ಭಾರತದಲ್ಲಿ ವಿವಾಹವೆಂದರೆ ಒಂದು ಹಬ್ಬವೇ ಹೌದು. ದುಬಾರಿ ಬಟ್ಟೆ, ಉಡುಗೊರೆ, ನೂರಾರು ಮಂದಿ ಅತಿಥಿಗಳು, ಸಿಹಿತಿನಿಸು, ಭರ್ಜರಿ ಭೋಜನ ಇವೆಲ್ಲವೂ ಕೂಡಾ ಸಾಮಾನ್ಯವಾಗಿ ನಾವು ಯಾವುದೇ ವಿವಾಹದಲ್ಲಿ ಕಾಣುವ ದೃಶ್ಯಗಳಾಗಿದೆ. ವಿವಾಹವೇ ಒಂದು ಹಬ್ಬವೆಂದರೆ ತಪ್ಪಾಗಲಾರದು. ಇಲ್ಲೊಂದು ದೆಹಲಿಯ ಅದ್ದೂರಿ ವಿವಾಹದಲ್ಲಿ ವರನಿಗೆ 33 ಕೋಟಿ ರೂಪಾಯಿಯ ಚಾಪರ್ (ಹೆಲಿಕಾಫ್ಟರ್) ಅನ್ನು ಉಡುಗೊರೆಯಾಗಿ ನೀಡಲಾಗಿದೆ!
ಹೌದು ಭಾರತದಲ್ಲಿ ಸಾಮಾನ್ಯವಾಗಿಯೇ ವಿವಾಹವೆಂದರೆ ಒಂದು ಅತೀ ಹೆಚ್ಚಾಗಿ ಖರ್ಚು ಮಾಡಬೇಕಾದ ನಮ್ಮ ಬಾಳಿನ ಮಹತ್ವದ ಘಟ್ಟವಾಗಿದೆ. ಜನರು ವಿವಾಹಕ್ಕೆ ಅತೀ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಅತೀ ಕಡಿಮೆ ಖರ್ಚಿನಲ್ಲಿ ಸರಳವಾಗಿ ವಿವಾಹವಾಗುವವರು ಕೂಡಾ ಇದ್ದಾರೆ. ಆದರೆ ಎಷ್ಟು ಶ್ರೀಮಂತರಾಗಿರುತ್ತಾರೋ ಅಷ್ಟು ಅದ್ದೂರಿಯಾಗಿ ವಿವಾಹ ಎಂಬಂತಾಗಿದೆ. ಅಂತಹ ಅದ್ದೂರಿಯಾದ ವಿವಾಹ ನಡೆದಿದ್ದು 2011ರಲ್ಲಿ ದೆಹಲಿಯಲ್ಲಿ.

500 ಕೋಟಿ ರೂಪಾಯಿ ಖರ್ಚಿನಲ್ಲಿ ನಡೆಸಿದ ವಿವಾಹ
ಅಷ್ಟಕ್ಕೂ ಈ ಅದ್ದೂರಿ ವಿವಾಹ ಉದ್ಯಮಿ ಹಾಗೂ ರಾಜಕಾರಣಿಯಾದ ಕನ್ವರ್ ಸಿಂಗ್ ತನ್ವರ್‌ನ ಪುತ್ರ ಲಲಿತ್ ತನ್ವರ್‌ನದ್ದು. 2011ರಲ್ಲಿ ನಡೆದ ಲಲಿತ್ ತನ್ವರ್ ವಿವಾಹವು ಅತೀ ಅದ್ದೂರಿ ಹಾಗೂ ವಿಜ್ರಂಭನೆಯ ವಿವಾಹವಾಗಿದೆ. ಆದರೆ ಈವರೆಗೂ ಈ ವಿವಾಹಕ್ಕಾಗಿ ನಿರ್ದಿಷ್ಟವಾಗಿ ಕುಟುಂಬ ಎಷ್ಟು ಖರ್ಚು ಮಾಡಿದೆ ಎಂಬ ಲೆಕ್ಕಾಚಾರವಿಲ್ಲ. ಟೈಮ್ಸ್ ಆಫ್ ಇಂಡಿಯಾ ಈ ವಿವಾಹವು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದೆ ಎಂದು ವರದಿ ಮಾಡಿದರೆ, ಮೇಲ್ ಟುಡೇ ಪ್ರಕಾರ ಇದು 500 ಕೋಟಿ ರೂಪಯಿ ವೆಚ್ಚದ ವಿವಾಹವಾಗಿದೆ!
ನಾವು ಯೋಚನೆ ಮಾಡಲು ಸಾಧ್ಯವಾಗದ್ದಂತಹ ವಿವಾಹ ಇದಾಗಿದ್ದು ವಿವಾಹಕ್ಕೆ ಬಂದವರಿಗೆ ದುಬಾರಿಯಾದ ಉಡುಗೊರೆ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನು ವರ, ವಧು ಪರಸ್ಪರ ಉಡುಗೊರೆಯನ್ನು ನೀಡಿದ್ದಾರೆ. ವಧುವಿನ ಕುಟುಂಬವು ವರನಿಗೆ ಬೆಲ್ 429 ಹೆಲಿಕಾಫ್ಟರ್ ಅನ್ನು ಗಿಫ್ಟ್ ಆಗಿ ನೀಡಿದೆ. ಈ 5 ಆಸನಗಳನ್ನು ಹೊಂದಿರುವ ಚಾಪರ್‌ನ ಮೌಲ್ಯವು 2011ರಲ್ಲಿ 33 ಕೋಟಿ ರೂಪಾಯಿ ಆಗಿತ್ತು.
