ಒಂದು ಸಿನಿಮಾ ಎಂದಾಗ ನಾವು ಒಂದೇ ಸ್ಥಳದಲ್ಲಿ ಸಂಪೂರ್ಣ ಸಿನಿಮಾದ ಶೂಟಿಂಗ್ ಮಾಡಲು ಸಾಧ್ಯವಿಲ್ಲ. ಕೆಲವು ಸಿನಿಮಾಗಳು ಒಂದೇ ಸ್ಥಳವನ್ನು ಆಧರಿಸಿದ್ದರೂ ಕೂಡಾ ಇನ್ನು ಕೆಲವು ