ಉದ್ಯೋಗ ಹುಡುಕಾಟದ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಬರುವ ಆಯ್ಕೆ ಬೆಂಗಳೂರು ಅಥವಾ ಮುಂಬೈ ಆಗಿದೆ. ಸಾಮಾನ್ಯವಾಗಿಯೇ ದೇಶದಲ್ಲಿ ಯುವಕರು ಉದ್ಯೋಗದ ಹುಡುಕಾಟದಲ್ಲಿ ಮುಂಬೈ ಹಾಗೂ ಬೆಂಗಳೂರಿಗೆ ತೆರಳುತ್ತಾರೆ. ವಾರ್ಷಿಕವಾಗಿ ಉತ್ತಮ ಪ್ಯಾಕೇಜ್ ನೀಡುವ ಉದ್ಯೋಗಗಳು ಈ ನಗರದಲ್ಲಿ ಲಭ್ಯವಾಗುವುದೇ ಇದಕ್ಕೆ ಕಾರಣವಾಗಿದೆ. ಆದರೆ ಇಲ್ಲೊಂದು ನಗರದಲ್ಲಿ ಅದಕ್ಕಿಂತ ಅಧಿಕ ವೇತನವನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ.
ಹೌದು, ಮಹಾರಾಷ್ಟ್ರದ ಈ ನಗರವು ಉದ್ಯೋಗಿಗಳಿಗೆ ವೇತನ ನೀಡುವ ವಿಚಾರದಲ್ಲಿ ಪ್ರಮುಖವಾಗಿ ಮುಂಬೈ ಹಾಗೂ ಬೆಂಗಳೂರಿಗಿಂತ ಅಧಿಕ ವೇತನವನ್ನು ನೀಡುತ್ತದೆ. ಮಹಾರಾಷ್ಟ್ರದ ಸೋಲಾಪುರವು ಭಾರತದಲ್ಲಿ ವಾರ್ಷಿಕವಾಗಿ ಅಧಿಕ ವೇತನವನ್ನು ನೀಡುವ ನಗರವಾಗಿದೆ. ಅವರೇಜ್ ಸ್ಯಾಲರಿ ಸರ್ವೆ ರಿಪೋರ್ಟ್ ಪ್ರಕಾರ ಸೋಲಾಪುರದಲ್ಲಿ ಉದ್ಯೋಗಿಗಳಿಗೆ ಗರಿಷ್ಠವಾಗಿ 2,810,092 ರೂಪಾಯಿ ವಾರ್ಷಿಕ ವೇತನವನ್ನು ನೀಡಲಾಗುತ್ತದೆ.

ಸೋಲಾಪುರದ ನಂತರದ ಸ್ಥಾನದಲ್ಲಿ ದೇಶದ ಹಣಕಾಸು ಕ್ಯಾಪಿಟಲ್ ಆಗಿರುವ ಮುಂಬೈ ಇದ್ದು ಈ ನಗರದಲ್ಲಿ ಉದ್ಯೋಗಿಗಳಿಗೆ ಗರಿಷ್ಠವಾಗಿ 2,117,870 ರೂಪಾಯಿ ವಾರ್ಷಿಕ ವೇತನವನ್ನು ನೀಡುತ್ತದೆ. ಭಾರತದ ಸಿಲಿಕಾನ್ ವ್ಯಾಲಿ, ಟೆಕ್ ಹಬ್ ಎಂದು ಕೂಡಾ ಹೆಸರುವಾಸಿಯಾದ ಬೆಂಗಳೂರು ಅಧಿಕ ವೇತನ ನೀಡುವ ನಗರಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ವಾರ್ಷಿಕವಾಗಿ ಗರಿಷ್ಠ 2,101,388 ರೂಪಾಯಿ ವೇತನವನ್ನು ನೀಡುತ್ತದೆ. ದೆಹಲಿಯು ನಾಲ್ಕನೇ ಸ್ಥಾನದಲ್ಲಿದೆ, ವಾರ್ಷಿಕವಾಗಿ 2,043,703 ರೂಪಾಯಿ ಗರಿಷ್ಠ ವೇತನವನ್ನು ನೀಡಲಾಗುತ್ತದೆ. ಇನ್ನು ಅಧಿಕ ವೇತನವನ್ನು ನೀಡುವ ಸಂಸ್ಥೆಗಳಲ್ಲಿ ಮಹಾರಾಷ್ಟ್ರದ ಇನ್ನೊಂದು ಸಂಸ್ಥೆಯು ಕೂಡಾ ಇದೆ. ಯಾವ ನಗರದಲ್ಲಿ ಎಷ್ಟು ವೇತನವನ್ನು ನೀಡಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ...
