ಅರ್ಹ ರೈತರುಗಳು ಪ್ರಸ್ತುತ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 14ನೇ ಕಂತಿನ ಮೊತ್ತಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಮೊತ್ತ ಯಾವ ದಿನ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರವು ಶೀಘ್ರವೇ ಮಾಹಿತಿಯನ್ನು ನೀಡಲು ಸಿದ್ಧವಾಗಿದೆ. ಈ ಕಂತಿನ ಮೊತ್ತವು 2023ರ ಏಪ್ರಿಲ್ ಹಾಗೂ ಜುಲೈ ನಡುವೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕಳೆದ ಬಾರಿ ಫೆಬ್ರವರಿ (ಫೆಬ್ರವರಿ 27) ಅಂತ್ಯದಲ್ಲಿ ಅರ್ಹ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ 14ನೇ ಕಂತಿನ ಮೊತ್ತ ಯಾವಾಗ ಜಮೆಯಾಗುತ್ತದೆ ಎಂಬ ಕಾತುರ ರೈತರಲ್ಲಿದೆ. ಪಿಎಂ ಕಿಸಾನ್ ನಿಧಿಯ 14ನೇ ಕಂತಿನ ಮೊತ್ತವು ಲಕ್ಷಾಂತರ ರೈತರಿಗೆ ಲಭ್ಯವಾಗಲಿದೆ.

ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ ಅರ್ಹ ರೈತರುಗಳು ವಾರ್ಷಿಕವಾಗಿ 6 ಸಾವಿರ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ರೈತರು ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ರೂಪಾಯಿ ಪಡೆಯಲಿದ್ದಾರೆ. ಈ ಮೊತ್ತವು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಅರ್ಜಿ ಹೀಗೆ ಸಲ್ಲಿಸಿ
ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ Farmer's Corner ಗೆ ಹೋಗಿ 'New Farmer Registration' ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಹಾಕಿ
ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: YES ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ
ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್ ಔಟ್ ಅನ್ನು ತೆಗೆಯಿರಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ಭೂಮಿ ನಿಮ್ಮ ಹೆಸರಿನಲ್ಲಿ ಇದೆ ಎಂದು ಖಾತರಿಪಡಿಸುವ ಜಾಗದ ಪತ್ರ
* ನಾಗರಿಕ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಬ್ಯಾಂಕ್ ಖಾತೆಯ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ
ಸ್ಟೇಟಸ್ ಪರಿಶೀಲನೆ ಮಾಡಿ
ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
ಹಂತ 2: ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ Beneficiary Status ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 5: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ


Click it and Unblock the Notifications