ವಿಕಾಸ್ ಒಬೆರಾಯ್ ಒಬ್ಬ ಯುವ ಹಾಗೂ ಕ್ರಿಯಾತ್ಮಕ ಉದ್ಯಮಿಯಾಗಿದ್ದು, ಅವರು ತಮ್ಮ ಸ್ವಂತ ವಿಮಾನವನ್ನು ಹಾರಾಡಿಸುತ್ತಾರೆ. ಅವರು ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಪ್ರಸಿದ್ಧ ಬಾಲಿವುಡ್ ನಟಿಯನ್ನು ವಿವಾಹವಾಗಿದ್ದಾರೆ. ವಿಕಾಸ್ ಒಬೆರಾಯ್ ಅವರು ಒಬೆರಾಯ್ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, 30,000 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒಬೆರಾಯ್ ರಿಯಾಲ್ಟಿ ಭಾರತದ ಅತಿದೊಡ್ಡ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ರಿಯಲ್ ಎಸ್ಟೇಟ್ ಡೆವಲಪ್ ಮೆಂಟ್ ಕಂಪನಿಯಾಗಿದೆ. ಒಬೆರಾಯ್ ಹೋಟೆಲ್‌ಗಳನ್ನು ಹೊಂದಿರುವ ಪ್ರಸಿದ್ಧ ಒಬೆರಾಯ್ ಗ್ರೂಪ್‌ನೊಂದಿಗೆ ಹೆಸರನ್ನು ಹೋಲಿಸಿದರೆ ಅದಕ್ಕೂ ಇವರಿಗೆ ಯಾವುದೇ ಸಂಬಂಧವಿಲ್ಲ. ವಿಕಾಸ್ ಒಬೆರಾಯ್ ಅವರು ಮೂರು ದಶಕದ ಹಿಂದೆ ತಮ್ಮ ತಂದೆ ರಣವೀರ್ ಒಬೆರಾಯ್ ಸ್ಥಾಪಿಸಿದ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ವಿಕಾಸ್ ಅವರ ನಾಯಕತ್ವದಲ್ಲಿ ಕಂಪೆನಿಯು ರಿಯಲ್ ಎಸ್ಟೇಟ್‌ನ ಹೌಸಿಂಗ್, ಕಾರ್ಪೊರೇಟ್, ಹಾಸ್ಪಿಟಾಲಿಟಿ ಹಾಗೂ ರಿಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದೆ.
ಅವರು ವೆಸ್ಟಿನ್ ಮುಂಬೈ ಗಾರ್ಡನ್ ಸಿಟಿ ಸೇರಿದಂತೆ ಕೆಲವೊಂದು ಪ್ರಸಿದ್ಧ ಆಸ್ತಿಗಳನ್ನು ಹೊಂದಿದ್ದಾರೆ. ಜತೆಗೆ ಅವರ ಕಂಪೆನಿಯು ಮುಂಬೈಯ ಮೊದಲ ದಿ ರಿಟ್ಜ್ ಕಾರ್ಲ್ಟನ್ ಹೋಟೆಲ್ ಮತ್ತು ರೆಸಿಡೆನ್ಸಿಯನ್ನು ನಿರ್ಮಿಸುತ್ತಿದೆ. ಉದ್ಯಮದಲ್ಲಿನ ಸುಮಾರು 30 ವರ್ಷಗಳ ಅನುಭವದೊಂದಿಗೆ ಮುಂಬೈಯ ಮಿಡ್‌ಟೌನ್‌ನಲ್ಲಿ ಹೋಟೆಲ್, ಮಾಲ್ ಮತ್ತು ಆಫೀಸ್ ಟವರ್ ಅನ್ನು ಸಹ ನಿರ್ಮಿಸುತ್ತಿದ್ದಾರೆ.
ಅಲ್ಲದೆ, ಕಂಪೆನಿಯು ಒಬೆರಾಯ್ ಫೌಂಡೇಷನ್ ಮೂಲಕ ಒಬೆರಾಯ್ ಇಂಟರ್‌ನ್ಯಾಷನಲ್ ಶಾಲೆಗಳನ್ನು ಸಹ ಹೊಂದಿದೆ. ವಿಕಾಸ್ ಒಬೆರಾಯ್ ಅವರು ಮುಂಬೈ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ಹಳೆವಿದ್ಯಾರ್ಥಿಯಾಗಿದ್ದಾರೆ ಜೊತೆಗೆ ಇದರ ಇಂಡಿಯಾ ಅಡ್ವೈಸಿಂಗ್ ಬೋರ್ಡ್‌ನಲ್ಲಿದ್ದಾರೆ. ಅವರು ಬಾಲಿವುಡ್ ಮಾಜಿ ತಾರೆ ಗಾಯತ್ರಿ ಜೋಶಿ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಅವರಿಗೆ ವಿಹಾನ್ (15) ಮತ್ತು ಯುವಾನ್ (13) ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.. ಈಗ ಗಾಯತ್ರಿ ಒಬೆರಾಯ್ ಎಂದು ಕರೆಸಿಕೊಂಡಿರುವ ಈ ಮಾಜಿ ನಟಿ ಒಬೆರಾಯ್ ಪ್ರಾಜೆಕ್ಟ್‌ಗಳ ಇಂಟೀರಿಯರ್ಸ್‌ನ್ನು ನಿರ್ವಹಿಸುತ್ತಿದ್ದಾರೆ.
ವಿವೇಕ್ ಒಬೆರಾಯ್ ವಿಮಾನ ಹಾರಾಟದ ತರಬೇತಿ ಹೊಂದಿದ್ದು, ಪೈಲಟ್ ಪರವಾನಗಿಯನ್ನು ಪಡೆದಿದ್ದಾರೆ. ಇವರು ತಮ್ಮ ಸ್ವಂತ ವಿಮಾನ ಸಿರಸ್ SR22 ಟ್ಯಾಂಗೋ ಏರ್ ಕ್ರಾಪ್ಟ್ ವಿಮಾನವನ್ನು ಹಾರಿಸುತ್ತಾರೆ. 52 ವರ್ಷದವರಾಗಿರುವ ಉದ್ಯಮಿ 2.8 ಬಿಲಿಯನ್ (23,000 ಕೋಟಿ ರೂ.ಗೂ ಹೆಚ್ಚು) ನಿವ್ವಳ ಸಂಪತ್ತಿನ ಒಡೆಯರಾಗಿದ್ದಾರೆ. ಇವರು 2022ರಲ್ಲಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 65ನೇ ಸ್ಥಾನ ಪಡೆದಿದ್ದಾರೆ. ವಿಮಾನ ಹಾರಾಟವಲ್ಲದೇ ವಿಕಾಸ್ ಅವರಿಗೆ ಓದು, ಟ್ರಾವೆಲ್ ಆಸಕ್ತಿಯ ವಿಷಯವಾಗಿದ್ದು, ಇದರೊಂದಿಗೆ ವಿಂಟರ್ ಸ್ಪೋರ್ಟ್ಸ್ ಸ್ಕೀಯಿಂಗ್ ಇಷ್ಟಪಡುತ್ತಾರೆ.


Click it and Unblock the Notifications