ಥಾಮಸ್ ಕುರಿಯನ್ ಅವರು 1966ರಲ್ಲಿ ಪಿಸಿ ಕುರಿಯನ್ ಹಾಗೂ ಮೋಳಿ ದಂಪತಿ ಮಗನಾಗಿ ಜನಿಸಿದ್ದು, ವಿಶ್ವದ ಅತ್ಯಂತ ಯಶಸ್ವಿ ಭಾರತೀಯ ಕಾರ್ಯನಿರ್ವಾಹಕರ ಪೈಕಿ ಒಬ್ಬರಾಗಿದ್ದಾರೆ. ಅವರು 2018ರಿಂದ ಗೂಗಲ್ ಕ್ಲೌಡ್‌ನ ಸಿಇಒ ಆಗಿದ್ದಾರೆ. ಅಷ್ಟೇಅಲ್ಲ ಅವರು ಭಾರತದ ಎರಡನೇ ಶ್ರೀಮಂತ ಎಕ್ಸಿಕ್ಯೂಟೀವ್ ಆಗಿದ್ದು, ಅವರ ನಿವ್ವಳ ಆಸ್ತಿ ಮೌಲ್ಯವು ಅವರ ಬಾಸ್ ಸುಂದರ್ ಪಿಚ್ಚೈಗಿಂತ ಎರಡು ಪಟ್ಟು ಹೆಚ್ಚು ಇದೆ.
ಅವರ ಅವಳಿ ಸಹೋದರ ಜಾರ್ಜ್ ಕುರಿಯನ್ 2015ರಿಂದ ನೆಟ್‌ಆಪ್‌ನ ಸಿಇಒ ಆಗಿದ್ದಾರೆ. ಥಾಮಸ್ ಕುರಿಯನ್ ಅವರ ತಂದೆ ಕೆಮಿಕಲ್ ಎಂಜಿನಿಯರ್ ಆಗಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ಮಾಡಿದ್ದರು. ಇಬ್ಬರು ಮಕ್ಕಳು ಕೂಡ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.

ಅದಾಗ್ಯೂ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರಿಂದ ಇಬ್ಬರೂ ಐಐಟಿ ಮದ್ರಾಸ್‌ಗೆ ಹೋಗುವುದನ್ನು ಕೈಬಿಟ್ಟಿದ್ದರು. 16ನೇ ವಯಸ್ಸಿಗೆ ಅವರು ಅಮೆರಿಕಾಗೆ ತೆರಳಿದ್ದರು. ಥಾಮಸ್ ಕುರಿಯನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದರು. ಆ ಬಳಿಕ ಅವರು ಸ್ಟ್ಯಾನ್‌ಫೋರ್ಡ್ ಗ್ರಾಜ್ಯುಯೇಟ್ ಸ್ಕೂಲ್ ಆಪ್ ಬಿಸಿನೆಸ್‌ನಿಂದ ಎಂಬಿಎ ಮಾಡಿದರು.
ಕುರಿಯನ್ ಅವರು ತಮ್ಮ ಮೊದಲ ಉದ್ಯೋಗವನ್ನು ಮೆಕಿನ್ಸೆ ಅಂಡ್ ಕಂಪನಿಯಲ್ಲಿ ಪ್ರಾರಂಭಿಸಿದ್ದರು. ಅಲ್ಲಿ ಅವರು ಸುಮಾರು ಆರು ವರ್ಷಗಳ ಕಾಲ ಕಂಪೆನಿ ಜತೆಗೆ ಇದ್ದರು. ಅಲ್ಲಿ ಅವರು ಸಿಇಒಗಳೊಂದಿಗೆ ಕೆಲಸ ಮಾಡುವ ಸಲಹಾ ತಂಡವನ್ನು ಮುನ್ನಡೆಸಿದರು. ಅಲ್ಲದೆ ಫೈನಾನ್ಶಿಯಲ್ ಸರ್ವೀಸ್, ಟೆಲಿಕಮ್ಯೂನಿಕೇಷನ್ ಮುಂತಾದ ಡೊಮೈನ್‌ಗಳಲ್ಲಿ ಕೆಲಸ ಮಾಡಿದರು.
1996ರಲ್ಲಿ ಅವರು ಒರಾಕೆಲ್‌ಗೆ ಸೇರಿದ್ದು, ಅಲ್ಲಿ ಅವರು 22 ವರ್ಷಗಳ ಕಾಲ ಕೆಲಸ ಮಾಡಿದ್ದರು. ಒರಾಕೆಲ್‌ನಲ್ಲಿ ಅವರು ಜಗತ್ತಿನಾದ್ಯಂತ 32 ದೇಶಗಳ 35,000 ಮಂದಿಯ ತಂಡವನ್ನು ಮುನ್ನಡೆಸಿದ್ದರು. ಅಲ್ಲಿ ಕಂಪೆನಿಯ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 2018ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಆ ಬಳಿಕ ಅವರು ಗೂಗಲ್ ಕಂಪೆನಿಗೆ ಸಿಇಒ ಆಗಿ ಸೇರಿದರು.
