ಕರ್ನಾಟಕ ಕಾಂಗ್ರೆಸ್ ಚುನಾವಣೆಗೂ ಮುನ್ನ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಅಧಿಕಾರಕ್ಕೆ ಬಂದರೆ ಜಾರಿ ಮಾಡಲಾಗುವುದು ಎಂದು ಹೇಳಿತ್ತು. ಅದರಂತೆಯೇ ಈಗ ಸರ್ಕಾರವು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಅನ್ನು ಜಾರಿಗೆ ತರುತ್ತಿದೆ. ಈ ಪೈಕಿ ಮೊದಲು ಜಾರಿಗೆ ಬಂದ ಯೋಜನೆ ಶಕ್ತಿ ಯೋಜನೆಯಾಗಿದೆ.
ಮಹಿಳೆಯರಿಗೆ ಕೆಎಸ್‌ಆರ್‌ಸಿಟಿ ಅಥವಾ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ನೀಡುವ ಈ ಯೋಜನೆಯು ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮೊದಲು ಜಾರಿಗೆ ಬಂದ ಯೋಜನೆಯಾಗಿದೆ. ಪ್ರಸ್ತುತ ಈ ಯೋಜನೆಯು ಭಾರೀ ವಿವಾದಕ್ಕೆ ಕಾರಣವೂ ಆಗಿದೆ. ಆರಂಭದಲ್ಲೇ ಮೀಮ್ಸ್, ಟ್ರೋಲ್‌ಗಳಿಗೂ ಈ ಯೋಜನೆಯು ಗುರಿಯಾಗಿದೆ. ಆದರೆ ಈ ಯೋಜನೆಯಿಂದ ನಿಜವಾಗಿ ಲಾಭ ಯಾರಿಗೆ, ಯಾರಿಗೆ ನಷ್ಟ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

ಶಕ್ತಿ ಯೋಜನೆಯ ಪ್ರಮುಖ ಮಾಹಿತಿ
ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳ ಪೈಕಿ ಪ್ರಮುಖವಾಗಿ ನಾಲ್ಕು ಯೋಜನೆಗಳು ಮಹಿಳೆಯರಿಗೆ ಸಹಾಯವಾಗಿದೆ. ಅನ್ನಭಾಗ್ಯ ಯೋಜನೆಯು ಒಂದು ಕುಟುಂಬಕ್ಕೆ ಸಹಾಯಕವಾಗಿದ್ದರೆ, ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆಯು ಪ್ರಮುಖವಾಗಿ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಯೋಜನೆಗಳಾಗಿದೆ. ಈ ಪೈಕಿ ಜೂನ್ 11ರಂದು ಆರಂಭವಾದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂಬುವುದಾಗಿದೆ. ಇನ್ನು ಈ ಯೋಜನೆ ಆರಂಭವಾಗಿ ಈಗಾಗಲೇ ಒಂದು ತಿಂಗಳು ಕಳೆದಿದೆ.
ಈ ಯೋಜನೆಯಡಿಯಲ್ಲಿ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. 'ಶಕ್ತಿ' ಸ್ಮಾರ್ಟ್‌ಕಾರ್ಡ್ ವಿತರಣೆ ಮಾಡಲು ಇನ್ನೂ ಸರ್ಕಾರ ಆರಂಭಿಸಿಲ್ಲ. 3 ತಿಂಗಳ ಕಾಲ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಜೂನ್ 11 ರಿಂದ ಜುಲೈ 10ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇವರಲ್ಲಿ 16.73 ಕೋಟಿ ಮಹಿಳೆಯರು. ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.
ಯಾರಿಗೆ ಈ ಯೋಜನೆಯಿಂದ ಹೆಚ್ಚು ಸಹಾಯ?
