ಕರ್ನಾಟಕದಲ್ಲಿ ಸರ್ಕಾರವು ಚುನಾವಣೆ ಪೂರ್ವ ಭರವಸೆಯಂತೆ ಐದು ಖಾತರಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದೆ. ಆ ಪೈಕಿ ಶಕ್ತಿ ಯೋಜನೆ ಕೂಡಾ ಒಂದಾಗಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಗುತ್ತದೆ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಗಿದೆ. ಆದರೆ ಈ ಯೋಜನೆಯು ಸರ್ಕಸ್ ಕಲಾವಿದರಿಗೂ ಸಹಾಯವಾಗಿದೆ, ಹೇಗೆ ಎಂದು ತಿಳಿಯಲು ಮುಂದೆ ಓದಿ...

ಸರ್ಕಸ್ ಕಲಾವಿದರಿಗೆ ಹೇಗೆ ಸಹಾಯಕ?
ಶಕ್ತಿ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬೊಕ್ಕಸವನ್ನು ಮಾತ್ರ ತುಂಬಿಸುತ್ತಿಲ್ಲ, ಜೊತೆಗೆ ಮೈಸೂರಿನ ಜಂಬೋ ಸರ್ಕಸ್‌ನ ಬೊಕ್ಕಸವನ್ನು ಕೂಡಾ ತುಂಬಿಸುತ್ತಿದೆ. ಇದು ನಿಮಗೆ ವಿಚಿತ್ರ ಅನಿಸಬಹುದು. ಆದರೆ ನಿಜ.
ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯ ಸದುಪಯೋಗವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರು ಈಗ ಸಮೀಪದ ಪ್ರಯಾಣಕ್ಕೆ ಇದನ್ನೆ ಬಳಕೆ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯದ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ.
ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಹಾಗೆಯೇ ಇತ್ತೀಚಿಗೆ ಕೊನೆಯಾದ ನಾಡ ಹಬ್ಬ ಮೈಸೂರು ದಸರಾ (ಅ.15ರಿಂದ 24)ಕ್ಕೆ ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ ಮಹಿಳೆಯರು ನಗರದ ನಜರ್‌ಬಾದ್‌ನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು ಮೃಗಾಲಯ) ಹಿಂಭಾಗದ ಮೈದಾನದಲ್ಲಿ ಟೆಂಟ್ ಹಾಕಿರುವ ಸರ್ಕಸ್‌ಗೆ ಭೇಟಿ ನೀಡಿದ್ದಾರೆ. ಈ ಸರ್ಕಸ್ ಅಕ್ಟೋಬರ್ 13 ರಿಂದ ಪ್ರಾರಂಭವಾಗಿದೆ.
ಶಕ್ತಿ ಯೋಜನೆಗೆ ಜಂಬೋ ಸರ್ಕಸ್‌ನ ಧನ್ಯವಾದ
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಜಂಬೋ ಸರ್ಕಸ್‌ನ ಮ್ಯಾನೇಜರ್ ರಾಜೀವ್, "ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಅಧಿಕ ಮಹಿಳೆಯರು ಸರ್ಕಸ್ ನೋಡಲು ಬಂದಿದ್ದಾರೆ. ಈಗಲೂ ಮಹಿಳೆಯರು ಅಧಿಕವಾಗಿ ಬರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಾಗಿದೆ. ಇಂತಹ ಯೋಜನೆಗಳು ಸಮಾಜದ ಅನೇಕ ವರ್ಗಗಳಿಗೆ ಪ್ರಯೋಜನವನ್ನು ನೀಡುವುದರಿಂದ ಇದನ್ನು ಜಾರಿಗೆ ತಂದ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ," ಎಂದು ತಿಳಿಸಿದರು.
