ಭಾರತದ 'ಟ್ರಾಕ್ಟರ್ ಕ್ವೀನ್' ಎಂದು ಕರೆಯಲ್ಪಡುವ ಮಲ್ಲಿಕಾ ಶ್ರೀನಿವಾಸನ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಜತೆಗೆ ಬಹುಕೋಟಿ ಉತ್ಪಾದನಾ ಸಾಮ್ರಾಜ್ಯದಲ್ಲಿ ಕಂಡು ಬರುವ ಕೆಲವೇ ಮಹಿಳಾ ಕೈಗಾರಿಕೋದ್ಯಮಿಗಳ ಪೈಕಿ ಒಬ್ಬರು. ಶ್ರೀನಿವಾಸನ್ ಅವರು ಟಿಎಎಫ್‌ಇನ (ಟ್ರಾಕ್ಟರ್ಸ್ ಮತ್ತು ಫಾರ್ಮ್ ಇಕ್ವಿಪ್‌ಮೆಂಟ್ ಲಿಮಿಟೆಡ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಮಾರಾಟ ಹಾಗೂ ಆದಾಯ ಗಳಿಕೆ ಪ್ರಮಾಣದಲ್ಲಿ ಇದು ಮಹೀಂದ್ರಾ ಟ್ರಾಕ್ಟರ್‌ಗಳ ನಂತರ ಭಾರತದ ಎರಡನೇಯ ಅತಿದೊಡ್ಡ ಟ್ರಾಕ್ಟರ್ ಕಂಪನಿ ಟ್ರಾಕ್ಟರ್ಸ್ ಮತ್ತು ಫಾರ್ಮ್ ಇಕ್ವಿಪ್‌ಮೆಂಟ್ ಲಿಮಿಟೆಡ್ ಆಗಿದೆ. 1959ರಲ್ಲಿ ಜನಿಸಿದ ಮಲ್ಲಿಕಾ ಶ್ರೀನಿವಾಸನ್ ಅವರು ಕಲಿಕೆಯಲ್ಲಿ ಮುಂದಿದ್ದ ವಿದ್ಯಾರ್ಥಿನಿಯಾಗಿದ್ದರು.

ಯುಎಸ್‌ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಅದಕ್ಕೂ ಮೊದಲು ಮಲ್ಲಿಕಾ ಶ್ರೀನಿವಾಸನ್ ಹೆಚ್ಚಿನ ಶಿಕ್ಷಣವನ್ನು ಮದ್ರಾಸ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದಾರೆ. 1986ರಲ್ಲಿ ಮಲ್ಲಿಕಾ ಶ್ರೀನಿವಾಸನ್ ಕೈಗಾರಿಕೋದ್ಯಮಿ ಎಸ್. ಅನಂತರಾಮಕೃಷ್ಣನ್ ಸ್ಥಾಪಿಸಿದ್ದ ತಮ್ಮ ಕುಟುಂಬದ ಬಿಸಿನೆಸ್‌ನಲ್ಲಿ ಸೇರಿಕೊಂಡಿದ್ದರು. ಅನಂತರಾಮಕೃಷ್ಣನ್ ಅವರು ಚೆನ್ನೈ ಅನ್ನು 'ಡೆಟ್ರಾಯಿಟ್ ಆಫ್ ಇಂಡಿಯಾ' ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದ ವ್ಯಕ್ತಿ ಎಂದರೆ ತಪ್ಪಾಗಲಾರದು.
ಉನ್ನತ ಶ್ರೇಯಾಂಕಗಳನ್ನು ಏರುವ ಮೂಲಕ ಮಲ್ಲಿಕಾ ಅವರು ಟಿಎಎಫ್‌ಇನಲ್ಲಿ ಪ್ರಮುಖ ತಂತ್ರಜ್ಞಾನ ಬದಲಾವಣೆಯ ನೇತೃತ್ವವನ್ನು ವಹಿಸಿಕೊಂಡರು. 64 ವರ್ಷದ ಅವರು ಕಂಪೆನಿಯನ್ನು 10,000 ಕೋಟಿ ರೂಪಾಯಿ ವಹಿವಾಟಿನೊಂದಿಗೆ ಜಗತ್ತಿನಲ್ಲಿ ಅತಿದೊಡ್ಡ ಟ್ರಾಕ್ಟರ್ ಉತ್ಪಾದಿಸುವ ಕಂಪನಿಯಾಗಿ ಬೆಳೆಸಿದರು.