ಪ್ರಮುಖವಾಗಿ ಮಧ್ಯಮವರ್ಗ ಹಾಗೂ ಬಡ ವರ್ಗದ ದುಡಿಯುವ ಮಹಿಳೆಯರಿಗೆ ಈ ಯೋಜನೆಯು ಹೆಚ್ಚು ಸಹಾಯಕವಾಗಿದೆ. ನಾವು ಅದನ್ನು ಲೆಕ್ಕಾಚಾರದಲ್ಲಿ ನೋಡುವುದಾದರೆ, ಬಿಎಂಟಿಸಿ ಬಸ್ಸಿನಲ್ಲಿ ಮಾಸಿಕ ಬಸ್ (ಎಸಿ ಬಸ್ ಹೊರತಾಗಿ) ಪಾಸ್ ದರ 1,050 ರೂಪಾಯಿ ಆಗಿದೆ. ಒಂದು ಮನೆಯಲ್ಲಿ ಒಬ್ಬರು ಮಹಿಳೆಯರು ದುಡಿಯುತ್ತಿದ್ದಾರೆ ಎಂದುಕೊಳ್ಳಿ, ಆಗ ಇಬ್ಬರಿಗೆ 2,100 ರೂಪಾಯಿ ಮಾಸಿಕವಾಗಿ ಬಸ್ ಪಾಸ್‌ಗೆ ಖರ್ಚು ಮಾಡಬೇಕಾಗುತ್ತದೆ. ಈ ಮೊತ್ತವು ಉಳಿತಾಯವಾಗುತ್ತದೆ.
ಪ್ರಸ್ತುತ ಎಲ್ಲ ವಸ್ತುಗಳ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನಾವು ದಿನನಿತ್ಯ ಬಳಕೆ ಮಾಡುವಂತಹ ಅಕ್ಕಿ, ಗೋಧಿ, ಚಹಾ ಪುಡಿ, ಹಾಲು, ಸಕ್ಕರೆ, ಬೇಳೆ, ಈರುಳ್ಳಿ, ಟೊಮೆಟೊ ದರಗಳು ಗಗನಕ್ಕೆ ಏರಿದೆ. ಈ ಸಂದರ್ಭದಲ್ಲಿ ಒಂದು ಬಡ, ಮಧ್ಯಮವರ್ಗದ ಕುಟುಂಬಕ್ಕೆ 1-2 ಸಾವಿರ ಮಾಸಿಕವಾಗಿ ಉಳಿತಾಯವಾದರೂ ಕೂಡಾ ಅದು ಅತೀ ದೊಡ್ಡ ಮೊತ್ತವೇ ಆಗುತ್ತದೆ. ಅದರಲ್ಲೂ ಒಂದು ಕುಟುಂಬದಲ್ಲಿ ವಿದ್ಯಾರ್ಥಿನಿಯರು ಇದ್ದರೆ, ಅವರ ಶಾಲಾ ಓಡಾಟದ ಖರ್ಚು ಉಳಿತಾಯವಾಗಲಿದೆ. ಅದು ವಿದ್ಯಾರ್ಥಿನಿಯ ಒಟ್ಟು ಶಿಕ್ಷಣದ ವೆಚ್ಚದಲ್ಲಿ ಕಡಿಮೆಯಾಗಲು ಸಹಾಯಕವಾಗಲಿದೆ.
ಇನ್ನು ರಾಜ್ಯ ರಾಜಧಾನಿಯಾದ ಬೆಂಗಳೂರಿಗೆ ನೆರೆಹೊರೆಯ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬರುವವರು ಇದ್ದಾರೆ. ಪ್ರತಿ ದಿನ ಓಡಾಟ ಮಾಡುವವರು ಕೂಡಾ ಇದ್ದಾರೆ. ಈ ದುಡಿಯುವ ವರ್ಗದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವು ಅತೀ ಅಧಿಕ ಸಹಾಯಕವಾಗುತ್ತದೆ. ಅಂದಾಜು ಬೆಂಗಳೂರಿಗೆ ಮಾಸಿಕ ಅಪ್ & ಡೌನ್ ಚಾರ್ಜ್ ಮೂರು ಸಾವಿರ ಎಂದುಕೊಂಡರೂ, ಅಷ್ಟು ಮೊತ್ತದ ಉಳಿತಾಯವು ಕಡಿಮೆ ಏನಲ್ಲ.
ಭಾರತವು ಪುರುಷಪ್ರಧಾನ ದೇಶವಾಗಿದ್ದು, ಇಂದಿಗೂ ಕೂಡಾ ಅದೆಷ್ಟೊ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವಿಲ್ಲ. ಪ್ರತಿ ಒಂದು ರೂಪಾಯಿಗೂ ಗಂಡನ ಮುಂದೆ ಕೈಚಾಚಬೇಕಾಗುತ್ತದೆ. ಹೀಗಿರುವಾಗ ತಮ್ಮ ತವರು ಮನೆಗೆ ಅಥವಾ ತಾವು ಹೋಗಲು ಬಯಸುವ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಇರುವ ಎಷ್ಟೋ ಮಹಿಳೆಯರು ಇದ್ದಾರೆ. ಹಾಗಿರುವಾಗ ಈಗ ಮಹಿಳೆಯರು ಉಚಿತವಾಗಿ ಪ್ರಯಾಣ ಸೌಲಭ್ಯದ ಸದುಪಯೋಗ ಪಡೆಯಬಹುದಾಗಿದೆ.