ಭಾರತದಲ್ಲಿ ಅತಿ ಹೆಚ್ಚು ಸರಾಸರಿ ಸಂಬಳ ಹೊಂದಿರುವ ಟಾಪ್ 8 ನಗರಗಳು
1. ಸೊಲ್ಲಾಪುರ, ಮಹಾರಾಷ್ಟ್ರ - 2,810,092 ರೂಪಾಯಿ
2. ಮುಂಬೈ, ಮಹಾರಾಷ್ಟ್ರ - 2,117,870 ರೂಪಾಯಿ
3. ಬೆಂಗಳೂರು, ಕರ್ನಾಟಕ - 2,101,388 ರೂಪಾಯಿ
4. ದೆಹಲಿ - 2,043,703 ರೂಪಾಯಿ
5. ಭುವನೇಶ್ವರ, ಒಡಿಶಾ - 1,994,259 ರೂಪಾಯಿ
6. ಜೋಧಪುರ, ರಾಜಸ್ಥಾನ - 1,944,814 ರೂಪಾಯಿ
7. ಪುಣೆ, ಮಹಾರಾಷ್ಟ್ರ - 1,895,370 ರೂಪಾಯಿ
8. ಹೈದರಾಬಾದ್ - 1,862,407 ರೂಪಾಯಿ
ಸರಾಸರಿ ವೇತನ ಸಮೀಕ್ಷೆಯ ವರದಿಯ ಪ್ರಕಾರ, ಭಾರತದಲ್ಲಿ ಸರಾಸರಿ ವಾರ್ಷಿಕ ವೇತನವು 1,891,085 ರೂಪಾಯಿಗಳಾಗಿದ್ದು, ಸಾಮಾನ್ಯ ಗಳಿಕೆಯು 5,76,851 ರೂಪಾಯಿ ಆಗಿದೆ. ಆದಾಯದ ವಿಚಾರದಲ್ಲಿ ಲಿಂಗ ತಾರತಮ್ಯ ಇನ್ನೂ ಕೂಡಾ ಇದೆ. ಪುರುಷರು ಸರಾಸರಿ ವೇತನ 1,953,055 ರೂಪಾಯಿ ಆದಾಯವನ್ನು ಗಳಿಸಿದರೆ ಮಹಿಳೆಯರಿಗೆ ಸರಾಸರಿ 1,516,296 ರೂಪಾಯಿ ಆದಾಯವನ್ನು ನೀಡಲಾಗುತ್ತದೆ.
ಮ್ಯಾನೇಜ್‌ಮೆಂಟ್ ಮತ್ತು ಬಿಸಿನೆಸ್‌ಗೆ ಸರಾಸರಿ 2,950,185 ರೂಪಾಯಿಗಳ ಆದಾಯವನ್ನು ನೀಡಲಾಗುತ್ತದೆ. ಕಾನೂನು ಕ್ಷೇತ್ರದಲ್ಲಿ ಅಧಿಕ ಸಂಭಾವನೆ ನೀಡಲಾಗುತ್ತಿದ್ದು, ವಾರ್ಷಿಕವಾಗಿ 2,702,962 ರೂಪಾಯಿ ಆದಾಯ ಗಳಿಸಬಹುದಾಗಿದೆ. ಶಿಕ್ಷಣದ ಆಧಾರದ ಮೇಲೆ, ಡಾಕ್ಟರೇಟ್ ಪದವಿ ಹೊಂದಿರವವರು ಅತ್ಯಧಿಕ ಸರಾಸರಿ ವಾರ್ಷಿಕ ವೇತನ 2,752,407 ರೂಪಾಯಿ ಪಡೆಯುತ್ತಾರೆ. ಸ್ನಾತಕೋತ್ತರ ಪದವಿ ಪಡೆದವರು ವಾರ್ಷಿಕವಾಗಿ ಗರಿಷ್ಠ 2,126,111 ರೂಪಾಯಿ ಸಂಬಳವನ್ನು ಪಡೆಯುತ್ತಾರೆ.
ಇತ್ತೀಚೆಗೆ "ಉದ್ಯೋಗಗಳು ಮತ್ತು ವೇತನದ ವರದಿ" ಅನ್ನು ಟೀಮ್‌ಲೀಸ್ ಸರ್ವೀಸ್ ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಹೆಚ್ಚಿನ ಕೈಗಾರಿಕೆಗಳು ಲಾಭದಾಯಕ ವೇತನವನ್ನು ನೀಡುವ ಉದ್ಯೋಗ ಸೃಷ್ಟಿಯನ್ನು ಸೂಚಿಸಿದೆ. ಸುಮಾರು ಅರ್ಧದಷ್ಟು ಉದ್ಯಮಗಳು ಭವಿಷ್ಯಕ್ಕೆ ಸೂಕ್ತವಾದ ಅತ್ಯಾಧುನಿಕ ಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ವರದಿ ಹೇಳಿದೆ. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದಾರಾಬಾದ್ ದೇಶದಲ್ಲಿ ಉದ್ಯೋಗಿಗಳಿಗೆ ಅಧಿಕ ವೇತನವನ್ನು ನೀಡುವ ನಗರವಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ವೇತನ ನೀಡುವ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇಕಡ 7.79ರಷ್ಟು ಏರಿಕೆಯಾಗಿದೆ. ಇನ್ನು ಇದಕ್ಕೆ ತದ್ವಿರುದ್ಧವಾಗಿ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಿಭಾಗದಲ್ಲಿ ಈ ವರ್ಷ ಸರಾಸರಿ ವೇತನದಲ್ಲಿ ತೀವ್ರ ಕುಸಿತ ಉಂಟಾಗಿದೆ. ಎರಡು ವರ್ಷಗಳ ಏರಿಕೆ ಬಳಿಕ ಈ ವರ್ಷ ಕುಸಿತ ಕಂಡಿದೆ.


Click it and Unblock the Notifications