ನೆಸ್ಲೆ ಇಂಡಿಯಾ ತನ್ನ ಮಾರ್ಚ್ ತ್ರೈಮಾಸಿಕದಲ್ಲಿ 737 ಕೋಟಿ ರೂ. ಲಾಭ ದಾಖಲಿಸಿದೆ. ಕಂಪೆನಿಯು ಸುಮಾರು 1,99,477 ಕೋಟಿ ರೂ. ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದ್ದು, ಈ ಮೂರು ತಿಂಗಳಲ್ಲಿ 4808 ಕೋಟಿ ರೂ. ಮೌಲ್ಯದ ಎಫ್‌ಎಂಸಿಜಿ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುರೇಶ್ ನಾರಾಯಣ್ ಕಂಪೆನಿಯ ನೇತೃತ್ವ ವಹಿಸಿದ್ದು, ಇದು ಕಂಪೆನಿಯು ಕಳೆದ 10 ವರ್ಷದ ತ್ರೈಮಾಸಿಕವೊಂದರಲ್ಲಿ ದಾಖಲಿಸಿದ ಅತ್ಯಧಿಕ ಬೆಳವಣಿಗೆಯಾಗಿದೆ.
ಏಪ್ರಿಲ್ 12ರಂದು ಕಂಪೆನಿಯು ಪ್ರತಿ ಷೇರುಗೆ 27ರೂ. ಲಾಭಾಂಶವನ್ನು ಘೋಷಿಸಿತ್ತು. ಕಂಪೆನಿಯ ಬೆಲೆಯು 20678ರೂ. ಗಿಂತ ಹೆಚ್ಚಿತ್ತು. ಸುರೇಶ್ ನಾರಾಯಣ್ ನೆಸ್ಲೆ ಕಂಪೆನಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2015ರಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಮ್ಯಾಗಿ ನೂಡಲ್ಸ್ ಬ್ರಾಂಡ್ ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಸಚಿನ್‌ಗೆ ಸಲ್ಲುತ್ತದೆ.

ನಂತರ ಅವರು ಕಂಪೆನಿಯ ಭಾರತದ ಬೃಹತ್ ವ್ಯವಹಾರದ ಉಸ್ತುವಾರಿಯನ್ನು ವಹಿಸಿಕೊಂಡರು. ಸುರೇಶ್ ಅತ್ಯಂತ ಕಠಿಣವಾದ ಎರಡು ಸವಾಲುಗಳನ್ನು ಈ ವೇಳೆ ಎದುರಿಸಿದ್ದರು. ಅವರು ಕಂಪೆನಿಯ ಬ್ರಾಂಡ್ ಇಮೇಜ್ ಅನ್ನು ಮರುಸ್ಥಾಪಿಸುವ ಜತೆಗೆ ಉದ್ಯೋಗಿಗಳಲ್ಲಿ ನೈತಿಕ ಆತ್ಮವಿಶ್ವಾಸವನ್ನು ತುಂಬಿದರು. ಆ ಮೂಲಕ ಇಂತಹ ಕಷ್ಟದ ಸವಾಲುಗಳು ದೂರವಾಗುತ್ತದೆ ಎಂಬ ನಂಬಿಕೆ ಮತ್ತು ಆತ್ಮಸ್ಥೈರ್ಯವನ್ನು ಮೂಡಿಸಿದರು.
