ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರ್ಥಿಕ ಅಪರಾಧಿಗಳೆಂದು ಘೋಷಿತರಾಗಿರುವ ದೇಶದಿಂದ ಪರಾರಿಯಾಗಿರುವ ಆರೋಪಿಗಳಿಂದ 15,113 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಹಾಗೆಯೇ ಆರ್ಥಿಕ ಅಪರಾಧಿಗಳೆಂದು ಘೋಷಿತರಾಗಿರುವ ದೇಶದಿಂದ ಪರಾರಿಯಾಗಿರುವ ಹತ್ತು ಮಂದಿಯ ವಿವರವನ್ನು ಸರ್ಕಾರವು ನೀಡಿದೆ.
ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ ಹತ್ತು ಮಂದಿಯನ್ನು ಎಫ್‌ಇಒಗಳು ಎಂದು ಕೋರ್ಟ್ ಘೋಷಿಸಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದೆ.

2018 ರಿಂದ ಕೋರ್ಟ್‌ಗಳು ಘೋಷಿಸಿದ 10 ಪರಾರಿಯಾದ ಆರ್ಥಿಕ ಅಪರಾಧಿಗಳು
ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ ಮತ್ತು ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ: ನಿತಿನ್ ಸಂದೇಸರ, ಚೇತನ್ ಸಂದೇಸರ, ದೀಪ್ತಿ ಸಂದೇಸರಾ, ಮತ್ತು ಹಿತೇಶ್ ಪಟೇಲ್ ಭಾರತ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯಾದ ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ವಂಚನೆ ಮತ್ತು ಮನಿ ಲಾಂಡರಿಂಗ್ ಒಳಗೊಂಡ ಪ್ರಮುಖ ಹಣಕಾಸು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.
ಕಂಪನಿ ಮತ್ತು ಅದರ ನಿರ್ದೇಶಕರು ಸಾಲ ಮರುಪಾವತಿ ಮಾಡಿಲ್ಲ, ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇವರಿಂದಾಗಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗಿದೆ. ಸ್ಟರ್ಲಿಂಗ್ ಬಯೋಟೆಕ್‌ನ ನಿರ್ದೇಶಕರಾದ ನಿತಿನ್ ಜಯಂತಿಲಾಲ್ ಸಂದೇಸರ ಕಂಪನಿ ಬ್ಯಾಂಕ್‌ಗಳಿಗೆ 5,000 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸದೆ ವಿವಾದದಲ್ಲಿ ಸಿಲುಕಿದ್ದಾರೆ.
ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್: ಸ್ಟರ್ಲಿಂಗ್ ಬಯೋಟೆಕ್ ಮತ್ತು ಸಂದೇಸರಾ ಗ್ರೂಪ್ ಒಳಗೊಂಡ 8,100 ಕೋಟಿ ರೂಪಾಯಿ ಬ್ಯಾಂಕ್ ವಂಚನೆಯಲ್ಲಿ ಪರಾರಿಯಾದ ಉದ್ಯಮಿಗಳಲ್ಲಿ ಹಿತೇಶ್ ನರೇಂದ್ರಭಾಯ್ ಪಟೇಲ್ ಕೂಡಾ ಒಬ್ಬರಾಗಿದ್ದಾರೆ. ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ವಂಚನೆ ಮಾಡುವ ಉದ್ದೇಶದಿಂದಲೇ ಬೇನಾಮಿ ಸಂಸ್ಥೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ವಿಜಯ್ ಮಲ್ಯ: ಭಾರತೀಯ ಉದ್ಯಮಿ ಮತ್ತು ಮಾಜಿ ಸಂಸದ ವಿಜಯ್ ಮಲ್ಯ ಯುನೈಟೆಡ್ ಬ್ರೂವರೀಸ್ ಗ್ರೂಪ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದರು. ತಂದೆಯ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುತ್ತಾ ಬಂದ ಮಲ್ಯ, ಅದನ್ನು ಯಶಸ್ವಿಯಾಗಿ ವಿಸ್ತರಿಸಿದರು. ಆದರೆ 2010 ರ ದಶಕದ ಮಧ್ಯಭಾಗದಲ್ಲಿ, ಹಣಕಾಸಿನ ದುರುಪಯೋಗದ ಆರೋಪಗಳು ಮಲ್ಯ ವಿರುದ್ಧ ಕೇಳಿಬಂದಿದೆ. 2016 ರಲ್ಲಿ ಭಾರತದಿಂದ ಪರಾರಿಯಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿದ್ದಾರೆ.
