ವೇದಾಂತ್ ಲಂಬಾ ಎಂಬ ಉದ್ಯಮಿ ಯುವಕನ ಕಥೆಯೇ ವಿಶಿಷ್ಟವಾಗಿದೆ. ತಮ್ಮ ಶಾಲಾ ವ್ಯಾಸಂಗದ ನಂತರ ಮೇನ್‌ಸ್ಟ್ರೀಟ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಬಳಿಕ ಅದನ್ನೇ ಸ್ಟಾರ್ಟ್ ಅಪ್ ಆಗಿ ಅಭಿವೃದ್ದಿಪಡಿಸಿದ್ದು ಇಂದು ಅವರ ಕಂಪನಿ ಪ್ರಭಾವಶಾಲಿ ಉದ್ಯಮವಾಗಿ ಬೆಳೆದುನಿಂತಿದೆ.
ದಿ ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್‌ನ ಸಂಸ್ಥಾಪಕರಾಗಿರುವ ವೇದಾಂತ್ ಲಂಬಾ ಅವರು ಭಾರತದಲ್ಲಿ ಸ್ನೀಕರ್ ಸಂಸ್ಕೃತಿಯ ಬಗ್ಗೆ ಯೂಟ್ಯೂಬ್ ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಸ್ನೀಕರ್ ಕಲ್ಚರ್ ಬಗ್ಗೆ ಅಭ್ಯಾಸಿಸುತ್ತಾ ಹೋದ ಹಾಗೆ ಕುತೂಹಲಕ್ಕಾಗಿ ಪೊಟರೆಯೊಳಗೆ ತಲೆ ಹಾಕುತ್ತಿದ್ದೇನೆ ಅನಿಸಿತ್ತು.

ಆದರೆ ನಿಜವಾಗಿಯೂ ಪೊಟರೆಯೊಳಗೆ ತಲೆ ಎತ್ತಿ ನೋಡಿದಾಗ ಜಾಗ ವಿಶಾಲವಾಗಿತ್ತು ಮತ್ತು ಖಾಲಿಯಾಗಿತ್ತು. ವಿಶಾಲ ಜಾಗ ತುಂಬುವ ಅವಕಾಶ ಇದೆಯೆಂದು ಅರಿತುಕೊಂಡ ವೇದಾಂತ್ ಸ್ನೀಕರ್ಸ್ ಮರು ಮಾರಾಟ ಉದ್ಯಮ ಪ್ರಾರಂಭಿಸಿಬಿಟ್ಟರು.!
ತಮ್ಮ ಮೇನ್‌ಸ್ಟ್ರೀಟ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ ಎಂಬ ಪೂರ್ಣ ಪ್ರಮಾಣದ ಸ್ಟಾರ್ಟ್ ಅಪ್ ಆಗಿ ಅಭಿವೃದ್ಧಿಪಡಿಸಿದರು. ಸಿಎನ್‌ಬಿಸಿ ಸಂದರ್ಶನ ನೀಡುವ ವೇಳೆ, "ಸ್ನೀಕರ್ಸ್ ಈಗ ಸ್ಟೇಟಸ್ ಸಿಂಬಲ್ ಆಗುತ್ತಿದೆ. ಈ ವ್ಯವಹಾರದಲ್ಲಿ ತಾನು ಮಾತ್ರ ಭಾಗಿಯಾಗಿಲ್ಲ 17-19 ವರ್ಷ ವಯಸ್ಸಿನ ಬಹಳಷ್ಟು ಮಕ್ಕಳು ಹಳೆಯ ಬೂಟುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ," ಎಂದು ಹೇಳಿದ್ದಾರೆ.
20000 ರೂಪಾಯಿಗಳೊಂದಿಗೆ ಪ್ರಾರಂಭಿಸಿದ ವ್ಯವಹಾರ ಇಂದು ಪ್ರತಿ ತಿಂಗಳು 3 ಲಕ್ಷದಿಂದ 10 ಲಕ್ಷದವರೆಗೆ ಗಳಿಸುವಲ್ಲಿ ತಲುಪಿದೆ. ಲಾಂಬಾ ಅವರು ಸ್ಕೂಲ್ ನಲ್ಲಿ ಇದ್ದಾಗ ಸ್ನೀಕರ್ಸ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. 16 ನೇ ವಯಸ್ಸಿನಲ್ಲಿ, ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಈ ಜಗತ್ತನ್ನು ಕಂಡುಹಿಡಿದರು ಎಂದರೆ ತಪ್ಪಾಗಲಾರದು.
