ಮೊಬೈಲ್ ಫೋನ್ ಗಳು ಅದ್ಯಾವ ಪರಿಯಲ್ಲಿ ದುಬಾರಿ ಆಗಿವೆ ಅಂದರೆ, ಒಂದು ಫೋನ್ ಖರೀದಿ ಮಾಡುವ ದುಡ್ಡಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಬರುತ್ತದೆ. ಅಷ್ಟೇ ಏಕೆ ಒಂದು ಚದರದ ಮನೆ ಕಟ್ಟಿಸಬಹುದು. ಹೊಸ ಬೈಕ್ ಖರೀದಿಸಬಹುದು. ಹಾಗಂತ ಎಲ್ಲ ಮೊಬೈಲ್ ಫೋನ್ ಬೆಲೆಯೂ ಅಷ್ಟೇ ಇರುತ್ತಾ ಅಂದರೆ, ಇರಲ್ಲ ಅನ್ನೋದು ನಿಜ.
ಆದರೂ ಹತ್ತಾರು ಸಾವಿರ ರುಪಾಯಿ ಖರ್ಚು ಮಾಡಿದ ಮೊಬೈಲ್ ಫೋನ್ ಗೆ ಒಂದು ಇನ್ಷೂರೆನ್ಸ್ ಮಾಡಿಸಿಕೊಳ್ಳುವುದು ಉತ್ತಮ ಅಲ್ಲವಾ? ಸಾಮಾನ್ಯವಾಗಿ ಹಲವು ಮೊಬೈಲ್ ಫೋನ್ ಗಳ ಜತೆಯಲ್ಲಿ ಒಂದು ವರ್ಷದ ಸೀಮಿತ ವಾರಂಟಿ ಬರುತ್ತದೆ. ಆದರೆ ಅದರಲ್ಲಿ ಎಲ್ಲದರಲ್ಲೂ ಆಕ್ಸಿಡೆಂಟಲ್ ಡ್ಯಾಮೇಜ್ (ಸ್ಕ್ರೀನ್ ಸೀಳು ಬೀಡುವುದು ಹಾಗೂ ನೀರಿನಿಂದ ಆಗುವ ಹಾನಿ) ಒಳಗೊಂಡಿರುವುದಿಲ್ಲ.
ಹಾಗಂತ ಈಗ ಹೇಳಲು ಹೊರಟಿರುವ ಮೊಬೈಲ್ ಫೋನ್ ಇನ್ಷೂರೆನ್ಸ್ ಗಳು ಎಲ್ಲವನ್ನೂ ಕವರ್ ಮಾಡುವುದಿಲ್ಲ. ಕೆಲವು ನಿಯಮ ನಿಬಂಧನೆ ಇದ್ದೇ ಇರುತ್ತದೆ. ಮೊಬೈಲ್ ಫೋನ್ ರಿಪೇರಿಯಿಂದ ಅದನ್ನು ಬದಲಿಸಿಕೊಡುವ ತನಕ ನಾನಾ ಬಗೆಯಲ್ಲಿ ಈ ಇನ್ಷೂರೆನ್ಸ್ ಕವರ್ ಆಗುತ್ತದೆ.
ಯಾವ ಕಂಪೆನಿಗಳು ಮೊಬೈಲ್ ಫೋನ್ ಇನ್ಷೂರೆನ್ಸ್ ಮಾಡುತ್ತವೆ?
ವಿವಿಧ ಕಂಪೆನಿಗಳು ಮೊಬೈಲ್ ಫೋನ್ ಇನ್ಷೂರೆನ್ಸ್ ಮಾಡುತ್ತವೆ. ಅದರ ಪ್ರೀಮಿಯಂ, ನಿಯಮ, ನಿಬಂಧನೆಗಳನ್ನು ವಿಚಾರಿಸಿಕೊಂಡು ಮುಂದುವರಿಯಬೇಕು. ಅದರಲ್ಲಿ ಅಕೋ ಮೊಬೈಲ್ ಇನ್ಷೂರೆನ್ಸ್, ಡಿಜಿಟ್ ಇನ್ಷೂರೆನ್ಸ್, ಸಿಸ್ಕಾ ಗ್ಯಾಜೆಟ್ ಸೆಕ್ಯೂರ್ ಮೊಬೈ ಇನ್ಷೂರೆನ್ಸ್, ಏರ್ ಟೆಲ್ ಸೆಕ್ಯೂರ್ ಮೊಬೈಲ್ ಇನ್ಷೂರೆನ್ಸ್, ಫ್ಲಿಪ್ ಕಾರ್ಟ್ ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ (ಸಿಎಂಪಿ) ಇನ್ಷೂರೆನ್ಸ್ ಪ್ಲಾನ್ ಇತ್ಯಾದಿ ಇವೆ. ಈ ಪೈಕಿ ಯಾವುದು ನಿಮಗೆ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
ಯಾವ ಅಪಾಯ, ಹಾನಿಯನ್ನು ಈ ಪಾಲಿಸಿ ಕವರ್ ಮಾಡುತ್ತದೆ?