ಹೀಗಾಗಿ, ಆ ನಂತರದಲ್ಲಿ ಕಂಪೆನಿಯು ಹಲವಾರು ಕಠಿಣ ಸವಾಲು ಎದುರಿಸಿದ್ದರೂ ಸುರೇಶ್ ನಾರಾಯಣ್ ಒಬ್ಬರು ಸ್ನೇಹಿತ, ಜ್ಞಾನಿ ಹಾಗೂ ಮಾರ್ಗದರ್ಶಿಯಾಗಿ ಕಂಪೆನಿಯ ಉದ್ಯೋಗಿಗಳ ಜತೆಗೆ ನಿಂತು ಅವುಗಳನ್ನೆಲ್ಲ ಯಶಸ್ವಿಯಾಗಿ ಎದುರಿಸುತ್ತ ಬಂದರು. ಫೋರ್ಬ್ಸ್ 2022ರ ವರದಿಯಂತೆ ಕಳೆದ ಎಂಟು ವರ್ಷಗಳಲ್ಲಿ ನೆಸ್ಲೆ ಕಂಪೆನಿಯ ಮಾರ್ಕೆಟ್ ಕ್ಯಾಪ್ ಶೇ.400ರಷ್ಟು ಏರಿಕೆ ಕಂಡಿದೆ.
ಸುರೇಶ್ ನಾರಾಯಣ್ ಅವರು ಕಂಪೆನಿಗೆ ಸೇರಿಕೊಂಡಾಗ ಮ್ಯಾಗಿ ಉತ್ಪನ್ನದ ಹೊರತಾಗಿಯೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಆಗ ಮಾರುಕಟ್ಟೆ ವಹಿವಾಟು ಕೂಡ ತೀರಾ ಕುಸಿದಿತ್ತು. ಕಂಪೆನಿಯು ಹೊಸ ಮಾದರಿಯ ಯೋಜನೆಗಳನ್ನು ಅಳವಡಿಸಿಕೊಳ್ಳುವಲ್ಲಿಯೂ ಬಹಳ ಹಿಂದುಳಿದಿತ್ತು. ಹೀಗಾಗಿ, ಅವರು ಕಂಪೆನಿಯ ನಾಯಕರಲ್ಲಿ ಬೆಳವಣಿಗೆಯತ್ತ ಯೋಚಿಸುವ ಮೂಲಕ ಉದ್ಯಮದ ವಹಿವಾಟು ಹೆಚ್ಚಿಸುವತ್ತ ಗಮನಹರಿಸುವಂತೆ ಮನವಿ ಮಾಡಿದ್ದರು.
ಇದರ ಪರಿಣಾಮವಾಗಿ ಕಂಪೆನಿಯು ಕಳೆದ ಎಂಟು ವರ್ಷಗಳಲ್ಲಿ ಹಲವು ವಿನೂತನ ಆವಿಷ್ಕಾರಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಆ ಪೈಕಿ ಹಳೇ ಮಾದರಿಯ ಮ್ಯಾಗಿ ರೂಪಗಳನ್ನು ಪರಿಚಯಿಸಿರುವುದು ಕೂಡ ಸೇರಿಕೊಂಡಿದೆ. ಜತೆಗೆ, ಓಟ್ ಫ್ಲೆಕ್ಸ್, ನೆಸ್ಕೆಫ್ ಬ್ಲ್ಯಾಕ್ ರೋಸ್ಟ್ ಮತ್ತು ಚಿಕನ್65 ಮಸಾಲಾ ನೂಡಲ್ಸ್‌ನಂಥಹ ಉತ್ಪನ್ನಗಳನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದರು.
ವರದಿಗಳ ಪ್ರಕಾರ, ಅವರು ಉತ್ಪನ್ನಗಳ ಉತ್ಪಾದನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡರು. ಜತೆಗೆ ಅವರು ಡೇಟಾ ಆಧಾರಿತ ನಿರ್ಧಾರಗಳನ್ನು ಪರಿಚಯಿಸಿದರು. ಅಲ್ಲದೆ ಆಡಳಿತ ವ್ಯವಸ್ಥೆಯಲ್ಲಿಯೂ ಹುದ್ದೆ ಆಧಾರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ದೂರ ಮಾಡಿದರು. ಆ ಮೂಲಕ ಕಂಪೆನಿಯ ಪ್ರತಿಯೊಬ್ಬರ ಐಡಿಯಾಗಳಿಗೂ ಮನ್ನಣೆಯನ್ನು ನೀಡುವ ಸಂಪ್ರದಾಯ ಹುಟ್ಟು ಹಾಕಿದರು.