ವ್ಯವಹಾರ ಪ್ರಾರಂಭಿಸಿದ ಮೊದಲ ವರ್ಷದ ಅವರು 7 ಕೋಟಿ ರೂ. ವ್ಯವಹಾರ ಮಾಡಿದ್ರೆ, ಅದರ ಮುಂದಿನ ಒಂದು ತಿಂಗಳಲ್ಲೇ , ಅದಕ್ಕಿಂತಲೂ ಹೆಚ್ಚಿನ ವ್ಯಾಪಾರ ಮಾಡುತ್ತಾರೆ. ಸದ್ಯ ಅವರ ವ್ಯವಹಾರ 100 ಕೋಟಿ ದಾಟುವ ನಿರೀಕ್ಷೆಯಲ್ಲಿದೆ. "ಕಿರಿಯರು ಏರ್ ಜೋರ್ಡಾನ್ 1 ಇಷ್ಟಪಟ್ಟರೆ, ಹಿರಿಯ ತಲೆಮಾರಿನವರು ನೈಕ್, ಲೂಯಿ ವಿಟಾನ್ ಏರ್ ಫೋರ್ಸ್ 1 ಅನ್ನು ಇಷ್ಟಪಡುತ್ತಾರೆ," ಎನ್ನುತ್ತಾರೆ ಲಾಂಬಾ.
"ರೀಸೇಲ್ ಮಾರ್ಕೆಟ್ ನಲ್ಲಿ 20000 ರೂಪಾಯಿ ಮೌಲ್ಯದ ಸ್ನೀಕರ್ ನಲ್ಲಿ 2 ಲಕ್ಷ ರೂ.ಗಳಷ್ಟು ಸಂಪಾದಿಸಬಹುದು. ಕಂಪನಿ ಒಮ್ಮೆ ಜೋರ್ಡಾನ್ಸ್ ಒಂದು ಜತೆ ಸ್ನೀಕರ್ಸ್ ನ್ನು 13 ಲಕ್ಷಕ್ಕೆ ಮಾರಾಟ ಮಾಡಿ 2 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದೇವೆ. ಶೂಗಳ ಮಾರುಕಟ್ಟೆ ಬೆಲೆ ಕೇವಲ 1.5 ಲಕ್ಷ ರೂ. ಯಾರೋ 7-8 ಲಕ್ಷಕ್ಕೆ ಖರೀದಿಸಿದ್ದ, 10-11 ಲಕ್ಷಕ್ಕೆ ಕಂಪನಿಗೆ ಮಾರಾಟ ಮಾಡಿದ್ದಾರೆ ಎಂದು ಲಾಂಬಾ ವಿವರಿಸಿದ್ದಾರೆ.
ಅವರ ಸಂಸ್ಥೆ ಆನ್ ಲೈನ್ ಹೊರತುಪಡಿಸಿ ದೆಹಲಿಯಲ್ಲಿ ಆಫ್‌ಲೈನ್ ಸ್ಟೋರ್ ಅನ್ನು ಸಹ ಪ್ರಾರಂಭಿಸಿದ್ದು ಮಳಿಗೆಯು 1600 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದು ಏಷ್ಯಾದ ಅತಿದೊಡ್ಡ ಸ್ನೀಕರ್ ಮರುಮಾರಾಟದ ಅಂಗಡಿಯಾಗಿದೆ. ಇಷ್ಟೆಲ್ಲಾ ಬ್ಯುಸಿನೆಸ್ ಮಾಡಿರುವ ವೇದಾಂತ್ ಕಾಲೇಜು ಶಿಕ್ಷಣ ಪಡೆಯಲಿಲ್ಲ ಎನ್ನುವುದು ವಿಶೇಷ. ತಾವು ಹೈಸ್ಕೂಲ್ ಡ್ರಾಪ್ಔಟ್ ಎಂದು ಒಮ್ಮೆ ಟ್ವೀಟ್ ಮಾಡಿದ್ದರು. 2005 ಮತ್ತು 2010 ರ ನಡುವೆ ಪುಣೆಯ ಸೇಂಟ್ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.


Click it and Unblock the Notifications