ದಬಾಂಗ್ 3 ಸಿನಿಮಾ ಅದ್ಯಾವ ಮಟ್ಟದಲ್ಲಿ ದುಡ್ಡು- ಸುದ್ದಿ- ಜನಪ್ರಿಯತೆ ಗಳಿಸಿತೋ ಗೊತ್ತಿಲ್ಲ. ಆದರೆ 'ಕಿಚ್ಚ' ಸುದೀಪ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಗಾಢವಾದ ಸ್ನೇಹವನ್ನಂತೂ ಬೆಳೆಸಿದೆ. ಇದು ಹೇಗೆ ಇವರಿಗೆ ಗೊತ್ತು ಅಂದುಕೊಳುತ್ತೀರಾ? ಈ ಸಲ್ಮಾನ್ ಖಾನ್ ಗೆ ಯಾರಾದರೂ ಇಷ್ಟವಾದರೆ ಅದನ್ನು ಅವರು ವ್ಯಕ್ತಪಡಿಸೋದೆ ಗಿಫ್ಟ್ ಗಳನ್ನು ನೀಡುವ ಮೂಲಕ.
ಈಗ ಏನಾಗಿದೆ ಅಂದರೆ, ಬೆಂಗಳೂರಿನಲ್ಲಿ ಇರುವ ಸುದೀಪ್ ಮನೆಗೇ ಬಂದು ಸಲ್ಮಾನ್ ಖಾನ್ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಕಾಸ್ಟ್ಲಿ ಬಿಎಂಡಬ್ಲ್ಯು M5 ಸೀರೀಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಕಾರಿಗೆ ಬೆಂಗಳೂರಿನಲ್ಲಿ ಎಕ್ಸ್ ಶೋ ಯೇ 1,54,90,000 (ಒಂದು ಕೋಟಿ ಐವತ್ನಾಲ್ಕು ಲಕ್ಷದ ತೊಂಬತ್ತು ಸಾವಿರ). ಇನ್ನು ಆನ್ ರೋಡ್ ಬೆಲೆ 1,95,89,302 ರುಪಾಯಿ ಆಗುತ್ತದೆ.
4,395 ಸಿ.ಸಿ. ಸಾಮರ್ಥ್ಯದ ಕಾರು
ಈ ಬಿಎಂಡಬ್ಲ್ಯು M5 ಸೀರೀಸ್ ಕಾರಿನ ವಿಶೇಷತೆ ಏನು ಗೊತ್ತಾ? ಆಟೋಮೆಟಿಕ್ ಟ್ರಾನ್ಸ್ ಮಿಷನ್, ಪೆಟ್ರೋಲ್ ಎಂಜಿನ್, 4,395 ಸಿ.ಸಿ. ಸಾಮರ್ಥ್ಯದ ಈ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ 9.8 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಬಣ್ಣದ ವಿಷಯಕ್ಕೆ ಬಂದರಂತೂ ಹತ್ತೊಂಬತ್ತು ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ.
ಸುದೀಪ್ ಟ್ವೀಟ್ ನಲ್ಲಿ ಸಲ್ಮಾನ್ ಖಾನ್ ಗೆ ಧನ್ಯವಾದ
"ನೀವು ಒಳ್ಳೆಯದು ಮಾಡಿದಾಗ ನಿಮಗೆ ಒಳ್ಳೆಯದು ಆಗುತ್ತದೆ. ಅವರೊಂದಿಗೆ ಈ ಅಚ್ಚರಿಯನ್ನು ನಮ್ಮ ಮನೆಗೆ ತರುವ ಮೂಲಕ ಈ ಸಾಲುಗಳನ್ನು ನಂಬುವಂತೆ ಮಾಡಿದ್ದಾರೆ ಸಲ್ಮಾನ್ ಖಾನ್. ನನ್ನ ಹಾಗೂ ನನ್ನ ಕುಟುಂಬದ ಮೇಲೆ ತೋರಿಸಿದ ಪ್ರೀತಿಗೆ ಧನ್ಯವಾದಗಳು ಸರ್. ನಿಮ್ಮ ಜತೆ ಕೆಲಸ ಮಾಡಿದ್ದು ಮತ್ತು ನಮ್ಮನ್ನು ಭೇಟಿ ಮಾಡಲು ನೀವು ಬಂದಿದ್ದು ದೊಡ್ಡ ಗೌರವ" ಎಂದು ಸುದೀಪ್ ಟ್ವೀಟ್ ಮಾಡಿ, ಪೋಟೋಗಳನ್ನು ಸಹ ಹಾಕಿದ್ದಾರೆ.
ಶೂಟಿಂಗ್ ಆರಂಭದಲ್ಲೂ ಗಿಫ್ಟ್ ಕೊಟ್ಟಿದ್ದರು
ದಬಾಂಗ್ 3 ಸಿನಿಮಾ ಶೂಟಿಂಗ್ ಶುರುವಿನಲ್ಲಿ ಸುದೀಪ್ ಗೆ ಸಲ್ಮಾನ್ ಖಾನ್ ಕೆಲವು ಟಿ ಷರ್ಟ್ ಗಳನ್ನು ಉಡುಗೊರೆ ನೀಡಿದ್ದರು. ಅಷ್ಟೇ ಅಲ್ಲ, ತಾವು ಬಹಳ ಇಷ್ಟಪಡುವ ಜಾಕೆಟ್ ಕೂಡ ನೀಡಿದ್ದರು. ಆ ಜಾಕೆಟ್ ನಲ್ಲಿ ಅವರಿಗೆ ಬಹಳ ಇಷ್ಟವಾದ ನಾಯಿಯೊಂದರ ಚಿತ್ರ ಇತ್ತು. ತಾವು ಕೊಟ್ಟ ಜಾಕೆಟ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಹಾಕಿದ್ದರು ಸಲ್ಮಾನ್ ಖಾನ್.
ಎಪ್ಪತ್ತು ಲಕ್ಷದ ತನಕ ತೆರಿಗೆ ಕಟ್ಟಬೇಕಾಗುತ್ತದೆ
ಓಹ್, ಸುದೀಪ್ ಗೆ ಒಳ್ಳೆ ಗಿಫ್ಟ್ ಬಂತು ಅನ್ನೋದು ಮಾತ್ರ ವಿಷಯ ಅಲ್ಲ. ಆದಾಯ ತೆರಿಗೆ ಕಾಯ್ದೆ 56(2)(x) ಅಡಿಯಲ್ಲಿ ಉಡುಗೊರೆ ಪಡೆದಿದ್ದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಎರಡು ಕೋಟಿ ರುಪಾಯಿ ಕಾರಿಗೆ ಸುದೀಪ್ ಅವರು ಸಹ ತೆರಿಗೆ ಕಟ್ಟಬೇಕಾಗುತ್ತದೆ. ಮೂವತ್ತೇಳು ಪರ್ಸೆಂಟ್ ತನಕ ತೆರಿಗೆ ಕಟ್ಟಬೇಕಾಗುತ್ತದೆ. ಆ ಒಟ್ಟಾರೆ ತೆರಿಗೆಯ ಪ್ರಮಾಣವೇ ಎಪ್ಪತ್ತು ಲಕ್ಷದ ತನಕ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಾಗುತ್ತದೆ ಎನ್ನುತ್ತಾರೆ ಚಾರ್ಟೆರ್ಡ್ ಅಕೌಂಟೆಂಟ್ ಮುರಳೀಧರ್.


Click it and Unblock the Notifications