ಸರಿಯಾದ ಸಮಯಕ್ಕೆ ಅಗತ್ಯವಾದ ಮಾಹಿತಿ ಇದ್ದರೆ ಸಾಕು, ಷೇರು ಮಾರ್ಕೆಟ್ ನಲ್ಲಿ ಯಶಸ್ವಿ ಆಗಬಹುದು. ಈಗಿನ ಇಂಟರ್ ನೆಟ್ ಯುಗದಲ್ಲಿ ಮಾಹಿತಿ ಎಂಬುದು ದುಬಾರಿ ಏನಲ್ಲ. ಆದರೂ ಸಾಮಾನ್ಯ ಹೂಡಿಕೆದಾರರು ತುಂಬ ನಿಖರವಾದ ಮಾಹಿತಿಯನ್ನು ನಿರೀಕ್ಷೆ ಮಾಡುತ್ತಾರೆ. ಅದರಿಂದ ತನಗೆ ಶ್ರೀಮಂತಿಕೆ ಬಂದು ಬಿಡಬೇಕು ಎಂಬುದು ಲೆಕ್ಕಾಚಾರ ಆಗಿರುತ್ತದೆ.
ಬಹಳ ಮಂದಿಗೆ ಗೊತ್ತಿರದ ವಿಚಾರ ಏನೆಂದರೆ ಈ ಹಿಂದೆಯೂ ತುಂಬ ಗಟ್ಟಿಯಾದ ಮಾಹಿತಿಯೇ ಸಿಕ್ಕಿರುತ್ತದೆ. ಆದರೂ ಕೋಟ್ಯಧಿಪತಿ ಅಂತೇನೂ ಆಗಿರುವುದಿಲ್ಲ. ಏಕೆಂದರೆ, ಷೇರು ಮಾರ್ಕೆಟ್ ಅಂದರೆ ಬುದ್ಧಿವಂತಿಕೆ, ದುಡ್ಡು, ಲೆಕ್ಕಾಚಾರ ಮಾತ್ರ ಅಲ್ಲ. ಅದಕ್ಕೆ ಮಾನಸಿಕ ಸ್ಥಿತಿ ಸಹ ಅಷ್ಟೇ ಮುಖ್ಯ. ಅದನ್ನೇ ಈ ಲೇಖನದಲ್ಲಿ ಪ್ರಸ್ತಾವ ಮಾಡಲಾಗುತ್ತಿದೆ. ಇವುಗಳು ನಿಮ್ಮಲ್ಲಿವೆಯೇ ಪರೀಕ್ಷಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ರೂಢಿಸಿಕೊಳ್ಳಿ.
ಭಾವೋದ್ವೇಗಕ್ಕೆ ಒಳಗಾಗುತ್ತೀರಾ?
ಹೂಡಿಕೆದಾರರಿಗೆ ಬುದ್ಧಿವಂತಿಕೆಗಿಂತ ಸ್ಥಿತಪ್ರಜ್ಞ ಮನಸ್ಥಿತಿ ಮುಖ್ಯ. ನಿಮ್ಮ ಜತೆಗೆ ಬಹಳ ದೊಡ್ಡ ಸಂಖ್ಯೆಯ ಜನರಿದ್ದಾರೆ ಎಂಬ ಸಂಗತಿ ಅತಿಯಾದ ಸಂತೋಷವನ್ನು ನೀಡಬಾರದು, ಅಥವಾ ನಿಮ್ಮ ಆಲೋಚನೆಗೆ ವಿರುದ್ಧವಾಗಿ ಜನರ ಗುಂಪಿದೆ ಎಂದು ಕುಗ್ಗಲೂ ಬಾರದು ಎಂದಿದ್ದಾರೆ ಜಗತ್ ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್.
* ನಿಮ್ಮ ಪೋರ್ಟ್ ಫೋಲಿಯೋ ಹತ್ತು ಪರ್ಸೆಂಟ್ ಗಿಂತ ಹೆಚ್ಚು ನಷ್ಟ ಕಂಡಲ್ಲಿ ಗಾಬರಿ ಆಗುತ್ತೀರಾ?
* ನಿಮ್ಮ ಈಕ್ವಿಟಿ ಹೂಡಿಕೆಯನ್ನು ಐದು ವರ್ಷಗಳ ಕಾಲ ಇರಿಸಿಕೊಳ್ಳುವುದು ದೀರ್ಘ ಸಮಯ ಎನಿಸುತ್ತದೆಯಾ?
