ವಿಯೆಟ್ನಾಂನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬಿಲಿಯನೇರ್ ಫಾಮ್ ನಾತ್ ವುವಾಂಗ್ ಅವರ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯಾದ ವಿನ್‌ಫಾಸ್ಟ್ ಆಟೊ ಆಗಸ್ಟ್ 15ರಂದು ಪಬ್ಲಿಕ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಒಂದೇ ದಿನದಲ್ಲಿ 39 ಶತಕೋಟಿ ಡಾಲರ್ (3 ಲಕ್ಷ ಕೋಟಿ ರೂಪಾಯಿ) ಅನ್ನು ಗಳಿಸಿದೆ.
ವಿನ್‌ಫಾಸ್ಟ್ ಆಟೊದ ಮಾರ್ಕೆಟ್ ಕ್ಯಾಪಿಟಲ್ ಈ ಉದ್ಯಮ ಕ್ಷೇತ್ರದ ದೈತ್ಯ ಕಂಪನಿಗಳಾದ ಜನರಲ್ ಮೋಟಾರ್ಸ್ ಕಂ ಮತ್ತು ಮರ್ಸಿಡಿಸ್-ಬೆನ್ಜ್ ಗ್ರೂಪ್‌ನ ಎಜಿಯನ್ನು ಮೀರಿಸಿದೆ. ಕಂಪನಿಯ ಷೇರು ಕೂಡ ಶೇಕಡ 255 ಜಿಗಿತ ಕಂಡಿದ್ದು, ಫಾಮ್ ನಾತ್ ವುವಾಂಗ್ ಅವರ ಸಂಪತ್ತನ್ನು 44.3 ಶತಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಿಸಿರುವುದಾಗಿ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಹೇಳಿದೆ.

ಫಾಮ್ ನಾತ್ ವುವಾಂಗ್ ಅವರು ಕಂಪನಿಯ ಶೇ.99 ಷೇರನ್ನು ನಿಯಂತ್ರಿಸುತ್ತಿದ್ದು, ಕಂಪನಿಯಲ್ಲಿ ಅವರ ಹೆಚ್ಚಿನ ಪಾಲು ವಿನ್‌ಗ್ರೂಪ್ ಜೆಎಸ್‌ಸಿ ಮೂಲಕ ಬರುತ್ತದೆ. ವಿನ್‌ಫಾಸ್ಟ್ ಆಟೋವನ್ನು 2017ರಲ್ಲಿ ಸ್ಥಾಪಿಸಲಾಗಿದ್ದು, ಈ ವರ್ಷ ಕಂಪನಿಯ ಮಾರಾಟವು 45,000ರಿಂದ 50,000 ತಲುಪುವ ನಿರೀಕ್ಷೆಯಿದೆ.
ವುವಾಂಗ್ ಅವರು 2023ರ ಜುಲೈನಲ್ಲಿ ಕಂಪನಿಗಾಗಿ ಫ್ಯಾಕ್ಟರಿಯೊಂದನ್ನು ಉತ್ತರ ಕೆರೊಲಿನಾದಲ್ಲಿ ಸ್ಥಾಪಿಸಿದ್ದಾರೆ. ವರದಿಗಳ ಪ್ರಕರ, ವುವಾಂಗ್ ಹಾಗೂ ಅವರ ಸಂಬಂಧಿಕರು ಕಂಪನಿಯಲ್ಲಿ ಸುಮಾರು 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದಾರೆ.
ವುವಾಂಗ್ ಅವರು 1968ರ ಆಗಸ್ಟ್ 5ರಂದು ಜನಿಸಿದ್ದು, ವಿಯೆಟ್ನಾಂನ ಮೊದಲ ಬಿಲಿಯನೇರ್ ಕೂಡ ಆಗಿದ್ದಾರೆ. ಅವರ ತಂದೆಯು ವಿಯೆಟ್ನಾಂ ಸೇನೆಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ತಾಯಿಯು ಟೀ ಅಂಗಡಿಯನ್ನು ಹೊಂದಿದ್ದರು. ಇಲ್ಲಿನ ಹನೋಯಿಯಲ್ಲಿ ಜನಿಸಿದ್ದ ವುವಾಂಗ್ ಅವರು 1985ರಲ್ಲಿ ಕಿಮ್ ಲಿಯನ್ ಹೈಸ್ಕೂಲ್‌ನಿಂದ ಪ್ರಾಥಮಿಕ ಶಿಕ್ಷಣ ಪಡೆದರು.
1987ರಲ್ಲಿ ಅವರು ಮಾಸ್ಕೋ ಜಿಯೋಲಾಜಿಕಲ್ ಪ್ರಾಸ್ಪೆಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡು ಹೆಚ್ಚಿನ ಅಧ್ಯಯನಕ್ಕಾಗಿ ರಷ್ಯಾಕ್ಕೆ ತೆರಳಿದ್ದರು. 1992ರಲ್ಲಿ ಅಲ್ಲಿ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ವುವಾಂಗ್ ಅವರು ಪದವಿಯ ನಂತರ ಫಾಮ್ ಥು ಹೋಂಗ್ ಅವರನ್ನು ವಿವಾಹವಾದರು.
ನಂತರ ಉಕ್ರೇನ್‌ನ ಖಾರ್ಕಿವ್‌ಗೆ ತೆರಳಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಫಾಮ್ ನಾತ್ ಕ್ವಾನ್ ಆನ್ ಅವರು ವಿನ್‌ಪರ್ಲ್ ಕಂಪನಿ ಲಿಮಿಟೆಡ್‌ನ ಪ್ರಸ್ತುತ ಡೆಪ್ಯುಟಿ ಜನರಲ್ ಆಗಿದ್ದಾರೆ. ಫಾಮ್ ನಾತ್ ಮಿನ್ ಹಾಂಗ್ ಹಾಗೂ ಫಾಮ್ ನಾತ್ ಮಿನ್ ಆನ್ ವುವಾಂಗ್ ಅವರು ರೆಸ್ಟೊರೆಂಟ್ ಅನ್ನು ಸ್ಥಾಪಿಸುವ ಮೂಲಕ ತಮ್ಮ ಉದ್ಯಮ ವೃತ್ತಿಯನ್ನು ಪ್ರಾರಂಭಿಸಿದ್ದಾರೆ.


Click it and Unblock the Notifications