ದುಬೈ ಮೂಲದ ಬಿಲಿಯನೇರ್ ಉದ್ಯಮಿ ಮುಖೇಶ್ (ಮಿಕ್ಕಿ) ಜಗ್ತಿಯಾನಿ ಅವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಗಮನಾರ್ಹವಾದ ಯಶಸ್ವಿನ ಕಥೆಯೊಂದನ್ನು ಬರೆದಿದ್ದಾರೆ. ಅಷ್ಟೇಅಲ್ಲ ಅವರ ಈ ಜೀವನ ಕಥೆಯು ಯಶಸ್ವಿ ಉದ್ಯಮಿಯಾಗಲು ಕನಸು ಕಾಣುತ್ತಿರುವ ಅನೇಕರಿಗೆ ಮಾದರಿ ಹಾಗೂ ಸ್ಫೂರ್ತಿಯು ಆಗಿದೆ ಎಂದರೆ ತಪ್ಪಾಗಲಾರದ್ದು. ಒಂದು ಕಾಲದಲ್ಲಿ ಟ್ಯಾಕ್ಸಿ ಡೈವರ್ ಆಗಿ ಹಾಗೂ ಹೋಟೆಲ್‌ಗಳಲ್ಲಿ ರೂಮ್ ಕ್ಲೀನ್ ಮಾಡುತ್ತಿದ್ದ ವ್ಯಕ್ತಿಯು ಇಂದು ಬಹುದೊಡ್ಡ ಉದ್ಯಮದ ಮೂಲಕ ಅಸಂಖ್ಯರ ಪಾಲಿಗೆ ಅದರಲ್ಲಿಯೂ ವಿದೇಶಕ್ಕೆ ಉದ್ಯೋಗದ ಹೆಸರಿನಲ್ಲಿ ವಲಸೆ ಹೋದವರಿಗೆ ಪೋಸ್ಟರ್ ಬಾಯ್ ಆಗಿದ್ದಾರೆ.
ಜಗ್ತಿಯಾನಿ ಅವರು ಕುವೈಟ್‌ನಲ್ಲಿ ಹುಟ್ಟಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಭಾರತದಲ್ಲಿ ಮುಗಿಸಿದ್ದರು. ಅಂದರೆ ಅವರು ಮೊದಲು ಚೆನ್ನೈ ಹಾಗೂ ಮುಂಬೈಯಲ್ಲಿ ಶಿಕ್ಷಣವನ್ನು ಮುಗಿಸಿ ಲಂಡನ್‌ನ ಅಕೌಂಟಿಂಗ್ ಸ್ಕೂಲ್‌ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಸೇರಿದ್ದರು. ಆದರೆ, ಅರ್ಧಕ್ಕೆ ಕಲಿಕೆಯನ್ನು ಕೈಬಿಟ್ಟಿದ್ದರು. ನಂತರ ಜೀವನ ನಿರ್ವಹಣೆಗಾಗಿ ಲಂಡನ್ ನಗರಗಳಲ್ಲಿ ಕೆಲವು ಕಾಲ ಟ್ಯಾಕ್ಸಿ ಚಾಲಕರಾಗಿ ದುಡಿದಿದ್ದರು. ಅಷ್ಟೇಅಲ್ಲ ಹೋಟೆಲ್‌ಗಳಲ್ಲಿ ರೂಮ್ ಕ್ಲೀನರ್ ಆಗಿಯೂ ಕಷ್ಟದ ದಿನಗಳನ್ನು ಕಳೆದಿದ್ದಾರೆ. ಅಷ್ಟೊತ್ತಿಗೆ ಅವರ ಬದುಕಿನಲ್ಲಿ ಬಹುದೊಡ್ಡ ಸಂಕಷ್ಟವೊಂದು ಎದುರಾಗಿದ್ದು, ತಮ್ಮ ಹೆತ್ತವರು ಹಾಗೂ ಸಹೋದರನನ್ನು ಬಹಳ ಬೇಗನೆ ಕಳೆದುಕೊಂಡು ತಬ್ಬಲಿಯಾಗಿದ್ದರು.

ಒಂಟಿಯಾಗಿದ್ದ ಮಿಕ್ಕಿ ಜಗ್ತಿಯಾನಿ ಅವರು ಬಹ್ರೇನ್‌ಗೆ ತೆರಳಿದರು. ಅಲ್ಲಿ ಅವರು 1973ರಲ್ಲಿ ತಮ್ಮ ಪಿತ್ರಾರ್ಜಿತವಾಗಿ ಲಭಿಸಿದ ಕೇವಲ $6,000 ಹಣದೊಂದಿಗೆ ಬೇಬಿ ಪ್ರಾಡೆಕ್ಟ್ ಸ್ಟೋರ್‌ವೊಂದನ್ನು ತೆರೆದರು. ಅಕೌಂಟ್ಂಗ್ ಸ್ಕೂಲ್‌ನಿಂದ ಹೊರಗುಳಿದವರಾಗಿದ್ದರೂ ಕೂಡ ಅವರು ಸಾಕಷ್ಟು ಉದ್ಯಮದ ಕೌಶಲ್ಯದೊಂದಿಗೆ ತಮ್ಮ ವ್ಯಾಪಾರ-ವಹಿವಾಟನ್ನು ನಿಧಾನಕ್ಕೆ ವಿಸ್ತರಿಸಲು ಪ್ರಾರಂಭಿಸಿದರು. ತಮ್ಮ ಉದ್ಯಮ ಪ್ರಾರಂಭವಾದ ಒಂದು ದಶಕದ ನಂತರ ಆರು ಸ್ಟೋರ್‌ಗಳಿಗೆ ವಿಸ್ತರಿಸಿಕೊಂಡರು.