* ಯಾವ ಷೇರು ಲಾಭದಲ್ಲಿದೆಯೋ ಅದನ್ನು ಮಾರಿ, ಯಾವುದು ನಷ್ಟದಲ್ಲಿದೆಯೋ ಅದನ್ನು ಇರಿಸಿಕೊಳ್ಳುತ್ತೀರಾ?
* ಮಾರ್ಕೆಟ್ ನ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತೀರಾ?
* ಮಾರ್ಕೆಟ್ ಅವಧಿಯಲ್ಲಿ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕಣ್ಣು ಕೀಲಿಸಿ ಕೂರುತ್ತೀರಾ?
* ಅವಕಾಶ ಕಳೆದುಕೊಂಡಾಗ ಬಹಳ ಬೇಸರ ಮಾಡಿಕೊಳ್ಳುತ್ತೀರಾ?
* ಟ್ರೇಡಿಂಗ್ ಮಾಡುವುದರಿಂದ ನಿಮ್ಮ ರಿಟರ್ನ್ಸ್ ಜಾಸ್ತಿ ಆಗುತ್ತದೆ ಎಂದು ನಂಬುತ್ತೀರಾ?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕೇಳಿಕೊಳ್ಳಿ. ಯಾವುದಾದರೂ ಒಂದಕ್ಕೆ ನಿಮ್ಮ ಉತ್ತರ 'ಹೌದು' ಎಂದಾದರೂ ನಿಮ್ಮ ಭಾವೋದ್ವೇಗದ ಕಡೆಗೆ ಗಮನ ನೀಡಬೇಕು. ಷೇರು ಮಾರ್ಕೆಟ್ ಹೂಡಿಕೆ ವಿಚಾರ ಬಂದಾಗ ಮಾಹಿತಿ 1 ಪರ್ಸೆಂಟ್ ಮಾತ್ರ. ಭಾವೋದ್ವೇಗ 99 ಪರ್ಸೆಂಟ್ ಕೆಲಸ ಮಾಡುತ್ತದೆ.
ಪ್ರತಿ ವರ್ಷ ಸ್ಥಿರವಾದ ರಿಟರ್ನ್ಸ್ ನಿರೀಕ್ಷಿಸುತ್ತೀರಾ?
ನಿಮ್ಮ ಆರ್ಥಿಕ ಸಲಹೆಗಾರರು, ವರ್ಷಕ್ಕೆ ಹನ್ನೆರಡು ಪರ್ಸೆಂಟ್ ರಿಟರ್ನ್ಸ್ ಸಿಗುವುದಾಗಿಯೂ ಹಾಗೂ ಮುಂದಿನ ಐದರಿಂದ ಹತ್ತು ವರ್ಷದಲ್ಲಿ ಅದು ಸೇರಿಕೊಳ್ಳುತ್ತಾ ಹೋಗುತ್ತದೆ ಎಂದಿದ್ದಾರೆ. ಈ ರಿಟರ್ನ್ಸ್ ಪ್ರತಿ ವರ್ಷ ಸಿಗಲಿ ಎಂದುಕೊಳ್ಳುತ್ತೀರಾ? 'ದೀರ್ಘಾವಧಿ' ಹೂಡಿಕೆ ಎಂದಾಗ ಮಧ್ಯದಲ್ಲಿ ಅಲ್ಲೋ ಇಲ್ಲೋ ನಷ್ಟ ಆಗುತ್ತದೆ. ಒಂದು ವೇಳೆ ಈಕ್ವಿಟಿಯಲ್ಲಿ ನಿರಂತರವಾಗಿ ರಿಟರ್ನ್ಸ್ ಸಿಗುವಂತಿದ್ದರೆ ಯಾರಾದರೂ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಏಕೆ ತೊಡಗಿಸುತ್ತಾರೆ? ಷೇರು ಮಾರ್ಕೆಟ್ ನಲ್ಲಿ ಏರಿಳಿತ ಜಾಸ್ತಿ ಎಂಬ ಕಾರಣಕ್ಕೆ ಬಹಳ ಮಂದಿ ಅಲ್ಲಿ ಹಣ ಹೂಡಲು ಆಲೋಚಿಸುತ್ತಾರೆ. ಷೇರಿನಲ್ಲೋ ಅಥವಾ ಮ್ಯೂಚುವಲ್ ಫಂಡ್ ನಲ್ಲೋ ಹೂಡಿಕೆ ಮಾಡಿದ ತಕ್ಷಣ ಒಬ್ಬ ವ್ಯಾಪಾರಿ ರೀತಿಯಲ್ಲಿ ಆಲೋಚನೆ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ, ಅದಷ್ಟೇ ಮಾಡದೆ ಕೆಲಸ- ಕಾರ್ಯಗಳನ್ನೂ ಮಾಡಿಕೊಂಡಿರುತ್ತೀರಿ. ಅದರಲ್ಲಿ ಖಂಡಿತಾ ಸಕ್ರಿಯರಾಗಿ ತೊಡಗಿರುವುದಿಲ್ಲ. ಆದ್ದರಿಂದ ವ್ಯಾಪಾರ ನಿಮಗೆ ಹೊಂದುತ್ತದೆಯೇ? ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ಸೂಕ್ತವೇ? ಈಕ್ವಿಟಿಯಲ್ಲಿ ಹೂಡಿಕೆ ಮಾಡಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳಬಾರದು.
