ಕೇಂದ್ರ ಸರ್ಕಾರಕ್ಕೆ ಬರುವ ಒಂದು ರುಪಾಯಿ ಆದಾಯದ ಪೈಕಿ ಅರವತ್ನಾಲ್ಕು ಪೈಸೆ ನೇರ ಹಾಗೂ ಪರೋಕ್ಷ ತೆರಿಗೆ ಮೂಲಕ ಬರುತ್ತದೆ. ಇನ್ನು ರಾಜ್ಯಗಳ ಪಾಲಿನ ತೆರಿಗೆ ಮತ್ತು ಸುಂಕಗಳು ಅತಿ ದೊಡ್ಡ ವೆಚ್ಚ, ಅಂದರೆ ಒಟ್ಟು ಖರ್ಚಿನ ಇಪ್ಪತ್ತು ಪರ್ಸೆಂಟ್ ಬರುತ್ತದೆ ಎಂಬ ಅಂಶ ಬಜೆಟ್ ದಾಖಲೆ ಮೂಲಕ ಬಯಲಾಗುತ್ತದೆ.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಪ್ರಕಾರ, ಸರ್ಕಾರದ ಒಂದು ರುಪಾಯಿ ಆದಾಯದಲ್ಲಿ ಜಿಎಸ್ ಟಿಯಿಂದ ಸಂಗ್ರಹವಾಗುವುದು ಹದಿನೆಂಟು ಪೈಸೆ. ಇನ್ನು ಕಾರ್ಪೊರೇಷನ್ ತೆರಿಗೆ ಮೂಲಕ ಹದಿನೆಂಟು ಪೈಸೆ ಬರುತ್ತದೆ.
ಸಾಲ ಮತ್ತಿತರ ಜವಾಬ್ದಾರಿ ಮೂಲಕ ಇಪ್ಪತ್ತು ಪೈಸೆ ಸಂಗ್ರಹ ಆಗುತ್ತದೆ. ಆದಾಯ ತೆರಿಗೆಯಿಂದ ಹದಿನೇಳು ಪೈಸೆ ಬರುತ್ತದೆ. ಸರ್ಕಾರವು ತನ್ನ ಆದಾಯದ ಒಂದು ರುಪಾಯಿಯಲ್ಲಿ ಹತ್ತು ಪೈಸೆಯನ್ನು ತೆರಿಗೆಯೇತರ ಆದಾಯವಾದ ಬಂಡವಾಳ ಹಿಂತೆಗೆತ, ಏಳು ಪೈಸೆ ಕೇಂದ್ರ ಅಬಕಾರಿ ಸುಂಕ, ನಾಲ್ಕು ಪೈಸೆ ಸೀಮಾ ಸುಂಕ ಮತ್ತು ಆರು ಪೈಸೆ ನಾನ್ ಡೆಟ್ ಕ್ಯಾಪಿಟಲ್ ರೆಸಿಟ್ಸ್ ಮೂಲಕ ಬರುತ್ತದೆ.

ಖರ್ಚಿನ ವಿಚಾರಕ್ಕೆ ಬಂದರೆ ಕೇಂದ್ರದಿಂದ ಖರ್ಚಾಗುವ ಅತಿ ಹೆಚ್ಚು, ಅಂದರೆ ಇಪ್ಪತ್ತು ಪೈಸೆ ರಾಜ್ಯ ಸರ್ಕಾರಗಳ ಪಾಲಿನ ತೆರಿಗೆ- ಸುಂಕದ ರೂಪದಲ್ಲಿ ಹೋಗುತ್ತದೆ. ಬಡ್ಡಿ ಪಾವತಿಗೆ ಹದಿನೆಂಟು ಪೈಸೆ ಹೋಗುತ್ತದೆ. ರಕ್ಷಣಾ ವೆಚ್ಚ ಒಂಬತ್ತು ಪೈಸೆಯಿಂದ ಎಂಟು ಪೈಸೆಗೆ ಇಳಿದಿದೆ.
ಕೇಂದ್ರದ ವಲಯವಾರು ಯೋಜನೆ ವೆಚ್ಚವು ಹದಿಮೂರು ಪೈಸೆಯಾದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಒಂಬತ್ತು ಪೈಸೆ ಆಗುತ್ತದೆ.
ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗೆ ಹತ್ತು ಪೈಸೆ ಖರ್ಚಾಗುತ್ತದೆ. ಪ್ರೋತ್ಸಾಹಧನ, ಪಿಂಚಣಿಗೆ ತಲಾ ಆರು ಪೈಸೆ ವೆಚ್ಚವಾಗುತ್ತದೆ.


Click it and Unblock the Notifications