ಗೂಗಲ್ ಕ್ಲೌಡ್ ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಕುರಿಯನ್ ಅವರಿಗೆ ಸಲ್ಲುತ್ತದೆ. ಅವರು ಕಂಪೆನಿಯ ತಂತ್ರಗಾರಿಕೆಯನ್ನು ಬದಲಿಸುವ ಮೂಲಕ ಗ್ರಾಹಕ ಸೇವೆಗಳತ್ತ ಹೆಚ್ಚಿನ ಗಮನವನ್ನು ಹರಿಸಿದರು. ಥಾಮಸ್ ಕುರಿಯನ್ ಹೆಚ್ಚಿನ ಸಂಖ್ಯೆಯ ಸೇಲ್ಸ್ ವ್ಯಕ್ತಿಗಳು, ತಾಂತ್ರಿಕ ಪರಿಣತರು ಹಾಗೂ ನುರಿತ ತಜ್ಞರನ್ನು ನೇಮಿಸಿಕೊಂಡರು. ಅಷ್ಟೇಅಲ್ಲ ಕ್ಲೌಡ್ ಸೇವೆಯನ್ನು ಕೈಗಾರಿಕೆಗಳಿಗೂ ವಿಸ್ತರಿಸಿದರು.
ಜತೆಗೆ ಅವರು ಕಂಪೆನಿಗಳಿಗೆ ಬೇರೆ ಬೇರೆ ಕ್ಲೌಡ್‌ನಲ್ಲಿರುವ ತಮ್ಮ ಡೇಟಾವನ್ನು ನಿರ್ವಹಣೆ ಮಾಡುವುದಕ್ಕೆ ಆಂಥೋಸ್ ಎನ್ನುವ ಹೊಸ ಪ್ಲಾಟ್‌ಫಾರಂ ಅನ್ನು ಪ್ರಾರಂಭಿಸಿದರು.
ಒರಾಕೆಲ್‌ನಲ್ಲಿ ಅವರು ವಾರ್ಷಿಕ 35 ಮಿಲಿಯನ್ ಆದಾಯ ಗಳಿಸುವ ಪ್ರಾಡೆಕ್ಟ್‌ಗಳನ್ನು ಅಭಿವೃದ್ಧಿಪಡಿಸಿದರು. ಅವರ ನೇತೃತ್ವದಲ್ಲಿ ಕಂಪೆನಿಯ ಕ್ಲೌಡ್ ಆದಾಯವು 5.5 ಬಿಲಿಯನ್ ಡಾಲರ್ ಆಗಿತ್ತು. ಅಷ್ಟೇಅಲ್ಲ 250 ಬಲಿಷ್ಠ ಸೇಲ್ಸ್ ಟೀಂ ಅನ್ನು ಕೂಡ ಮುನ್ನಡೆಸುತ್ತಿದ್ದರು.
ಕುರಿಯನ್ ಅವರು ಈಗ ಜಗತ್ತಿನ ಅತ್ಯಂತ ಶ್ರೀಮಂತ ಮ್ಯಾನೇಜರ್ ಆಗಿದ್ದಾರೆ. ಐಐಎಫ್‌ಎಲ್ ಹುರುನ್ ಇಂಡಿಯಾ ಲಿಸ್ಟ್ ಪ್ರಕಾರ 2022ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರ ನಿವ್ವಳ ಆಸ್ತಿ ಮೌಲ್ಯ 5300 ಕೋಟಿ ರೂಪಾಯಿ ಅಡೋಬ್ ಸಿಇಒ ಶಾಂತನು ನಾರಾಯಣ್ ಅವರ ನಿವ್ವಳ ಆಸ್ತಿ ಮೌಲ್ಯ 3800 ಕೋಟಿ ರೂಪಾಯಿ ಆಗಿದೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ನಿವ್ವಳ ಆಸ್ತಿ ಮೌಲ್ಯ 6200 ಕೋಟಿ ರೂ. ಆಗಿದೆ. ಆದರೆ ಥಾಮಸ್ ಕುರಿಯನ್ ಅವರ ನಿವ್ವಳ ಆಸ್ತಿ ಮೌಲ್ಯ 12,100 ಕೋಟಿ ರೂಪಾಯಿ ಆಗಿದೆ. ಅವರು ಅರಿಸ್ಟಾ ನೆಟ್‌ವರ್ಕ್‌ನ ಜಯಶ್ರೀ ಉಳ್ಳಾಲ್ ನಂತರದ ಸ್ಥಾನದಲ್ಲಿದ್ದಾರೆ.


Click it and Unblock the Notifications