ನೀರವ್ ಮೋದಿ: ಭಾರತೀಯ ಆಭರಣ ವ್ಯಾಪಾರಿ ಮತ್ತು ವಾಣಿಜ್ಯೋದ್ಯಮಿ ನೀರವ್ ಮೋದಿ ತನ್ನ ಜ್ಯುವೆಲ್ಲರಿ ಬ್ರ್ಯಾಂಡ್ ಆದ ನೀರವ್ ಮೋದಿ ಬ್ರ್ಯಾಂಡ್ ಸಂಸ್ಥಾಪಕರಾಗಿದ್ದಾರೆ. 2018 ರಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನೀರವ್ ಮೋದಿ ಭಾರೀ ವಂಚನೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ. ನೀರವ್ ಮೋದಿ ಮತ್ತು ಇತರರು ಬ್ಯಾಂಕ್ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವಂಚನೆಯಿಂದ ಸಾಲ ಪಡೆದಿದ್ದಾರೆ ಎಂಬ ಆರೋಪವಿದೆ. 2018 ರ ಆರಂಭದಲ್ಲಿ ಭಾರತದಿಂದ ಯುಕೆಗೆ ಮೋದಿ ಪರಾರಿಯಾಗಿದ್ದಾರೆ.
ಆಸಿಫ್ ಇಕ್ಬಾಲ್ ಮೆನನ್ ಮತ್ತು ಜುನೈದ್ ಇಕ್ಬಾಲ್ ಮೆನನ್ (ದಿವಂಗತ ಇಕ್ಬಾಲ್ ಮಿರ್ಚ್ ಅವರ ಕುಟುಂಬ): ಆಸಿಫ್ ಇಕ್ಬಾಲ್ ಮೆನನ್, ಜುನೈದ್ ಇಕ್ಬಾಲ್ ಮೆನನ್ ಮತ್ತು ಹಜ್ರಾ ಇಕ್ಬಾಲ್ ಮೆನನ್ ಕುಖ್ಯಾತ ಭೂಗತ ಪಾತಕಿ ದಿವಂಗತ ಇಕ್ಬಾಲ್ ಮಿರ್ಚಿಯ ಕುಟುಂಬ ಸದಸ್ಯರಾಗಿದ್ದಾರೆ. ಇಕ್ಬಾಲ್ ಮಿರ್ಚಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿಕಟವರ್ತಿಯಾಗಿದ್ದ. 2013 ರಲ್ಲಿ ಇಕ್ಬಾಲ್ ಮಿರ್ಚಿ ಮರಣದ ನಂತರ, ಈ ಕುಟುಂಬ ನಿ ಲಾಂಡರಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪವಿದೆ.
ಹಜ್ರಾ ಇಕ್ಬಾಲ್ ಮೆಮನ್: 2013ರಲ್ಲಿ ಮೃತಪಟ್ಟ ಕುಖ್ಯಾತ ಭೂಗತ ಪಾತಕಿ ಇಕ್ಬಾಲ್ ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ ಮೆಮನ್. ಆಕೆ ಹಾಗೂ ಆಕೆಯ ಮಕ್ಕಳು 2021 ರಲ್ಲಿ ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿಗಳು ಎಂದು ಘೋಷಿಸಲ್ಪಟ್ಟಿದ್ದಾರೆ. ಮುಂಬೈನಾದ್ಯಂತ ರಿಯಲ್ ಎಸ್ಟೇಟ್ ಖರೀದಿಸಲು ಅಕ್ರಮವಾಗಿ ಪಡೆದ ಹಣವನ್ನು ಬಳಸಿದ ಆರೋಪವನ್ನು ಈ ಕುಟುಂಬ ಹೊಂದಿದೆ. ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಎಲ್ಲಿ ಎಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ.
ರಾಮಚಂದ್ರನ್ ವಿಶ್ವನಾಥನ್: ಭಾರತೀಯ ಮೂಲದ ಉದ್ಯಮಿ, ದೇವಾಸ್ ಮಲ್ಟಿಮೀಡಿಯಾದ ಸಂಸ್ಥಾಪಕ ರಾಮಚಂದ್ರನ್ ವಿಶ್ವನಾಥನ್ ಕಂಪನಿಯ ಆದಾಯವನ್ನು ವೈಯಕ್ತಿಕ ಲಾಭಕ್ಕಾಗಿ ಬೇರೆಡೆ ವರ್ಗಾವಣೆ ಮಾಡಿ ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿಯಾಗಿದ್ದಾರೆ. 2005 ರಲ್ಲಿ ಇಸ್ರೋ ಜೊತೆಗಿನ ಒಪ್ಪಂದದ ನಂತರ ವಿಶ್ವನಾಥನ್ ಮತ್ತು ಇತರ ಎಂಟು ಮಂದಿ ಸ್ಟಾರ್ಟಪ್‌ನ ವಿದೇಶಿ ನೇರ ಹೂಡಿಕೆಯ ಶೇಕಡ 85ರಷ್ಟು ಯುಎಸ್‌ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪವಿದೆ.


Click it and Unblock the Notifications