"ಕೊರೊನಾ ಬಿಕ್ಕಟ್ಟಿನಲ್ಲಿ ಹಣಕಾಸು ಸಮಸ್ಯೆಯಿಂದ ಕೈ ಕಚ್ಚಿ ಹೋಗಿದೆ. ಸುಧಾರಿಸಿಕೊಳ್ಳುವುದಕ್ಕೆ ಒಂದೆರಡು ವರ್ಷವೇ ಬೇಕಾಗಬಹುದು. ಆರು ತಿಂಗಳ ಕಾಲ ಬ್ಯಾಂಕ್ ಗಳಿಂದ ಕೊಟ್ಟಿದ್ದ ಇಎಂಐ ವಿನಾಯಿತಿಯನ್ನು ಇನ್ನೂ ಒಂದೆರಡು ವರ್ಷ ಕೊಟ್ಟರೆ, ಹೇಗೋ ಬಡ್ದಿಯನ್ನು ಕಟ್ಟಿಕೊಂಡು ಹೋಗಿ, ಸ್ಥಿತಿ ಸುಧಾರಿಸಿದ ಮೇಲೆ ಇಎಂಐ ಮೊದಲಿನಂತೆಯೇ ಪಾವತಿ ಮಾಡ್ತೀವಿ,"
- ಬ್ಯಾಂಕ್ ಗಳಿಂದ ಸಾಲ ಪಡೆದವರ ಬಹುತೇಕರ ಸ್ಥಿತಿ ಮೇಲಿನ ಧ್ವನಿಯನ್ನೇ ಹೊರಡಿಸುವಂತಿದೆ. ಇಂಥವರಿಗಾಗಿಯೇ ಬ್ಯಾಂಕ್ ಗಳಿಂದ ಎರಡು ವರ್ಷಗಳ ವಿನಾಯಿತಿಯನ್ನು ನೀಡಲು ಮುಂದಾಗಿವೆ. ಈ ವಿನಾಯಿತಿ ಪಡೆಯುವುದು ಹೇಗೆ? ಈಗಿನ ಹೊಸ ಮರು ಹೊಂದಾಣಿಕೆ ಯೋಜನೆ ಅಡಿಯಲ್ಲಿ ಎರಡು ವರ್ಷ ಇಎಂಐ ವಿನಾಯಿತಿ ಅಂದರೆ ಏನು, ಎತ್ತ ಇತ್ಯಾದಿ ವಿವರ ಇಲ್ಲಿದೆ.
ಎರಡು ವರ್ಷದ ತನಕವೂ ಸಾಲಕ್ಕೆ ಇಎಂಐ ಪಾವತಿಸುವಷ್ಟಿರುವುದಿಲ್ಲ. ಆದರೆ ನೆನಪಿನಲ್ಲಿ ಇರಲಿ, ಈ ಎರಡು ವರ್ಷದ ಅವಧಿಗೆ ಬಡ್ಡಿಯಂತೂ ಬೀಳುತ್ತದೆ. ಈ ಸಾಲ ಮರು ಹೊಂದಾಣಿಕೆ ಯೋಜನೆ ಕ್ರೆಡಿಟ್ ಕಾರ್ಡ್ ಇಎಂಐಗಳು ಹಾಗೂ ಬಾಕಿಗೂ ಅನ್ವಯಿಸುತ್ತದೆ. ಯಾರು ಕೊರೊನಾದ ಕಾರಣಕ್ಕೆ ಕೆಲಸ ಕಳೆದುಕೊಂಡವರು ಹಾಗೂ ತಮ್ಮ ವ್ಯಾಪಾರ- ವ್ಯವಹಾರದಲ್ಲಿ ನಷ್ಟ ಅನುಭವಿಸಿದವರು ಈ ಅನುಕೂಲ ಪಡೆಯಬಹುದು.
ಇಎಂಐ ಮೊತ್ತ ಕಡಿಮೆ ಮಾಡಿಕೊಳ್ಳಬಹುದು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ಮರು ಹೊಂದಾಣಿಕೆ ಯೋಜನೆ ಮೂಲಕವಾಗಿ ಈಗಾಗಲೇ ಸಾಲ ಪಡೆದವರು ಇಎಂಐ ಮೊತ್ತ ಪಾವತಿಯಲ್ಲಿ ಕಡಿಮೆ ಮಾಡಿಸಿಕೊಳ್ಳಬಹುದು. ಅಥವಾ ಸಾಲದ ಅಸಲು ಮೊತ್ತದ ಪಾವತಿಯಿಂದ ವಿನಾಯಿತಿ ಪಡೆಯಬಹುದು. ಆರ್ ಬಿಐನಿಂದ ಸಾಲ ಮರು ಹೊಂದಾಣಿಕೆಗೆ ಒಂದು ಸಾಮಾನ್ಯ ಪರಿಹಾರ ಎಂದು ರೂಪಿಸಿಲ್ಲ. ಪ್ರತಿ ಸಾಲಗಾರರಿಗೆ/ ಬ್ಯಾಂಕ್ ಗಳಿಗೆ ನಿಯಮಗಳು ಪ್ರತ್ಯೇಕವಾಗಿ ಅನ್ವಯ ಆಗುತ್ತವೆ. ಸಾಲ ಪಡೆದ ಬ್ಯಾಂಕ್ ಗಳು ಅಥವಾ ಎನ್ ಬಿಎಫ್ ಸಿ ಶಾಖೆಗಳಿಗೆ ನೇರವಾಗಿ ಭೇಟಿ ಮಾಡಿ, ವಿನಾಯಿತಿ ಕುರಿತು ಚರ್ಚಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೀಟೇಲ್ ಸಾಲಗಾರರಿಗಾಗಿ ಆನ್ ಲೈನ್ ಪೋರ್ಟಲ್ ಆರಂಭಿಸಿದೆ. ಸಾಲ ಹಾಗೂ ಇಎಂಐ ಮರುಪಾವತಿ ವಿನಾಯಿತಿಗೆ ಆನ್ ಲೈನ್ ಮೂಲಕವೇ ನೇರವಾಗಿ ಅಪ್ಲೈ ಮಾಡಬಹುದು. ಈ ಯೋಜನೆಯನ್ನು ಪಡೆಯಲು ಆ ಸಾಲಗಾರರು ಅರ್ಹರೆ ಎಂಬುದನ್ನು ಗಮನಿಸಿ, ಬ್ಯಾಂಕ್ ನಿಂದ ನಿರ್ಧಾರ ಕೈಗೊಳ್ಳಲಾಗುತ್ತದೆ.
ಹೆಚ್ಚುವರಿಯಾಗಿ ಬಡ್ಡಿ ಕಟ್ಟಬೇಕಾಗುತ್ತದೆ
ಸರಿ, ಮರು ಹೊಂದಾಣಿಕೆ ಆಯಿತು, ಸಾಲ ಕಟ್ಟಬೇಕಿಲ್ಲವೇ ಅಂದರೆ, ಅದು ಹಾಗಲ್ಲ. ಸಾಲದ ಮೊತ್ತದ ಮೇಲೆ ಬಡ್ಡಿ ಪಾವತಿಸಬೇಕಾಗುತ್ತದೆ. ಸಾಲ ಮರು ಹೊಂದಾಣಿಕೆ ಯೋಜನೆಯಲ್ಲಿ ಹೆಚ್ಚುವರಿ ಬಡ್ಡಿ ಹಾಗೂ ಶುಲ್ಕ ಬೀಳುತ್ತದೆ. ಒಟ್ಟಾರೆ ವೆಚ್ಚವನ್ನು ಇದು ಹೆಚ್ಚು ಮಾಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿರುವ ಸ್ಕೀಮ್ ನಂತೆ, ಸದ್ಯಕ್ಕೆ ನೀವು ಪಡೆದಿರುವ ಸಾಲದ ಬಡ್ಡಿ ದರದ ಮೇಲೆ ವಾರ್ಷಿಕವಾಗಿ ಹೆಚ್ಚುವರಿಯಾಗಿ 0.35% ಪಾವತಿಸಬೇಕಾಗುತ್ತದೆ. ಇನ್ನು ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಸಾಲ ಮರು ಹೊಂದಾಣಿಕೆಗೆ ಹೆಚ್ಚುವರಿಯಾಗಿ ಪ್ರೊಸೆಸಿಂಗ್ ಶುಲ್ಕ ಬೀಳುತ್ತದೆ.
ಮರುಪಾವತಿ ಅವಧಿ ದೀರ್ಫವಾಗುತ್ತದೆ
ಸಾಲ ಮರುಹೊಂದಾಣಿಕೆ ಯೋಜನೆ ಅಡಿಯಲ್ಲಿ ಮರು ಪಾವತಿ ಅವಧಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಬಾಕಿ ಅವಧಿಗೆ ಹೆಚ್ಚಿನ ಮೊತ್ತವನ್ನು ಕಟ್ಟಬೇಕಾಗುತ್ತದೆ. ಈ ಅವಧಿಯಲ್ಲಿ ಕಟ್ಟಬೇಕಾದ ಬಡ್ಡಿಯ ಮೊತ್ತ ಹೆಚ್ಚಾಗುವಂತೆ ಮಾಡುತ್ತದೆ. ಪ್ರೊಸೆಸಿಂಗ್ ಶುಲ್ಕ 2%ಗೆ ಗರಿಷ್ಠ ಮಿತಿಯನ್ನು ವಿಧಿಸಲಾಗುತ್ತದೆ. ಸಾಲ ಮರುಪಾವತಿಯಲ್ಲಿ ವಿನಾಯಿತಿ ಪಡೆದುಕೊಂಡ ಮೇಲೆ ಅವಧಿ ಹೆಚ್ಚಾಗುವುದು ಒಂದು ಕಡೆಯಾದರೆ, ಬಡ್ಡಿ ದರದಲ್ಲಿ ಕೂಡ ಹೆಚ್ಚಳ ಆಗುತ್ತದೆ. ನಿಮಗೆ ನೆನಪಿರಲಿ, ಸಾಲ ಮರು ಹೊಂದಾಣಿಕೆಗೆ ಹೋಗಬಹುದು. ಆದರೆ ಇದರಿಂದ ನೀವು ಉಳಿತಾಯ ಮಾಡುವುದಕ್ಕಿಂತ ಹೆಚ್ಚಿನದನ್ನು ಕಟ್ಟುವಂತಾಗುತ್ತದೆ. ಆದ್ದರಿಂದ ಇಎಂಐ ಅನ್ನು ಸರಿಯಾದ ಸಮಯಕ್ಕೆ ಕಟ್ಟುವುದು ಅತ್ಯುತ್ತಮ ಆಯ್ಕೆ. ಏಕೆಂದರೆ, ಮರುಹೊಂದಾಣಿಕೆ ಅಂದರೆ ಸಂಪೂರ್ಣ ಉಚಿತವಾಗಿರುತ್ತದೆ ಅಂದುಕೊಳ್ಳದಿರಿ. ಬಡ್ಡಿಯನ್ನಂತೂ ಕಟ್ಟಲೇಬೇಕಾಗುತ್ತದೆ. ಮರುಪಾವತಿ ಅವಧಿ ದೀರ್ಘವಾಗುವುದರಿಂದ ವೆಚ್ಚವೂ ಹೆಚ್ಚಾಗಲಿದೆ. ಸನ್ನಿವೇಶ ಹಾಗೂ ಆರ್ಥಿಕ ಸ್ಥಿತಿಯನ್ನು ಅಳೆದು- ತೂಗಿ ನೋಡಿದ ನಂತರ ತೀರ್ಮಾನ ಕೈಗೊಳ್ಳುವುದು ಉತ್ತಮ.


Click it and Unblock the Notifications