ಅಕ್ಷತಾ ಮೂರ್ತಿ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ. ಅಷ್ಟೇಅಲ್ಲ, ಅವರು ಇನ್ಫೋಸಿಸ್ ಸ್ಥಾಪಕರಾದ ನಾರಾಯಣಮೂರ್ತಿ ಅವರ ಮಗಳು. ಭಾರತದ ಎರಡನೇಯ ಅತಿದೊಡ್ಡ ಐಟಿ ಕಂಪೆನಿ ಇನ್ಫೋಸಿಸ್ ಡಿವಿಡೆಂಡ್ ಘೋಷಿಸಿದ್ದರಿಂದ ಅವರು 68.17 ಕೋಟಿ ರೂಪಾಯಿಯನ್ನು ಗಳಿಸಿದ್ದಾರೆ. ಅಕ್ಷತಾ ಮೂರ್ತಿ ಅವರು ಕಳೆದ ವರ್ಷ ಕಂಪನಿಯ 3.89 ಕೋಟಿ ಷೇರನ್ನು ಹೊಂದಿದ್ದರು.
ಪ್ರತಿ ಷೇರಿಗೆ 17.50 ರೂಪಾಯಿಯಂತೆ ಇದ್ದು ಅಕ್ಷತಾ ಜೂನ್ 2ರ ವೇಳೆಗೆ ಈ ಮೊತ್ತವನ್ನು ಗಳಿಸುತ್ತಾರೆ. ಆದರೆ, ಅದಕ್ಕಾಗಿ ಅವರು ತಮ್ಮ ಸ್ಟಾಕ್ ಹೋಲ್ಡಿಂಗ್ ಅನ್ನು ಉಳಿಸಿಕೊಳ್ಳಬೇಕಾಗುತ್ತದೆ. ಕಳೆದ ವರ್ಷದ ಕಂಪೆನಿಯ ಲಾಭಾಂಶವನ್ನು ಸೇರಿಸಿದರೆ ಅಕ್ಷತಾ ಮೂರ್ತಿ ಅವರ ಒಟ್ಟು ಆದಾಯ 132.4 ಕೋಟಿ ರೂ. ಇನ್ಫೋಸಿಸ್ ಅಕ್ಟೋಬರ್‌ನಲ್ಲಿ ಪ್ರತಿ ಷೇರುಗೆ 16.50ರೂ. ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು.

ಕಳೆದ ವರ್ಷ ಅಕ್ಷತಾ ಮೂರ್ತಿ ಪ್ರತಿ ಷೇರುಗೆ 31ರೂ. ಲಾಭಾಂಶವನ್ನು ಪಡೆದಿದ್ದರು. ಇದರಿಂದ ಆಕೆಗೆ 120.76 ಕೋಟಿ ರೂ. ಬಂದಿತ್ತು. ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಯಲ್ಲಿ ಅಕ್ಷತಾ ಮೂರ್ತಿ ಅವರ ಷೇರು ಮೌಲ್ಯ 5400 ಕೋಟಿ ರೂ. ಅಕ್ಷತಾ ಮೂರ್ತಿ ಪತಿ, ಭಾರತೀಯ ಮೂಲದ ರಿಷಿ ಸುನಕ್ ಅವರು ಕಳೆದ ಅಕ್ಟೋಬರ್‌ನಲ್ಲಿ ಬ್ರಿಟನ್‌ನ ಪ್ರಧಾನಿಯಾದರು.ಸುನಕ್ ಅವರು ಬ್ರಿಟನ್ ನಾಗರಿಕರಾಗಿದ್ದಾರೆ.
