ಭಾರತದಲ್ಲಿ ಯುವ, ನವೀನ, ಬುದ್ಧಿವಂತ ಜನರಿಂದ ಹಲವಾರು ಸ್ಟಾರ್ಟಪ್ ಗಳು ಹುಟ್ಟಿಕೊಳ್ಳುತ್ತಿವೆ. ಆ ಪೈಕಿ ಕೆಲವು ಸ್ಥಾಪನೆಯಾದ ಬಳಿಕ ಯೂನಿಕಾರ್ನ್‌ಗಳಾಗಿ ಬದಲಾಗುತ್ತವೆ. ಅಂತಹ ಸ್ಟಾರ್ಟ್‌ಅಪ್‌ಗಳು ದೊಡ್ಡ ಕಾರ್ಪೊರೇಟ್ಸ್, ಉದ್ಯಮಿಗಳು ಹಾಗೂ ವೆಂಚರ್ ಕ್ಯಾಪಿಟಲಿಸ್ಟ್‌ಗಳಿಂದ ಹೂಡಿಕೆ ಅಥವಾ ಫಂಡಿಂಗ್ ಅನ್ನು ನಿರೀಕ್ಷೆ ಮಾಡುತ್ತವೆ.
ಅದರಂತೆ ಇಲ್ಲೊಬ್ಬರು ಸಂಸ್ಥೆಯೊಂದನ್ನು ಸ್ಥಾಪಿಸಿ 100ಕ್ಕೂ ಹೆಚ್ಚು ಉದ್ಯಮಕ್ಕೆ ಫಂಡಿಂಗ್ ಅನ್ನು ಮಾಡುತ್ತಿದ್ದಾರೆ. ಆ ಮೂಲಕ ಅವರು ಉದ್ಯಮ ಕ್ಷೇತ್ರದಲ್ಲಿ ಭಾರೀ ಹೆಸರನ್ನು ಗಳಿಸಿದ್ದಾರೆ. ಹಾಗಾದರೆ, ವಾಣಿ ಕೋಲಾ ಯಾರು, ಆದಾಯವೆಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ವಾಣಿ ಕೋಲಾ ಅವರು ಬಹಳ ಜನಪ್ರಿಯ ವೆಂಚರ್ ಕ್ಯಾಪಿಟಲಿಸ್ಟ್ ಹಾಗೂ ಉದ್ಯಮಿಯಾಗಿದ್ದಾರೆ. ಅವರು ಬೆಂಗಳೂರು ಮೂಲದ ವೆಂಚರ್ ಕ್ಯಾಪಿಟಲಿಸ್ಟ್ ಸಂಸ್ಥೆಯಾದ ಕಲಾರಿ ಕ್ಯಾಪಿಟಲ್‌ನ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕೋಲಾ ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ 22 ವರ್ಷಗಳ ವೃತ್ತಿ ಜೀವನವನ್ನು ಮುಗಿಸಿ 2006ರಲ್ಲಿ ವೆಂಚರ್ ಕ್ಯಾಪಿಟಲ್ ಸಂಸ್ಥೆಯೊಂದನ್ನು ಕಟ್ಟುವುದಕ್ಕಾಗಿ ಭಾರತಕ್ಕೆ ವಾಪಾಸ್ ಬಂದಿದ್ದರು.
ಕೋಲಾ ಅವರು ವಿನೋದ್ ಧಾಮ್ ಹಾಗೂ ಕುವಾರ್ ಶಿರಳಗಿ ಜತೆ ಸೇರಿಕೊಂಡು ನ್ಯೂ ಎಂಟರ್‌ಪ್ರೈಸ್ ಅಸೋಸಿಯೇಟ್ಸ್(ಎನ್‌ಇಎ) ಫಂಡಿಂಗ್‌ನಡಿ ಇಂಡೋ-ಅಮೆರಿಕ ವೆಂಚರ್ ಪಾಟನರ್ಸ್ ಅನ್ನು ಸ್ಥಾಪಿಸಿದ್ದರು. ನಾಲ್ಕು ವರ್ಷಗಳ ಬಳಿಕ ಎನ್‌ಇಎ ಸಂಸ್ಥೆಯು ಈ ಜಾಯಿಂಟ್ ವೆಂಚರ್‌ನಿಂದ ನಿರ್ಗಮಿಸಿತ್ತು.
