಗುಪ್ತಾ ಅವರು ಭಾರತದ 4ನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರು ಸೆಪ್ಟಂಬರ್ 13ರ ಮಾಹಿತಿ ಪ್ರಕಾರ 37,330 ಕೋಟಿ ರೂಪಾಯಿಗಳ ನಿವ್ವಳ ಆಸ್ತಿ ಮೌಲ್ಯ ಹೊಂದಿದ್ದಾರೆ. ಹ್ಯಾವೆಲ್ಸ್ ಇಂಡಿಯಾವು 2023ರ ಸೆಪ್ಟಂಬರ್ 13ರಂತೆ 87,685 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಬುಧವಾರದ ದಾಖಲೆಯಂತೆ ಎನ್‌ಎಸ್‌ಇಯಲ್ಲಿ ಕಂಪನಿಯು 1398.50 ಕೋಟಿ ರೂಪಾಯಿ ಷೇರು ಮೌಲ್ಯವನ್ನು ಹೊಂದಿದೆ.
ಗುಪ್ತಾ ಅವರು ಹರಿಯಾಣದ ಪ್ರತಿಷ್ಠಿತ ಅಶೋಕ ವಿಶ್ವವಿದ್ಯಾಲಯದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, ಇಲ್ಲಿ ಲಿಬರಲ್ ಮಾದರಿ ಶಿಕ್ಷಣವನ್ನು ನೀಡಲಾಗುತ್ತಿದೆ. ಅವರು ತಮ್ಮ ತಂದೆಯ ಬಗ್ಗೆ ಹ್ಯಾವೆಲ್ಸ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಿಮತ್ ರಾಯ್ ಗುಪ್ತಾ (2016) ಎಂಬ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಗುಪ್ತಾ ಅವರು ಸಂಗೀತಾ ರಾಯ್ ಗುಪ್ತಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಅನಿಲ್ ಅವರ ಮಾರ್ಕೆಟಿಂಗ್ ತಂತ್ರಗಾರಿಕೆಯು ಹ್ಯಾವೆಲ್ಸ್ ಎನ್ನುವ ಫ್ಯಾಮಿಲಿ ಬ್ರಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಹ್ಯಾವೆಲ್ಸ್ ಇಲೆಕ್ಟ್ರಿಕಲ್ ಹಾಗೂ ಲೈಟಿಂಗ್ ಸಾಧಗಳಿಂದ ಹಿಡಿದು ಫ್ಯಾನ್ಸ್, ರಿಫ್ರಿಜಿರೇಟರ್, ವಾಷಿಂಗ್ ಮೆಶಿನ್‌ವರೆಗೆ ಹಲವು ವಸ್ತುಗಳನ್ನು ತಯಾರಿಸುತ್ತಿದೆ. ಕಂಪನಿಯು 14 ಕಾರ್ಖಾನೆಗಳನ್ನು ಹೊಂದಿದ್ದು, 50 ದೇಶಗಳಲ್ಲಿ ಹ್ಯಾವೆನ್ಸ್ ಬ್ರಾಂಡ್ ವಸ್ತುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications