ನಾವು 2 ಸಾವಿರ ರೂಪಾಯಿಯ ನೋಟನ್ನು ನೋಡಿಯೇ ಅದೆಷ್ಟೋ ದಿನಗಳು ಆಗಿರಬಹುದು. ಪ್ರಸ್ತುತ ಎಟಿಎಂಗಳಲ್ಲಿಯೂ 2 ಸಾವಿರ ರೂಪಾಯಿಯ ನೋಟು ಲಭ್ಯವಾಗಲ್ಲ. ಅದಕ್ಕೆ ಮುಖ್ಯ ಕಾರಣ ಆರ್‌ಬಿಐ 3 ವರ್ಷಗಳ ಹಿಂದೆಯೇ 2 ಸಾವಿರ ರೂಪಾಯಿ ನೋಟಿನ ಮುದ್ರಣ ಸ್ಥಗಿತ ಮಾಡಿರುವುದು. ಆದರೆ ಆರ್‌ಬಿಐ ನೋಟು ಮುದ್ರಣ ಸ್ಥಗಿತ ಮಾಡಿದ್ದು ಯಾಕೆ?
ನವೆಂಬರ್ 8, 2017ರಲ್ಲಿ ಕೇಂದ್ರ ಸರ್ಕಾರವು 500 ಹಾಗೂ 1000 ರೂಪಾಯಿ ನೋಟನ್ನು ಅಪನಗದೀಕರಣ ಮಾಡಲಾಗಿದೆ ಎಂದು ಘೋಷಣೆ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಘೋಷಣೆಯನ್ನು ಮಾಡಿದ್ದಾರೆ. ಅದಾದ ಬಳಿಕ 500 ರೂಪಾಯಿ ಹಾಗೂ 2000 ರೂಪಾಯಿಯ ಹೊಸ ನೋಟನ್ನು ಆರ್‌ಬಿಐ ಜಾರಿಗೆ ತಂದಿದೆ.
ಈ ಪೈಕಿ ನಾವು ಪ್ರಸ್ತುತ ಅಧಿಕವಾಗಿ 500 ರೂಪಾಯಿ ನೋಟನ್ನು ಹೆಚ್ಚಾಗಿ ಕಾಣಬಹುದು. ಆದರೆ 2000 ರೂಪಾಯಿ ನೋಟು ಚಲಾವಣೆ ಇತ್ತೀಚೆಗೆ ತೀರಾ ಕಡಿಮೆಯಾಗಿದೆ. ಆರ್‌ಬಿಐ ನೋಟಿನ ಮುದ್ರಣ ಕೂಡಾ ಮಾಡಿಲ್ಲ. ಆದರೆ ಸರ್ಕಾರವೇ ಅಪನಗದೀಕರಣ ಮಾಡಿ, ಜಾರಿಗೆ ತಂದ ಹೊಸ ನೋಟಾದ 2 ಸಾವಿರ ರೂಪಾಯಿ ನೋಟಿನ ಮುದ್ರಣ ಯಾಕೆ ಮಾಡಲಾಗುತ್ತಿಲ್ಲ, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ನೋಟು ಮುದ್ರಿಸದಿರಲು ಕಾರಣವೇನು?
ಈ ಬಗ್ಗೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಬಿಜೆಪಿ ಸಂಸದ ಸುಶೀಲ್ ಮೋದಿ, "3 ವರ್ಷಗಳ ಹಿಂದೆಯೇ ಆರ್‌ಬಿಐ 2 ಸಾವಿರ ರೂಪಾಯಿಯ ನೋಟಿನ ಮುದ್ರಣ ಮಾಡುವುದನ್ನೇ ನಿಲ್ಲಿಸಿದೆ. ಜನರು 2 ಸಾವಿರ ರೂಪಾಯಿ ನೋಟನ್ನು ಸಂಗ್ರಹ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಭಯೋತ್ಪಾದಕರಿಗೆ ಫಂಡಿಂಗ್ ನೀಡಲು, ಡ್ರಗ್ ಟ್ರಾಫಿಕಿಂಗ್‌ಗೆ, ಕಪ್ಪು ಹಣವಾಗಿ ಬಳಕೆ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ. "ನಾವು ಪ್ರಮುಖ ಅಭಿವೃದ್ಧಿ ಹೊಂದಿರುವ ಆರ್ಥಿಕತೆ ಇರುವ ಯುಎಸ್, ಚೀನಾ, ಜರ್ಮನಿ, ಜಪಾನ್ ದೇಶವನ್ನು ನೋಡಿದಾಗ ಅಲ್ಲಿ 100ಕ್ಕಿಂತ ಅಧಿಕ ಮುಖಬೆಲೆಯ ಕರೆನ್ಸಿಗಳು ಇಲ್ಲ. ಆದ್ದರಿಂದಾಗಿ ಕೇಂದ್ರ ಸರ್ಕಾರವು ಈ ಬಗ್ಗೆ ಚಿಂತನೆ ನಡೆಸಬೇಕು. 2 ಸಾವಿರ ರೂಪಾಯಿ ನೋಟನ್ನು ಹಂತ ಹಂತವಾಗಿ ಬ್ಯಾನ್ ಮಾಡಿ. 2 ಸಾವಿರ ರೂಪಾಯಿ ನೋಟನ್ನು ಬದಲಾವಣೆ ಮಾಡಿಸಿಕೊಳ್ಳಲು ಜನರಿಗೆ ಸರಿಯಾದ ಸಮಯ ಸಿಗುವ ರೀತಿಯಲ್ಲಿ ನೋಟನ್ನು ಬ್ಯಾನ್ ಮಾಡಿ," ಎಂದು ಕೂಡಾ ಬಿಜೆಪಿ ಸಂಸದ ಸುಶೀಲ್ ಮೋದಿ ತಿಳಿಸಿದ್ದಾರೆ.
2000 ರೂಪಾಯಿಯ ಎಷ್ಟು ನೋಟು ಮುದ್ರಿಸಲಾಗಿದೆ?
ಎಐಎನ್‌ಎಸ್ ಸುದ್ದಿ ಸಂಸ್ಥೆಗೆ ಆರ್‌ಟಿಐಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಕಳೆದ ಮೂರು ವರ್ಷದಲ್ಲಿ 2 ಸಾವಿರ ರೂಪಾಯಿಯ ಯಾವುದೇ ಹೊಸ ನೋಟಿನ ಮುದ್ರಣ ಮಾಡಲಾಗಿಲ್ಲ. ಅಂದರೆ 2019-20, 2020-21 ಹಾಗೂ 2021-2022ರಲ್ಲಿ 2 ಸಾವಿರ ರೂಪಾಯಿ ನೋಟುಗಳು ಮುದ್ರಣವಾಗಿಲ್ಲ. 2016-17ರಲ್ಲಿ ಆರ್‌ಬಿಐನ ನೋಟು ಮುದ್ರಣ ಲಿಮಿಟೆಡ್ 2000 ರೂಪಾಯಿ ಮೌಲ್ಯದ 3,5429.91 ಕೋಟಿ ನೋಟುಗಳನ್ನು ಮುದ್ರಣ ಮಾಡಿತ್ತು. 2018-19ರಲ್ಲಿ 2000 ರೂಪಾಯಿ ಮೌಲ್ಯದ 466.90 ಕೋಟಿ ನೋಟುಗಳನ್ನು ಮಾತ್ರ ಮುದ್ರಣ ಮಾಡಲಾಗಿದೆ. 2017-18ರಲ್ಲಿ 2000 ರೂಪಾಯಿ ಮೌಲ್ಯದ 1115.07 ಕೋಟಿ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದೇನು?
ಆರ್‌ಬಿಐ 2 ಸಾವಿರ ರೂಪಾಯಿಯ ನೋಟು ಮುದ್ರಣವನ್ನು ಯಾಕಾಗಿ ನಿಲ್ಲಿಸಿದೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಹೇಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ಕೆಲವರು ಆರ್‌ಬಿಐ ನೋಟು ಮುದ್ರಣ ಸ್ಥಗಿತ ಮಾಡಿದ್ದರೂ, ಈಗಾಗಲೇ ಮುದ್ರಣ ಮಾಡಿರುವ ನೋಟುಗಳು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸರ್ಕಾರವೇ ಮಾಡಿರುವ ಕಾರ್ಯ, ಈಗ ಸರ್ಕಾರದ ಪ್ರತಿನಿಧಿಯಿಂದಲೇ ಭಿನ್ನಾಭಿಪ್ರಾಯವೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಆರ್‌ಟಿಐ ಕಾರ್ಯಕರ್ತ ಅಜಯ್ ಬೋಸ್, ಆರ್‌ಬಿಐ ನೋಟು ಮುದ್ರಣ ನಿಲ್ಲಿಸಿರುವ ಬಗ್ಗೆ ಆರ್‌ಟಿಐ ಮಾಹಿತಿ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ. 2 ಸಾವಿರ ರೂಪಾಯಿ ನೋಟು ಆರಂಭ ಮಾಡಿದ್ದಕ್ಕೆ ನರೇಂದ್ರ ಮೋದಿಯನ್ನು ಸುಶೀಲ್ ಮೋದಿ ದೂರುತ್ತಿದ್ದಾರೆಯೇ ಎಂದು ಮತ್ತೋರ್ವ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. ಈ ನಡುವೆ 2 ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಲಾಗುತ್ತದೆ ಎಂಬ ವದಂತಿಗಳು ಹರಡುತ್ತಿದೆ.


Click it and Unblock the Notifications