ಹೀಗಾಗಿ, 2012ರಲ್ಲಿ ಅವರು ಇದಕ್ಕೆ ಕಲಾರಿ ಕ್ಯಾಪಿಟಲ್ ಎಂದು ಮರುನಾಮಕರಣ ಮಾಡಿದರು. 2017ರ ವೇಳೆಗೆ ಕೋಲಾ ಅವರ ನೇತೃತ್ವದಲ್ಲಿ ಈ ಸಂಸ್ಥೆಯು 650 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆದಿತ್ತು. ಕೋಲಾ ಅವರು ತಮ್ಮ ಕಂಪನಿ ಮೂಲಕ ಮುಖ್ಯವಾಗಿ ಇ-ಕಾಮರ್ಸ್, ಮೊಬೈಲ್ ಸರ್ವೀಸ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ.
ಅರ್ಬನ್ ಲ್ಯಾಡರ್, ಡ್ರೀಮ್11ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಕೋಲಾ ಅವರು ಹೈದರಾಬಾದ್‌ನಲ್ಲಿ ಹುಟ್ಟಿದ್ದು, ಒಸ್ಮಾನಿಯಾ ಯೂನಿರ್ವಸಿಟಿಯಿಂದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. 1980ರಲ್ಲಿ ಅವರು ಅಮೆರಿಕಾಕ್ಕೆ ತೆರಳಿದರು. ನಂತರ ಅವರು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಿಂದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಮುಂದೆ ವಾಣಿ ಅವರು ಎಂಪ್ರಾಸ್ ಮತ್ತು ಕಂಟ್ರೋಲ್ ಡೇಟಾ ಕಾರ್ಪೊರೇಷನ್‌ನಂತಹ ಕಂಪನಿಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 12 ವರ್ಷಗಳ ನಂತರ, ವಾಣಿ 1996ರಲ್ಲಿ ತಮ್ಮ ಮೊದಲ ವ್ಯಾಪಾರ ಉದ್ಯಮ ರೈಟ್‌ವರ್ಕ್ಸ್ ಅನ್ನು ಸ್ಥಾಪಿಸಿದರು. ಜತೆಗೆ, ಸೆರ್ಟಸ್ ಸಾಫ್ಟ್‌ವೇರ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸಿಇಒ ಆಗಿದ್ದರು. ವಾಣಿ ಅವರು ಶ್ರೀನಿವಾಸ್ ಕೋಲಾ ಅವರನ್ನು ಮದುವೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಉದ್ಯಮಿಗಳಾಗಿ ಬೆಳೆದ ಮಹಿಳೆಯರು
ಈ ಹಿಂದೆ ಉದ್ಯಮಿಗಳಾಗಿ ಅದರಲ್ಲೂ ಮುಖ್ಯವಾಗಿ ಯಶಸ್ವಿ ಉದ್ಯಮವನ್ನು ನಡೆಸಿದ ಹಲವಾರು ಮಹಿಳೆಯರ ಬಗ್ಗೆ ನಾವು ವಿವರಣೆ ನೀಡಿದ್ದೇವೆ. ಅಮೀರ ಶಾ ತನ್ನ ತಂದೆಯ ಕ್ಲಿನಿಕ್ ಅನ್ನು 6478 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದಾರೆ. ಭಾರತದ ಟ್ರಾಕ್ಟರ್ ಕ್ವೀನ್ ಆದ ಮಲ್ಲಿಕಾ ಯಶಸ್ವಿ ಉದ್ಯಮಿಯಾಗಿದ್ದಾರೆ.
ಭಾರತದ ಶ್ರೀಮಂತ ಮಹಿಳಾ ಸಿಇಒಗಳಲ್ಲಿ ಒಬ್ಬರಾದ ವಿನಿತಾ ಗುಪ್ತಾ, ಇನ್ಫೋಸಿಸ್‌ನ ನಾರಾಯಣ ಮೂರ್ತಿ ಪುತ್ರಿ ಅಕ್ಷತ ಮೂರ್ತಿ, ಭಾರತದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಜನಪ್ರಿಯಗೊಳಿಸಿದ ಮೋನಿಕಾ ಶೆರ್ಗಿಲ್, ಗೃಹಿಣಿಯಾಗಿ 100 ಮಂದಿ ಉದ್ಯೋಗಿಗಳ 200 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ ಹರಿಣಿ ಶಿವಕುಮಾರ್ ಮೊದಲಾದವರುಗಳನ್ನು ನಾವು ಕಾಣಬಹುದಾಗಿದೆ.


Click it and Unblock the Notifications