ಆದರೆ, ಅಕ್ಷತಾ ಮೂರ್ತಿ ಅವರು ತನ್ನ ಭಾರತೀಯ ಪೌರತ್ವವನ್ನು ಬಿಟ್ಟು ಕೊಟ್ಟಿಲ್ಲ. ಭಾರತವು ತನ್ನ ಅನೇಕ ಯುರೋಪಿನ್ ದೇಶಗಳಂತೆ ದ್ವಿಪೌರತ್ವವನ್ನು ಅನುಮತಿಸುವುದಿಲ್ಲ. ಅಕ್ಷತಾ ಅವರು ವಾಸಸ್ಥಳವಲ್ಲದ ಸ್ಟೇಟಸ್ ಅನ್ನು ಹೊಂದಿದ್ದು, ಯುಕೆ ಕಾನೂನುಗಳ ಅಡಿಯಲ್ಲಿ ಅವರು 15 ವರ್ಷಗಳವರೆಗೆ ತೆರಿಗೆಯನ್ನು ಪಾವತಿಸದೆ ಅಲ್ಲಿ ವಾಸಿಸಬಹುದು. ಈ ವಿಷಯವು ಯುಕೆಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಈ ನಡುವೆ, ಎಲ್ಲ ತನ್ನ ಆದಾಯಗಳ ಮೇಲೆ ತೆರಿಗೆಯನ್ನು ಹೊಂದಿದ್ದು, ಯಾವಾಗಲೂ ಅದನ್ನು ಪಾವತಿಸುವುದಾಗಿ ಹೇಳಿದ್ದಾರೆ.
ಅಕ್ಷತಾ ಮೂರ್ತಿ ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದ್ದಾರೆ. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇನ್ಫೋಸಿಸ್ ಕಂಪೆನಿಯ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಅಕ್ಷತಾ ಅವರು ಅರ್ಥಶಾಸ್ತ್ರ ಹಾಗೂ ಫ್ರೆಂಚ್ ಡ್ಯುಯಲ್ ಅನ್ನು ಕ್ಯಾಲಿಫೋರ್ನಿಯಾದ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ನಂತರ ಅವರು ಲಾಸ್ ಎಂಜಲೀಸ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಪ್ ಡಿಸೈನ್ ಮತ್ತು ಮರ್ಚಂಡೈಸಿಂಗ್‌ನಿಂದ ಫ್ಯಾಷನ್ ಡಿಸೈನಿಂಗ್ ಡಿಗ್ರಿ ಪಡೆದುಕೊಂಡಿದ್ದಾರೆ. ಬಳಿಕ ಸ್ಟ್ಯಾನ್‌ಫೋರ್ಡ್‌ನಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಲಿಯುವ ವೇಳೆ ಸುನಕ್ ಅವರನ್ನು ಭೇಟಿಯಾಗಿದ್ದಾರೆ. ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ ಅವರು 2009ರಲ್ಲಿ ಮದುವೆಯಾಗಿದ್ದು, ಅವರಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಕೆನ್ಸಿಂಗ್ಟನ್‌ನಲ್ಲಿ ಮನೆಯನ್ನು ಹೊಂದಿದ್ದಾರೆ. ಈ ಆಸ್ತಿಯ ಬೆಲೆಯು 71 ಕೋಟಿ ರೂ. ಅಷ್ಟೇಅಲ್ಲ, ಅವರು ಅಲ್ಲಿ ಫ್ಲ್ಯಾಟ್ ಕೂಡ ಹೊಂದಿದ್ದಾರೆ. ಜತೆಗೆ ಕ್ಯಾಲಿಫೋರ್ನಿಯಾದಲ್ಲಿ ಪೆಂಟ್‌ಹೌಸ್ ಹಾಗೂ ಯಾರ್ಕ್‌ಷೈರ್‌ನಲ್ಲಿ ದೊಡ್ಡ ಬಂಗ್ಲೆಯನ್ನು ಕೂಡ ಹೊಂದಿದ್ದಾರೆ.
ಸುನಕ್ ಅವರ ತಾಯಿಯು ಫಾರ್ಮಿಸ್ಟ್ ಆಗಿದ್ದು ತಂದೆಯು ಡಾಕ್ಟರ್ ಆಗಿದ್ದಾರೆ. ಅಕ್ಷತಾ ಮೂರ್ತಿ ಅವರ ತಾಯಿ ಸುಧಾಮೂರ್ತಿ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಲೇಖಕಿಯೂ ಹೌದು. ಮೂರ್ತಿ ಕುಟುಂಬವು ಕಂಪೆನಿಯಲ್ಲಿ ಶೇ.3.6ರಷ್ಟು ಷೇರು ಪಾಲನ್ನು ಹೊಂದಿದ್ದಾರೆ.


Click it and Unblock the Notifications