ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಭರವಸೆಯನ್ನು ನೀಡಿದೆ. ಅದರಂತೆಯೇ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಚುನಾವಣೆಗೂ ಮುನ್ನ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಮನವಿ ಮಾಡಿದೆ.
ಎಂಟು ತಿಂಗಳ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ ತಮ್ಮ ಸಮುದಾಯವು ವಸತಿ, ಉದ್ಯೋಗ, ಆರೋಗ್ಯ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಉದ್ದೇಶಿಸಿರುವ ಇತರ ಸರ್ಕಾರಿ ಯೋಜನೆಗಳನ್ನು ಪ್ರವೇಶಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂಘಟನೆಗಳ ಗುಂಪು ಮಂಗಳವಾರ ಹೇಳಿದೆ.

ಕಡಿಮೆ ಆದಾಯದ ಕುಟುಂಬದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹ ಲಕ್ಷ್ಮಿ ಯೋಜನೆಯು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವನ್ನು ನೀಡುವ ಶಕ್ತಿ ಯೋಜನೆ ಮತ್ತು ಇತರ ಯೋಜನೆಗಳನ್ನು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ವಿಸ್ತರಿಸಲಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಅನೇಕ ರಾಹಿ, ಸಮರ ಸೊಸೈಟಿ ಯಶವಂತಪುರ, ಕ್ವೀರ್ ಆವಾಮ್ ಮತ್ತು ಸ್ವತಂತ್ರ ಸೇರಿದಂತೆ ಸಂಘಟನೆಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತೃತೀಯಲಿಂಗಿ ಸಮುದಾಯಕ್ಕೆ ಭರವಸೆ ನೀಡಿರುವ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ರಾಜ್ಯ ಸರ್ಕಾರದಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇತರ ಬೇಡಿಕೆಗಳಲ್ಲಿ ವಸತಿ ಯೋಜನೆಗಳಲ್ಲಿ ಮೀಸಲಾತಿ, ಉದ್ಯೋಗಾವಕಾಶಗಳು ಮತ್ತು ಅವರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ಸೇರಿವೆ ಎಂದು ಮೆಹೆಕ್ ಖದೀಜತುಲ್ ಕುಬ್ರಾ ತಿಳಿಸಿದ್ದಾರೆ.
ಐದು ಸರ್ಕಾರಿ ಯೋಜನೆಗಳ ವಿವರ
ಕಾಂಗ್ರೆಸ್ ಸರ್ಕಾರವು ಒಟ್ಟಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದರಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದು ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಮಾಡಲು ಅವಕಾಶ ನೀಡುವ ಯೋಜನೆಯಾಗಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಮಾಸಿಕವಾಗಿ ಸಹಾಯಧನವಾಗಿ ನೀಡಲಾಗುತ್ತದೆ.
ಇನ್ನು ಅನ್ನ ಭಾಗ್ಯ ಯೋಜನೆಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಅಕ್ಕಿ ಕೊರತೆ ಕಾರಣ ಐದು ಕೆಜಿ ಅಕ್ಕಿಯ ಮೊತ್ತ ಮತ್ತು ಐದು ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇನ್ನು ಗೃಹ ಜ್ಯೋತಿ ಯೋಜನೆಯಲ್ಲಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತದೆ. ಕೊನೆಯದಾಗಿ ಯುವನಿಧಿ ಯೋಜನೆ ಜಾರಿ ಮಾಡಲಾಗಿದ್ದು, ಇದು ಈ ಯೋಜನೆಯ ಪ್ರಕಾರ 2022-23 ಸಾಲಿನಲ್ಲಿ ಪದವಿ ಮುಗಿಸಿದವರಿಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ತಿಂಗಳಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದೆ.


Click it and Unblock the Notifications