ಪ್ರತಿ ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲೂ ಲಾಭದ ನಿರೀಕ್ಷೆ
ಒಬ್ಬ ಉದ್ಯಮಿ ಪ್ರತಿ ವ್ಯವಹಾರದಲ್ಲೂ ಲಾಭ ಕಾಣುತ್ತಾನೆ ಅಂತ ನಿಮಗೆ ಅನಿಸುತ್ತದೆಯೆ? ಕೆಲವು ವ್ಯವಹಾರದಲ್ಲಿ ಬರುವುದೇ ಅರ್ಧ ದುಡ್ಡು ಅಥವಾ ಬರುವುದೇ ಇಲ್ಲ. ಆದರೆ ದೀರ್ಘಾವಧಿಯಲ್ಲಿ ಒಳ್ಳೆ ಲಾಭ ಮಾಡುವ ನಿರೀಕ್ಷಿಯಿಂದಲೇ ಉದ್ಯಮವನ್ನು ಮುಂದುವರಿಸುತ್ತಾರೆ ಅಲ್ಲವೆ? ಮ್ಯೂಚುವಲ್ ಫಂಡ್ ಹಾಗೂ ಷೇರುಗಳು ಸಹ ಅದೇ ಥರ. ಎಲ್ಲ ಷೇರು, ಮ್ಯೂಚುವಲ್ ಫಂಡ್ ನಲ್ಲಿ ಲಾಭ ಮಾಡಲು ಆಗಲ್ಲ. ಕೆಲವು ಹೂಡಿಕೆಯಲ್ಲಿ ನಷ್ಟವಾಗುತ್ತದೆ. ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರರು ಎನಿಸಿಕೊಂಡವರು ಸಹ ಆಗೀಗ ನಷ್ಟ ಅನುಭವಿಸುತ್ತಾರೆ. ವಾರೆನ್ ಬಫೆಟ್, ಪೀಟರ್ ಲಿಂಚ್, ಫಿಲಿಪ್ ಫಿಷರ್, ರಾಕೇಶ್ ಜುಂಜುನ್ ವಾಲಾ, ವಿಜಯ್ ಕೇಡಿಯಾ ಮುಂತಾದವರು ಉದಾಹರಣೆಯಾಗಿ ಸಿಗುತ್ತಾರೆ. ಹೂಡಿಕೆ ಮಾಡಿದ ಹತ್ತರಲ್ಲಿ ಎರಡು ಷೇರಿನಲ್ಲಿ ಹಣ ಕಳೆದುಕೊಳ್ಳುತ್ತಾರೆ. ಆದರೂ ಅವರು ಶ್ರೀಮಂತರಾಗಿ ಉಳಿದಿದ್ದಾರೆ. ಆದ್ದರಿಂದ ಒಟ್ಟಾರೆ ಪೋರ್ಟ್ ಫೋಲಿಯೋದಿಂದ ಎಷ್ಟು ಲಾಭ ಆಗಿದೆ ಎಂಬ ಕಡೆಗೆ ಗಮನ ಇರಬೇಕು. ಒಂದೆರಡು ಮ್ಯೂಚುವಲ್ ಫಂಡ್ ಅಥವಾ ಷೇರಿನಲ್ಲಿ ನಷ್ಟವಾದಲ್ಲಿ ಚಿಂತಿಸುತ್ತಾ ಕೂರುವವರ ಪಾಲಿಗೆ ಷೇರು ಮಾರ್ಕೆಟ್ ಸೂಕ್ತವಲ್ಲ. ಹೂಡಿಕೆ ಮಾಡಿ, ಅದರಿಂದ ನಿದ್ದೆ ಕೆಡಿಸಿಕೊಂಡು, ಹಣ ಮಾಡಬೇಕಾ?


Click it and Unblock the Notifications