ಭಾರತ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯು ಪ್ರಮುಖವಾಗಿ ದೇಶದಲ್ಲಿ ಹೊಸದಾಗಿ ಉದ್ಯಮವನ್ನು ಆರಂಭ ಮಾಡಲು ಬಯಸುವವರಿಗೆ ಅವಕಾಶವನ್ನು ಸೃಷ್ಟಿಸುವ ಮತ್ತು ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಿದ ಯೋಜನೆಯಾಗಿದೆ. ಜನವರಿ 16, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯನ್ನು ಆರಂಭ ಮಾಡಿದ್ದಾರೆ. 19 ಕ್ರಿಯಾ ಯೋಜನೆಗಳನ್ನು ಇದರಡಿಯಲ್ಲಿ ಪಟ್ಟಿ ಮಾಡಲಾಗಿದೆ.
ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ರಚಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಇದಾದ ಬಳಿಕ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಅನೇಕ ಚಟುವಟಿಕೆಗಳನ್ನು ಮಾಡಲಾಗಿದೆ. ಇದರ ಭಾಗಿವಾಗಿಯೇ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (ಎಸ್‌ಐಎಸ್‌ಎಫ್‌ಎಸ್) ಯೋಜನೆಯನ್ನು ಆರಂಭ ಮಾಡಲಾಗಿದೆ. ಇದು ಹಣಕಾಸು ನೆರವನ್ನು ನೀಡುವ ಯೋಜನೆಯಾಗಿದೆ.

ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ ಎಂದರೇನು?
ಉದ್ಯಮವು ಬೆಳವಣಿಗೆ ಹೊಂದಬೇಕಾದರೆ ಆರಂಭಿಕ ಹಂತದಲ್ಲಿಯೇ ಉದ್ಯಮಿಗಳಿಗೆ ಬಂಡವಾಳವು ಸುಲಭವಾಗಿ ಲಭ್ಯವಾಗುವುದು ಮುಖ್ಯವಾಗುತ್ತದೆ. ತಮ್ಮ ಸ್ಟಾರ್ಟ್‌ಅಪ್‌ನ ಪರಿಕಲ್ಪನೆಯನ್ನು ಆರಂಭ ಮಾಡಿ ಪುರಾವೆಯನ್ನು ಒದಗಿಸಿದ ಬಳಿಕವೇ ಏಂಜೆಲ್ ಹೂಡಿಕೆದಾರರು ಮತ್ತು ಇತರೆ ಸಂಸ್ಥೆಗಳು ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆ ಮಾಡುತ್ತದೆ.
ಹಾಗೆಯೇ ಆಸ್ತಿಯನ್ನು ಅಡಮಾನ ಇಡುವವರಿಗೆ ಮಾತ್ರ ಬ್ಯಾಂಕುಗಳು ಸ್ಟಾರ್ಟ್‌ಅಪ್‌ಗಳ ಆರಂಭಕ್ಕೆ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಸಾಲವನ್ನು ನೀಡುತ್ತದೆ. ಆದರೆ ಹಣ ಲಭ್ಯವಾಗಬೇಕಾದರೆ, ಮೊದಲೇ ಹಣ ಹೂಡಿಕೆ ಮಾಡಿ ಸ್ಟಾರ್ಟ್‌ಅಪ್ ಆರಂಭದ ಪುರಾವೆಯನ್ನು ನೀಡಬೇಕಾದರೆ ಕೊಂಚವಾದರೂ ಕೈಯಲ್ಲಿ ಹಣ ಬೇಕಾಲ್ಲವೇ?. ಈ ಹಣ ಸಹಾಯಕ್ಕಾಗಿಯೇ ಈ ಯೋಜನೆ ಇದೆ.
ಈ ಐಡಿಯಾದ ಪುರಾವೆ, ಅಭಿವೃದ್ಧಿ, ಉತ್ಪನ್ನ ಪ್ರಯೋಗಗಳು, ಮಾರುಕಟ್ಟೆ ಪ್ರವೇಶ ಮತ್ತು ವಾಣಿಜ್ಯೀಕರಣಕ್ಕಾಗಿ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ನೆರವು ನೀಡಲು ಸುಮಾರು 945 ಕೋಟಿ ರೂಪಾಯಿ ಬಂಡವಾಳದಲ್ಲಿ ಸರ್ಕಾರವು ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS) ಅನ್ನು ರಚಿಸಿದೆ. ನಾಲ್ಕು ವರ್ಷಗಳಲ್ಲೇ 300 ಇನ್ಕ್ಯುಬೇಟರ್‌ಗಳ (ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವ ಸಂಸ್ಥೆ) ಮೂಲಕ 3,600 ಉದ್ಯಮಿಗಳನ್ನು ಬೆಂಬಲಿಸುವ ಯೋಜನೆ ಇದಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು 1ನೇ ಏಪ್ರಿಲ್ 2021 ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಗೆ ನೀಡಿದ 945 ಕೋಟಿ ರೂಪಾಯಿಯ ಅನುದಾನದಲ್ಲಿ, ಸುಮಾರು 133 ಇನ್ಕ್ಯುಬೇಟರ್‌ಗಳಿಗೆ 477.25 ಕೋಟಿ ರೂಪಾಯಿ ನೀಡಲಾಗಿದೆ. ಈ ಪೈಕಿ ಡಿಸೆಂಬರ್ 2022ರವರೆಗೆ 211.63 ಕೋಟಿ ರೂಪಾಯಿ ಮೊತ್ತವನ್ನು ಸ್ಟಾರ್ಟ್‌ಅಪ್‌ಗಳಿಗೆ ವಿತರಿಸಲಾಗಿದೆ.