ಈ ಉಡುಗೊರೆ ವಿಚಾರವನ್ನು ಮಾತ್ರ ಲಲಿತ್ ತನ್ವರ್ ಖಚಿತಪಡಿಸಿದ್ದಾರೆ. "ಹೌದು, ಬೆಲ್ 429 ಹೆಲಿಕಾಫ್ಟರ್ ಅನ್ನು ಗಿಫ್ಟ್ ಆಗಿ ನೀಡಲಾಗಿದೆ. ಆದರೆ ಇದೊಂದು ಸರಳ ವಿವಾಹ," ಎಂದು ಲಲಿತ್ ತನ್ವರ್ ಹೇಳಿಕೊಂಡಿದ್ದಾರೆ. ಲಲಿತ್ ತನ್ವರ್ ಹಾಗೂ ಯೋಗಿತಾ ಜಾನ್ಪುರಿಯಾರ ವಿವಾಹವು ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ. ಆದರೆ ಈ ವಿವಾಹಕ್ಕೆ ಬಂದ ಅತಿಥಿಗಳ ಸಂಖ್ಯೆಯ ಬಗ್ಗೆ ಹಲವಾರು ಗೊಂದಲಗಳು ಇದೆ.
ಕೆಲವು ಮಾಧ್ಯಮಗಳು 18000 ಅತಿಥಿಗಳು ಈ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದರು ಎಂದು ಹೇಳಿದರೆ, ಇನ್ನು ಕೆಲವು ಮಾಧ್ಯಮಗಳು 30 ಸಾವಿರ ಎಂದಿದೆ. ಇನ್ನು ಕೆಲವು ಮಾಧ್ಯಮಗಳು 12 ಸಾವಿರ ಅತಿಥಿಗಳು ಎಂದು ವರದಿ ಮಾಡಿದೆ. ಆದರೆ ಲಲಿತ್ ತನ್ವರ್ ಮಾತ್ರ "ಇದೊಂದು ಸರಳ ವಿವಾಹ," ಎಂದು ಹೇಳಿಕೊಂಡಿದ್ದದಾರೆ. ಇನ್ನು ಒಂದು ಸಾವಿರ ಕೆಲಸಗಾರರೇ ಈ ವಿವಾಹದಲ್ಲಿದ್ದರು ಎಂದು ವರದಿ ಹೇಳುತ್ತದೆ.
100 ಬಗ್ಗೆಯ ಆಹಾರ
ಈ ಅದ್ದೂರಿ ವಿವಾಹದಲ್ಲಿ ಸುಮಾರು 100 ಬಗೆಯ ಆಹಾರವನ್ನು ಅತಿಥಿಗಳಿಗೆ ನೀಡಲಾಗಿದೆ. ವಿವಾಹ ಸಮಾರಂಭವನ್ನು ಎಲ್ಲರಿಗೂ ನೋಡಲು ಸಾಧ್ಯವಾಗುವಂತೆ 12 ಅತೀ ದೊಡ್ಡ ಟಿವಿಗಳನ್ನು ಇರಿಸಲಾಗಿತ್ತು. ಮದುವೆಯ ಸ್ಥಳಕ್ಕೆ ಹೋಗುವ ಮೂರು ಕಿಲೋಮೀಟರ್ ರಸ್ತೆಯನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು.
ವರದಿ ಪ್ರಕಾರ ನಟಿ ನೇಹಾ ದುಪಿಯಾ ಉದ್ಯಮಿಗಳು ಮತ್ತು ರಾಜಕಾರಣಿಗಳ ಅತ್ಯಂತ ದುಬಾರಿ ಮದುವೆಯಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ವರದಿಯಾಗಿದೆ. ಹಿಂದೂಸ್ತಾನ್ ಟೈಮ್ಸ್‌ನ ವರದಿಗಳ ಪ್ರಕಾರ, ವಿವಾಹಕ್ಕೂ ಒಂದು ವಾರದ ಮೊದಲು ಒಂದು ಸಮಾರಂಭವನ್ನು ಆಯೋಜಿಸಲಾಗಿದೆ. ಇದಕ್ಕೆ 2000 ಅತಿಥಿಗಳು ಆಗಮಿಸಿದ್ದಾರೆ. ಪ್ರತಿ ಅತಿಥಿಗಳಿಗೆ ಬೆಳ್ಳಿ ಬಿಸ್ಕತ್ತು, ಸಫಾರಿ ಸೂಟ್ ಮತ್ತು ಸುಮಾರು 40,000 ನಗದು ಉಡುಗೊರೆಯಾಗಿ ನೀಡಲಾಗಿದೆ.
ದಂಪತಿಗಳು ದೆಹಲಿಯ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ದೊಡ್ಡ ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸಿದ್ದರು. ಲಲಿತ್ ತನ್ವರ್ ಬಿಜೆಪಿ ನಾಯಕ ಕನ್ವರ್ ಸಿಂಗ್ ತನ್ವರ್‌ರ ಪುತ್ರರಾಗಿದ್ದಾರೆ. ಯೋಗಿತಾ ಜಾನ್ಪುರಿಯವರು ಸೋಹ್ನಾದ ಮಾಜಿ ಶಾಸಕ ಸುಖಬೀರ್ ಸಿಂಗ್ ಜಾನ್ಪುರಿಯ ಪುತ್ರಿಯಾಗಿದ್ದಾರೆ. ಲಲಿತ್ ತನ್ವರ್ ಪ್ರಸ್ತುತ ಸಕ್ರಿಯ ರಾಜಕಾರಣಿಯಾಗಿದ್ದು, ಅಮ್ರೋಹಾದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.


Click it and Unblock the Notifications