ಇದಲ್ಲದೆ, ಪ್ರತಿದಿನ ಸುಮಾರು 5,000 ಜನರು ಪ್ರದರ್ಶನ ನೋಡಲು ಬರುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ನಮ್ಮ ಸರ್ಕಸ್‌ಗೆ ಲಭ್ಯವಾಗಿದೆ. ಎರಡು ಗಂಟೆಗಳ ಅವಧಿಯ ಪ್ರತಿ ಪ್ರದರ್ಶನದಲ್ಲಿ 1,500-ಆಸನ ತುಂಬಿರುತ್ತದೆ. ವಿಶೇಷವಾಗಿ ವಾರಾಂತ್ಯದಲ್ಲಿ ಅಧಿಕ ಜನರು ಬರುತ್ತಾರೆ. ಒಟ್ಟು 26 ಸರ್ಕಸ್‌ಗಳನ್ನು 60 ರಿಂದ 70 ಕಲಾವಿದರ ತಂಡವು ಪ್ರದರ್ಶಿಸುತ್ತದೆ, ಇದರಲ್ಲಿ ಆಫ್ರಿಕನ್ ರಾಷ್ಟ್ರಗಳು ಸೇರಿವೆ ಎಂದು ರಾಜೀವ್ ಮಾಹಿತಿ ನೀಡಿದ್ದಾರೆ.
ಕಲಾವಿದರು ಮತ್ತು ಮೈದಾನದ ಸಿಬ್ಬಂದಿ ಸೇರಿದಂತೆ, ಕಲಾವಿದ ದಂಪತಿಗಳಾದ ಪಶ್ಚಿಮ ಬಂಗಾಳದ ರೇಣುಕಾ ಮತ್ತು ಚೆನ್ನೈನ ವಿಕ್ಕಿ ನೇತೃತ್ವದಲ್ಲಿ ಒಟ್ಟು 150 ಜನರು ಇದ್ದಾರೆ. ಈ ತಂಡವು ಆರೋಗ್ಯಕರ ಮನರಂಜನೆಯ ಭರವಸೆ ನೀಡುತ್ತದೆ. ಜನರನ್ನು ರಂಜಿಸಲು ಈ ತಂಡವು ಪ್ರತಿ ಬಾರಿ ಉತ್ಸುಕರಾಗಿರುತ್ತಾರೆ ಎಂದು ರಾಜೀವ್ ಹೇಳಿದರು.
ಟ್ರ್ಯಾಪಿಜ್, ಸೀರೆಯನ್ನು ಬಳಸಿ ನೃತ್ಯ, ರಷ್ಯನ್ ರಿಂಗ್ ಡ್ಯಾನ್ಸ್, ಪವರ್ ಲಿಫ್ಟಿಂಗ್, ಆಫ್ರಿಕನ್ ಫೈರ್ ಡ್ಯಾನ್ಸ್, ಫೂಟ್ ಜಗ್ಲಿಂಗ್, ಡಾಗ್ ಶೋ ಈ ಸರ್ಕಸ್‌ನಲ್ಲಿ ಸೇರಿದೆ. ಇದರ ಮಧ್ಯೆ, ಕುಬ್ಜಗಳ (ಸಣ್ಣ ದೇಹದ ವ್ಯಕ್ತಿಗಳು) ಕೂಡಾ ಇದ್ದಾರೆ.
ಮಕ್ಕಳ ದಿನಾಚರಣೆ ರಿಯಾಯಿತಿ
ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಕಾರಣ, ಕಾರ್ಯಕ್ರಮಗಳನ್ನು ವೀಕ್ಷಿಸಲು ಗುಂಪುಗಳಲ್ಲಿ ಬರುವ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲು ಸರ್ಕಸ್ ನಿರ್ವಹಣೆ ಮಾಡುವ ಅಧಿಕಾರಿಗಳು ಯೋಜಿಸಿದ್ದಾರೆ. ಪ್ರತಿದಿನ ಮೂರು ಪ್ರದರ್ಶನಗಳು ಇರುತ್ತವೆ.
ಮಧ್ಯಾಹ್ನ 1, 4 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಪ್ರದರ್ಶನ ಇರುತ್ತದೆ. ಟಿಕೆಟ್ ದರವು ಆಸನಗಳಿಗೆ ಅನುಗುಣವಾಗಿ 100, 150, 200, 300 ರೂಪಾಯಿ ಇದೆ. ನವೆಂಬರ್ 20 ರವರೆಗೆ ಮೈಸೂರಿನಲ್ಲಿ ಜಂಬೋ ಸರ್ಕಸ್ ತಂಡವು ಪ್ರದರ್ಶನ ಮಾಡಲಿದೆ. ಅದಾದ ಬಳಿಕ ಚೆನ್ನೈಗೆ ತೆರಲಿದೆ. ಅದಾದ ಬಳಿಕ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ರಾಜೀವ್ ತಿಳಿಸಿದರು.


Click it and Unblock the Notifications