ತಜ್ಞರ ಸಲಹಾ ಸಮಿತಿ
ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಕ್ಕಾಗಿ ಇಲಾಖೆಯು ತಜ್ಞರ ಸಲಹಾ ಸಮಿತಿಯನ್ನು (ಇಎಸಿ) ರಚಿಸಿದೆ. ಇದು ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್‌ನ ಕಾರ್ಯಚರಣೆ, ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಇಎಸಿಯು ಸೀಡ್ ಫಂಡ್‌ಗಳ ಹಂಚಿಕೆಗಾಗಿ ಇನ್‌ಕ್ಯುಬೇಟರ್‌ಗಳನ್ನು ಮೌಲ್ಯಮಾಪನ ಮಾಡುತ್ತದೆ, ಆಯ್ಕೆ ಮಾಡುತ್ತದೆ. ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಹಾಗೆಯೇ ಯೋಜನೆಯ ನಿಧಿಯ ಸಮರ್ಥ ಬಳಕೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಸ್ಟಾರ್ಟ್‌ಅಪ್‌ಗಳ ಅರ್ಹತಾ ಮಾನದಂಡ
* ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಅರ್ಜಿ ಸಲ್ಲಿಸಿದ ಸಮಯಕ್ಕೂ 2 ವರ್ಷಗಳಿಗಿಂತ ಮುನ್ನ ಆರಂಭವಾಗಿರಬಾರದು.
* ಡಿಪಿಐಐಟಿ ಮಾನ್ಯತೆ ಪಡೆಯಲು, https://www.startupindia.gov.in/content/sih/en/startupgov/startup_recognition_page.html ಗೆ ಭೇಟಿ ನೀಡಿ
* ಮಾರುಕಟ್ಟೆಗೆ ಹೊಂದುವಂತೆ, ವಾಣಿಜ್ಯೀಕರಣಕ್ಕೆ ಸಹಾಯವಾಗುವಂತೆ ಉತ್ಪನ್ನ ಅಥವಾ ಸೇವೆಯನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್ ಐಡಿಯಾವನ್ನು ಹೊಂದಿರಬೇಕು.
* ಸ್ಟಾರ್ಟಪ್ ತನ್ನ ಪ್ರಮುಖ ಉತ್ಪನ್ನ ಅಥವಾ ಸೇವೆಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಬೇಕು.
* ಸಾಮಾಜಿಕ ಕಾರ್ಯ, ತ್ಯಾಜ್ಯ ನಿರ್ವಹಣೆ, ನೀರು ನಿರ್ವಹಣೆ, ಹಣಕಾಸು, ಶಿಕ್ಷಣ, ಕೃಷಿ, ಆಹಾರ ಸಂಸ್ಕರಣೆ, ಜೈವಿಕ ತಂತ್ರಜ್ಞಾನ, ಆರೋಗ್ಯ, ಇಂಧನ, ರಕ್ಷಣೆ, ಬಾಹ್ಯಾಕಾಶ, ರೈಲ್ವೆ, ತೈಲ, ಜವಳಿ ಮತ್ತು ಅನಿಲ, ಮುಂತಾದ ಕ್ಷೇತ್ರಗಳಲ್ಲಿ ನವೀನ ಉದ್ಯಮ ರಚಿಸುವ ಸ್ಟಾರ್ಟಪ್‌ಗಳಿಗೆ ಆದ್ಯತೆ ನೀಡಲಾಗುವುದು.
* ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಸ್ಟಾರ್ಟ್‌ಅಪ್ 10 ಲಕ್ಷ ರೂಪಾಯಿಗಿಂತ ಅಧಿಕ ಬೆಂಬಲವನ್ನು ಪಡೆದಿರಬಾರದು. ಹಾಗೆಯೇ ಸ್ಪರ್ಧೆ, ಮೊದಲಾದ ಬಹುಮಾನದಿಂದ, ಸಬ್ಸಿಡಿಯಿಂದ ಪಡೆದ ಹಣವನ್ನು ಹೊಂದಿರಬಾರದು.
* ಕಂಪನಿಗಳ ಕಾಯಿದೆ, 2013 ಮತ್ತು ಸೆಬಿ (ಐಸಿಡಿಆರ್) ನಿಯಮಗಳು, 2018 ರ ಪ್ರಕಾರ, ಯೋಜನೆಗಾಗಿ ಇನ್‌ಕ್ಯುಬೇಟರ್‌ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಟಾರ್ಟಪ್‌ನಲ್ಲಿ ಭಾರತೀಯರ ಷೇರುಗಳು ಕನಿಷ್ಠ ಶೇಕಡ 51 ಆಗಿರಬೇಕು.
* ಸ್ಟಾರ್ಟಪ್ ಅರ್ಜಿದಾರರು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಪ್ರತಿ ಬಾರಿ ಅನುದಾನ ಮತ್ತು ಸಾಲ/ಡಿಬೆಂಚರ್‌ಗಳ ರೂಪದಲ್ಲಿ ಬೆಂಬಲವನ್ನು ಪಡೆಯಬಹುದು.


Click it and Unblock the Notifications