ಖಾಸಗಿ ಬಸ್‌ಗಳಿಗೆ, ಆಟೋಗಳಿಗೆ ನಷ್ಟ ಆರೋಪ
ಪ್ರಸ್ತುತ ಖಾಸಗಿ ಬಸ್‌ಗಳಿಗೆ, ಆಟೋಗಳಿಗೆ ಈ ಯೋಜನೆಯಿಂದಾಗಿ ನಷ್ಟ ಉಂಟಾಗುತ್ತಿದೆ ಎಂಬ ಆರೋಪ ಕೂಡಾ ಇದೆ. ಶಕ್ತಿ ಯೋಜನೆ ಜಾರಿಗೆ ತಂದಾಗಿನಿಂದ ತಮ್ಮ ವ್ಯಾಪಾರಕ್ಕೆ ಶೇಕಡ 50ರಷ್ಟು ಹೊಡೆತ ಬಿದ್ದಿದೆ ಎಂದು ಕರ್ನಾಟಕ ಖಾಸಗಿ ವಾಹನ ಮಾಲೀಕರ ಒಕ್ಕೂಟ ಆರೋಪ ಮಾಡಿದೆ. ಹಾಗೆಯೇ ರಾಜ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಮರುಪಾವತಿ ಮಾಡದಿದ್ದಲ್ಲಿ ಜುಲೈ 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದೆ.
'ಶಕ್ತಿ' ಯೋಜನೆ ಜಾರಿಗೆ ಬಂದ ನಂತರ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈ ಕುರಿತು ಸರ್ಕಾರಕ್ಕೆ ಸಹ ಆಟೋ ಚಾಲಕರು ಮನವರಿಕೆ ಮಾಡಿಕೊಟ್ಟಿದ್ದಾರೆ. 'ಶಕ್ತಿ' ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವು ಆಟೋ ಚಾಲಕರು, ಸಾಮಾನ್ಯವಾಗಿ ಆಟೋದಲ್ಲಿ ಓಡಾಟ ಮಾಡುವ ಗ್ರಾಹಕರು ಬೇರೆಯೇ ಬಸ್‌ನಲ್ಲಿ ಓಡಾಟ ಮಾಡುವ ಗ್ರಾಹಕರು ಬೇರೆಯೇ, ನಮಗೆ ಯಾವುದೇ ನಷ್ಟ ಉಂಟಾಗಿಲ್ಲ, ನಮ್ಮ ಗ್ರಾಹಕರು ಎಂದಿನಂತೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಅಕ್ಕಿ, ಸಾರಿಗೆ ಉಚಿತ ಎನ್ನುವುದು ಬರೀ ಕರ್ನಾಟಕದಲ್ಲಿ ಮಾತ್ರ ಇದೇ ಮೊದಲ ಬಾರಿಗೆ ಜಾರಿಗೇನೂ ತರಲಾಗುತ್ತಿಲ್ಲ. ಈ ಹಿಂದೆ ತಮಿಳುನಾಡು ಸರ್ಕಾರ ಇಂತಹ ಯೋಜನೆಗಳನ್ನು ಜಾರಿ ಮಾಡಿದೆ. ಸಾರಿಗೆ ವ್ಯವಸ್ಥೆ ಎನ್ನುವುದು ಒಂದು ಸೇವೆ, ಇದರಲ್ಲಿ ನಾವು ಲಾಭ ನಷ್ಟ ನೋಡಲಾಗದು ಎಂದು ದಿ.ತಮಿಳುನಾಡು ಸಿಎಂ ಕರುಣಾನಿಧಿ ಹೇಳುತ್ತಾರೆ. ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆಗೂ ಮುನ್ನವೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಲಾಭದಲ್ಲಿಲ್ಲಿ ಎಂಬುವುದು ಗಮನಾರ್ಹ.


Click it and Unblock the Notifications