ಬಳಿಕ ನಿಧಾನವಾಗಿ ಮಿಕ್ಕಿ ಅವರ ಸ್ಟೋರ್‌ಗಳು ಎಲ್ಲೆಡೆ ತಲೆಯೆತ್ತಲು ಪ್ರಾರಂಭಿಸಿತ್ತು. ಆ ಮೂಲಕ ಮುಂದೆ 6000 ಮಳಿಗೆಗಳೊಂದಿಗೆ ಭಾರತದ ಉಪಖಂಡಗಳು, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ ಹಾಗೂ ಯೂರೋಪ್‌ನ ಸುಮಾರು 20ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ನಾಲ್ಕು ದಶಕಗಳ ಗಮಾರ್ಹ ಉದ್ಯಮಶೀಲ ವೃತ್ತಿಜೀವನದಲ್ಲಿ ಮಿಕ್ಕಿ ಜಗ್ತಿಯಾನಿ ಅವರು 2023ರ ಏಪ್ರಿಲ್ ವೇಳೆಗೆ $5.2(42,800 ಕೋಟಿ ರೂ.) ಬಿಲಿಯನ್ ನಿವ್ವಳ ಆಸ್ತಿಯನ್ನು ಗಳಿಸಿದ್ದಾರೆ.
ಅವರ ದುಬೈಯ ಪ್ರಧಾನ ಕಚೇರಿಯು ಲ್ಯಾಂಡ್‌ಮಾರ್ಕ್ ಗ್ರೂಪ್ ಸುಮಾರು $9.5 ಬಿಲಿಯನ್ (ಸುಮಾರು 78,000 ಕೋಟಿ ರೂ.ಗೂ ಹೆಚ್ಚು) ಆದಾಯವನ್ನು ಗಳಿಸಿದೆ. ಮಿಕ್ಕಿ ಜಗ್ತಿಯಾನಿ ಅವರು ಬಿಲಿಯನ್ ಡಾಲರ್ ಸಮೂಹದ ಸಿಇಒ ಮತ್ತು ಅಧ್ಯಕ್ಷರಾಗಿರುವ ರೇಣುಕಾ ಜಗ್ತಿಯಾನಿ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆರತಿ, ನಿಶಾ ಮತ್ತು ರಾಹುಲ್ ಎಂಬ ಮೂವರು ಮಕ್ಕಳು ಕೂಡ ತಮ್ಮ ಕಂಪೆನಿಗಳಲ್ಲಿ ಗ್ರೂಪ್ ಡೈರೆಕ್ಟರ್‌ಗಳಾಗಿದ್ದಾರೆ.
ಮಗಳು ನಿಶಾ ಜಗ್ತಿಯಾನಿ:
ಬಹು ಶತಕೋಟಿ ಚಿಲ್ಲರೆ ಸಾಮ್ರಾಜ್ಯದ ಮಗಳಾಗಿದ್ದರೂ, ನಿಶಾ ಜಗ್ತಿಯಾನಿ ಅವರು ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಆಡಳಿತ ಮಂಡಳಿಗೆ ಸೇರುವ ಮೊದಲು ಕಾರ್ಪೊರೇಟ್ ಶ್ರೇಣಿಯ ಕೆಳಹಂತದಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಿಶಾ ಅವರು ಇಂದು ಗ್ರೂಪ್ ಡೈರೆಕ್ಟರ್ ಆಗಿ ದುಬೈ ಮೂಲದ ಸಂಘಟಿತ ಮಂಡಳಿಯಲ್ಲಿದ್ದಾರೆ. ಝೂಮ್‌ಇನ್ಫೋ ಪ್ರಕಾರ, ಲ್ಯಾಂಡ್‌ಮಾರ್ಕ್ ಗ್ರೂಪ್ $9.5 ಬಿಲಿಯನ್(ಸುಮಾರು 78,000 ಕೋಟಿ ರೂ.) ಆದಾಯವನ್ನು ಹೊಂದಿದೆ.
ನಿಶಾ ಜಗ್ತಿಯಾನಿ ಅವರು ಗ್ರೂಪ್ ಡೈರೆಕ್ಟರ್ ಆಗಿ, ಜನರ ಕಾರ್ಯಸೂಚಿಗೆ ಸಂಬಂಧಿಸಿದಂತೆ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಸ್ಟ್ರ್ಯಾಟಜಿಕ್ ವಿಷನ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಕಂಪೆನಿಯ ಸಿಎಸ್‌ಆರ್ ಕಾರ್ಯಚಟುವಟಿಕೆಯಾದ ಬೀಟ್ ಡಯಾಬಿಟಿಸ್ ನಿರ್ವಹಣೆಯನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಜತೆಗೆ 2017ರಲ್ಲಿ ಲ್ಯಾಂಡ್‌ಮಾರ್ಕ್ ಹ್ಯಾಪಿ ಮೂಮೆಂಟ್ ಅನ್ನು ಲಾಂಚ್ ಮಾಡಿದ್ದಾರೆ. ನಿಶಾ ಅವರು ದುಬೈ ಡಿಸೈನ್ ಅಂಡ್ ಫ್ಯಾಶನ್ ಕೌನ್ಸಿಲ್ ಹಾಗೂ ದುಬೈ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಇನ್ನೋವೇಷನ್ ಮಂಡಳಿಯಲ್ಲಿದ್ದಾರೆ.


Click it and Unblock the Notifications