ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಹೊಂದಿದೆ. ಈ ಪೈಕಿ ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆ ಕೂಡಾ ಒಂದಾಗಿದೆ. ಇದು ಪ್ರಮುಖವಾಗಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಇರುವ ಯೋಜನೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ, ಹೆರಿಗೆಗೂ ಮುನ್ನ ಮತ್ತು ನಂತರ ವೆಚ್ಚಗಳನ್ನು ನೋಡಿಕೊಳ್ಳಲು ಹಣಕಾಸಿನ ನೆರವು ನೀಡುವುದು, ಮಡಿಲು ಕಿಟ್ ಮೂಲಕ 19 ವಸ್ತುಗಳ ಕಿಟ್ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಯೋಜನೆಯ ನಿರ್ವಹಣೆ ಮಾಡುತ್ತದೆ. ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯು 4 ಪ್ರಮುಖ ಉಪ ಯೋಜನೆಗಳನ್ನು ಹೊಂದಿದೆ. ತಾಯಿ ಭಾಗ್ಯ ಯೋಜನೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಪ್ರಸೂತಿ ಅರೈಕೆ ಯೋಜನೆ, ಮಡಿಲು ಕಿಟ್ ಯೋಜನೆಯು ಇದರಲ್ಲಿ ಒಳಗೊಂಡಿರುತ್ತದೆ. ಪ್ರತಿಯೊಂದು ಉಪ ಯೋಜನೆಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಇದರ ಲಾಭವನ್ನು ಗರ್ಭಿಣಿಯರು ಮತ್ತು ಮಗುವಿಗೆ ಹಾಲುಣಿಸುವ ತಾಯಿ ಪಡೆದಿಕೊಳ್ಳಬಹುದಾಗಿದೆ.

ತಾಯಿ ಭಾಗ್ಯ ಯೋಜನೆಯು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಗರ್ಭಧಾರಣೆಯ ಪೂರ್ವ ಮತ್ತು ನಂತರದ ಅವಧಿಯಲ್ಲಿ ನಗದುರಹಿತ ಚಿಕಿತ್ಸೆ, ಉಚಿತ ಸಾರಿಗೆ ಸೌಲಭ್ಯ, ಉಚಿತ ತಪಾಸಣೆ ಮತ್ತು ಔಷಧಿಯನ್ನು ಒದಗಿಸುವ ಯೋಜನೆಯಾಗಿದೆ. ತಾಯಿ ಭಾಗ್ಯ ಪ್ಲಸ್ ಯೋಜನೆಯು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದವರಿಗೆ 1000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತದೆ.
ಪ್ರಸೂತಿ ಅರೈಕೆ ಯೋಜನೆಯು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಹಾಲುಣಿಸುವ ತಾಯಿಗೆ 3,000 ರೂಪಾಯಿ, ಬಿಪಿಎಲ್ ಹೊಂದಿರುವ ಮಗುವಿಗೆ ಹಾಲುಣಿಸುವ ತಾಯಿಗೆ 2000 ರೂಪಾಯಿ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಮಡಿಲು ಕಿಟ್ ಯೋಜನೆಯಲ್ಲಿ ತಾಯಿ ಮಗುವಿಗೆ ದೈನಂದಿನವಾಗಿ ಬಳಕೆ ಮಾಡಲಾಗುವ 19 ವಸ್ತುಗಳಿರುವ ಸುಮಾರು 1500 ರೂಪಾಯಿ ಮೌಲ್ಯದ ಕಿಟ್ ಅನ್ನು ನೀಡಲಾಗುತ್ತದೆ.
ಯೋಜನೆಯ ಅರ್ಹತೆ ತಿಳಿಯಿರಿ
* ಕರ್ನಾಟಕದ ನಿವಾಸಿಗಳು.
* ನಿಗಿದಿತ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಮಹಿಳೆಯರು
* ಬಿಪಿಎಲ್ ವರ್ಗಕ್ಕೆ ಸೇರಿದ ಮಹಿಳೆಯರು
* ಪರಿಶಿಷ್ಟ ಜಾತಿ/ಪಂಗಡದ ವರ್ಗಕ್ಕೆ ಸೇರಿದ ಮಹಿಳೆಯರು
ಯೋಜನೆಯ ಪ್ರಯೋಜನಗಳೇನು?
* ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ
* ಗರ್ಭಧಾರಣೆಯ ಪೂರ್ವ ಮತ್ತು ನಂತರದ ಅವಧಿಯಲ್ಲಿ ನಗದುರಹಿತ ಚಿಕಿತ್ಸೆ.
* ಉಚಿತ ಸಾರಿಗೆ ಸೌಲಭ್ಯ.
* ತಪಾಸಣೆ ಮತ್ತು ಔಷಧಿಗಳ ವೆಚ್ಚ ಉಚಿತ.
* ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಹಾಲುಣಿಸುವ ತಾಯಿಗೆ 3,000 ರೂಪಾಯಿ ಆರ್ಥಿಕ ಸಹಾಯ
* ಬಿಪಿಎಲ್ ಹೊಂದಿರುವ ಮಗುವಿಗೆ ಹಾಲುಣಿಸುವ ತಾಯಿಗೆ 2000 ರೂಪಾಯಿ ಆರ್ಥಿಕ ನೆರವು
* ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದವರು 1,000 ರೂಪಾಯಿ ಆರ್ಥಿಕ ನೆರವು
* ಮಡಿಲು ಕಿಟ್ ಅಡಿಯಲ್ಲಿ 1500 ರೂಪಾಯಿ ಮೌಲ್ಯದ 19 ವಸ್ತುಗಳು ಲಭ್ಯ
ಬೇಕಾದ ದಾಖಲೆಗಳು ಯಾವುದು?
* ಕರ್ನಾಟಕದ ನಿವಾಸ ಪುರಾವೆ.
* ಬಿಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ.
* ಜಾತಿ ಪ್ರಮಾಣ ಪತ್ರ.
* ಆಧಾರ್ ಕಾರ್ಡ್.
* ಎಎನ್‌ಸಿ ನೋಂದಣಿ ಸಂಖ್ಯೆ.
* ಮೊಬೈಲ್ ನಂಬರ್.
* ಬ್ಯಾಂಕ್ ವಿವರಗಳು.
ಹೇಗೆ ಅರ್ಜಿ ಸಲ್ಲಿಸುವುದು?
ಹಂತ 1: ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಹಂತ 2: ಫಲಾನುಭವಿಗಳು ತಮ್ಮ ಪ್ರದೇಶದ ಆಶಾ ಕಾರ್ಯಕರ್ತೆ ಅಥವಾ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಬಹುದು.
ಹಂತ 3: ಆಶಾ ಕಾರ್ಯಕರ್ತರು ಪ್ರತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.
ಹಂತ 4: ಆಶಾ ಕಾರ್ಯಕರ್ತೆ ಅಥವಾ ಕಿರಿಯ ಕುಟುಂಬ ಆರೋಗ್ಯ ಅಧಿಕಾರಿಯು ಮಹಿಳೆಯರನ್ನು ಈ ಯೋಜನೆಗೆ ನೋಂದಾಯಿಸುತ್ತಾರೆ ಮತ್ತು ಹೆಚ್ಚಿನ ಅನುಮೋದನೆಗಾಗಿ ಅರ್ಜಿಯನ್ನು ರವಾನಿಸುತ್ತಾರೆ.


Click it and Unblock the Notifications