2019ರಲ್ಲಿ ಕಂಪೆನಿಯು ಮಿಡಾಸ್ ಪ್ರಾಜೆಕ್ಟ್ ಅನ್ನು ಅಳವಡಿಸಿಕೊಂಡಿತು. ಅದರಡಿಯಲ್ಲಿ ಕಂಪೆನಿಯು ಭೌಗೋಳಿಕ ಕೇಂದ್ರಿತ ಡೇಟಾಕ್ಕೆ ಅನುಗುಣವಾಗಿ ಆವಿಷ್ಕಾರಗಳನ್ನು ಮಾಡುವ ಮೂಲಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲಾಯಿತು. ಈ ರೀತಿ ಡೇಟಾವನ್ನು ಬಳಸಿಕೊಂಡು ಕಂಪೆನಿಯು ಇದೀಗ ನಗರಗಳು, ನಿಗದಿತ ಪ್ರದೇಶ, ಮನೆಗಳು ಹಾಗೂ ಔಟ್‌ಲೆಟ್‌ಗಳನ್ನು ಡೆಮಾಗ್ರಾಫಿಕ್ ಆಗಿ ತಲುಪುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಷ್ಟೇಅಲ್ಲ, ಸುರೇಶ್ ನಾರಾಯಣ್ ನೇತೃತ್ವದಲ್ಲಿ ಕಂಪೆನಿಯು ತನ್ನ ಉತ್ಪನ್ನ ವಿತರಣಾ ವ್ಯವಸ್ಥೆಯನ್ನು ಕೂಡ ಸಾಕಷ್ಟು ಅಭಿವೃದ್ಧಿಪಡಿಸಿದೆ.
ನೆಸ್ಲೆ ಕಂಪೆನಿಯೊಳಗೆ ಸುರೇಶ್ ಅವರು ಒಬ್ಬ ಜನಪರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.ಸುರೇಶ್ ಅವರು 1981ರಲ್ಲಿ ದಿಲ್ಲಿ ಸ್ಕೂಲ್ ಆಪ್ ಎಕನಾಮಿಕ್ಸ್‌ನಿಂದ ಎಂಎ ಪದವಿ ಪಡೆದುಕೊಂಡಿದ್ದಾರೆ. ಆ ಮೂಲಕ ಐಐಎಂನಿಂದ ಎಂಬಿಎ ಅಥವಾ ಐಐಟಿನಿಂದ ಎಂಜಿನಿಯರಿಂಗ್ ಪದವಿ ಪಡೆಯದೆಯೂ ಬಿಸಿನೆಸ್ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
2021ರಲ್ಲಿ ಸುರೇಶ್ ಅವರು 18.8 ಕೋಟಿ ರೂ.ಗಳ ವೇತನ ಪ್ಯಾಕೇಜ್ ಹೊಂದಿದ್ದರು. 2020ಕ್ಕೆ ಹೋಲಿಸಿದರೆ ಅವರ ವೇತನದಲ್ಲಿ ಶೇ.9.3ರಷ್ಟು ಏರಿಕೆ ಕಂಡಿತ್ತು. 2020ರಲ್ಲಿ ಅವರು ಭಾರತದಲ್ಲಿ ಅತಿಹೆಚ್ಚು ವೇತನ ಪಡೆಯುವ ಎಕ್ಸಿಕ್ಯೂಟೀವ್ ಆಗಿದ್ದರು. ಸುರೇಶ್ ಅವರು 1999ರಲ್ಲಿ ನೆಸ್ಲೆ ಕಂಪೆನಿ ಸೇರಿದ್ದರು. ಅದಕ್ಕೂ ಮೊದಲು ಅವರು ಹಿಂದೂಸ್ತಾನ್ ಲಿವರ್ ಹಾಗೂ ಕೋಲ್ಗೇಟ್ ಪಾಮೊಲೀವ್‌ನಲ್ಲಿ ಕೆಲಸ ಮಾಡುತ್ತಿದ್ದರು.


Click it and Unblock the Notifications