ಮಲ್ಲಿಕಾ ಅವರ ನಾಯಕತ್ವದಲ್ಲಿ TAFE ಕಂಪೆನಿಯು ಪ್ರಮುಖ ಸ್ವಾಧೀನ ಪ್ರಕ್ರಿಯೆಗಳನ್ನು ನಡೆಸಿದೆ. 2022ರಲ್ಲಿ 400 ಕೋಟಿಗಳ ಫ್ರೆಂಚ್ ಸಂಸ್ಥೆ Faureciaದ ಭಾರತದ ವ್ಯಾಪಾರವನ್ನು ಹಾಗೂ 2018ರಲ್ಲಿ ಐಕಾನಿಕ್ ಸರ್ಬಿಯನ್ ಟ್ರಾಕ್ಟರ್ ಬ್ರಾಂಡ್ ಇಂಡಸ್ಟ್ರೀಜಾ ಮಸಿನಾ ಐ ಟ್ರಾಕ್ಟೋರಾ (ಐಎಂಟಿ) ಅನ್ನು ಖರೀದಿಸುವ ಒಪ್ಪಂದದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರು ಟಿಎಎಫ್‌ನ ಸಾಮರ್ಥ್ಯವನ್ನು ಯುಎಸ್‌ಎ ಆಗ್ರೋ ಉಪಕರಣಗಳ ದೈತ್ಯ ಎಜಿಸಿಒ ಜತೆ ಸೇರಿ ಹೆಚ್ಚಿಸಿಕೊಂಡಿದ್ದಾರೆ. ಅದು ಜನಪ್ರಿಯ ಮಾಸ್ಸೆ ಫರ್ಗುಸನ್ ಟ್ರಾಕ್ಟರ್‌ಗಳನ್ನು ಮಾರಾಟ ಮಾಡುತ್ತದೆ.
ಪ್ರಬುದ್ಧ ಕೈಗಾರಿಕೋದ್ಯಮಿಯಾಗಿ ಮಲ್ಲಿಕಾ ಶ್ರೀನಿವಾಸನ್ ಅವರು ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಆಡಳಿತ ಮಂಡಳಿ, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ಕಾರ್ಯನಿವಾರ್ಹಕ ಮಂಡಳಿ, ಎಜಿಸಿಒ, ಟಾಟಾ ಸ್ಟೀಲ್ ಮತ್ತು ಟಾಟಾ ಗ್ಲೋಬಲ್ ಬೆವರೇಜಸ್‌ನಂಥಹ ದೊಡ್ಡ ಸಂಸ್ಥೆಗಳಲ್ಲಿಯೂ ಭಾಗಿಯಾಗಿದ್ದಾರೆ. ಅವರು ಇತ್ತೀಚೆಗೆ ಬಿಲಿಯನ್ ಡಾಲರ್ ಸ್ಟಾರ್ಟಪ್ ಸ್ವಿಗ್ಗಿಯ ಆಡಳಿತ ಮಂಡಳಿಯಲ್ಲಿಯೂ ಸೇರಿಕೊಂಡಿದ್ದಾರೆ.
ಮಲ್ಲಿಕಾ ಶ್ರೀನಿವಾಸನ್ ಅವರು ಅಮಲ್‌ಗೆಮೇಶನ್ಸ್ ಕುಟುಂಬದ ಸದಸ್ಯರಾಗಿದ್ದಾರೆ. ಇದು ದಕ್ಷಿಣ ಭಾರತದ ಪ್ರಮುಖ ವ್ಯಾಪಾರಸ್ಥರ ಕುಲವಾಗಿದ್ದು, ಅವರ ನಿವ್ವಳ ಲಾಭ $3.4 ಬಿಲಿಯನ್ ಆಗಿತ್ತು. ಮಲ್ಲಿಕಾ ಶ್ರೀನಿವಾಸನ್ ಅವರ ಪತಿ ವೇಣು ಶ್ರೀನಿವಾಸನ್ ಅವರು ಟಿವಿಎಸ್ ಮೋಟಾರ್ಸ್‌ನ ಸಿಎಂಡಿ ಆಗಿದ್ದಾರೆ.
ಶ್ರೀಮಂತರಾಗಿರುವ ಮಹಿಳೆಯರು
ಇನ್ನು ನಾವು ಸಾಧನೆ ಮಾಡಿದ, ಪ್ರಸ್ತುತ ಶ್ರೀಮಂತರಾಗಿರುವ ಮಹಿಳೆಯರ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಹಲವಾರು ಮಹಿಳೆಯರ ಹೆಸರು ಬರುತ್ತದೆ. ಭಾರತದ ಶ್ರೀಮಂತ ಮಹಿಳಾ ಸಿಇಒಗಳಲ್ಲಿ ಒಬ್ಬರಾದ ವಿನಿತಾ ಗುಪ್ತಾ, ಇನ್ಫೋಸಿಸ್‌ನ ನಾರಾಯಣ ಮೂರ್ತಿ ಪುತ್ರಿ ಅಕ್ಷತ ಮೂರ್ತಿ, ಭಾರತದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಜನಪ್ರಿಯಗೊಳಿಸಿದ ಮೋನಿಕಾ ಶೆರ್ಗಿಲ್, ಗೃಹಿಣಿಯಾಗಿ 100 ಮಂದಿ ಉದ್ಯೋಗಿಗಳ 200 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ ಹರಿಣಿ ಶಿವಕುಮಾರ್ ಮೊದಲಾದವರುಗಳನ್ನು ನಾವು ಕಾಣಬಹುದಾಗಿದೆ.


Click it and Unblock the Notifications