* ಫೋನ್ ಒಳಗೆ ನೀರು ಹೋಗಿ ಆಗುವ ಒಳ ಭಾಗದ ಹಾನಿ.
* ಇನ್ಷೂರೆನ್ಸ್ ಮಾಡಿಸಿದ ಸಲಕರಣೆ ಹೊರ ಹಾಗೂ ಒಳಗಿನ ಭಾಗಕ್ಕೆ ಆಗುವ ಹಾನಿ.
* ಚಾರ್ಜಿಂಗ್ ಪೋರ್ಟ್ ಸಮಸ್ಯೆ, ಇಯರ್ ಫೋನ್ ಜಾಕ್ ಸಮಸ್ಯೆ ಅಥವಾ ಟಚ್ ಸ್ಕ್ರೀನ್ ಸಮಸ್ಯೆ.
* ಫೋನ್ ಸ್ಕ್ರೀನ್ ಸೀಳಾಗುವುದು.
* ಮನೆ ಕುಸಿದು, ಕಳ್ಳತನವಾಗಿ ಅಥವಾ ದರೋಡೆಯಿಂದ ಫೋನ್ ಕಳೆದುಕೊಂಡಲ್ಲಿ.
* ಬೆಂಕಿ ಅನಾಹುತ, ಬಂದ್, ಹಿಂಸಾಚಾರ, ಭಯೋತ್ಪಾದನಾ ಚಟುವಟಿಕೆ ಸಿಲುಕಿ ನಾಶವಾದಲ್ಲಿ ಆಗ ಕೂಡ ಇನ್ಷೂರೆನ್ಸ್ ಕವರ್ ಆಗುತ್ತದೆ.
* ಭದ್ರತೆ ಚೆನ್ನಾಗಿರುವ ವಾಹನ ಅಥವಾ ಕಟ್ಟಡದಿಂದಲೇ ಫೋನ್ ಕಳೆದುಹೋಗುವುದು.
ಮೊಬೈಲ್ ಇನ್ಷೂರೆನ್ಸ್ ನಲ್ಲಿ ಏನು ಕವರ್ ಆಗಲ್ಲ?
* ಮಾಮೂಲಿ ಬಳಕೆಯಿಂದ ಮೊಬೈಲ್ ಫೋನ್ ಗೆ ಆಗುವ ಹಾನಿ.
* ಕುತೂಹಲ ಹುಟ್ಟಿಸುವ ರೀತಿಯಲ್ಲಿ ಮೊಬೈಲ್ ಫೋನ್ ನಾಪತ್ತೆಯಾದಲ್ಲಿ.
* ಯಾರೂ ಬಳಸದ ವಾಹನ ಹಾಗೂ ಕಟ್ಟಡದಲ್ಲಿ ಮೊಬೈಲ್ ಫೋನ್ ಕಳುವಾದಲ್ಲಿ.
* ಮೊಬೈಲ್ ಫೋನ್ ನಲ್ಲಿ ಎಲೆಕ್ಟ್ರಾನಿಕ್ ಅಥವಾ ಮೆಕಾನಿಕಲ್ ಸಮಸ್ಯೆಗಳು ಇದ್ದಲ್ಲಿ.
* ಯಾವುದಾದರೂ ಅಸಹಜ ಪರಿಸ್ಥಿತಿಯಲ್ಲಿ ಮೊಬೈಲ್ ಫೋನ್ ಅನ್ನು ಪ್ರಯೋಗಕ್ಕಾಗಿ ಬಳಸಿಕೊಂಡಿದ್ದಲ್ಲಿ.
* ಪಾಲಿಸಿದಾರರ ಉದ್ದೇಶಪೂರ್ವಕ ನಡವಳಿಕೆ ಅಥವಾ ದುರುದ್ದೇಶದಿಂದ ಮೊಬೈಲ್ ಫೋನ್ ಗೆ ಹಾನಿಯಾಗಿದ್ದಲ್ಲಿ.
* ಮೂರನೇ ವ್ಯಕ್ತಿಯು ಮೊಬೈಲ್ ಫೋನ್ ಬಳಸುತ್ತಿದ್ದ ಅವಧಿಯಲ್ಲಿ ಅದನ್ನು ಕಳೆದುಕೊಂಡಲ್ಲಿ ಅಥವಾ ಹಾನಿಯಾದಲ್ಲಿ ಅದಕ್ಕೆ ಇನ್ಷೂರೆನ್ಸ್ ಕವರ್ ಆಗಲ್ಲ.


Click it and Unblock the Notifications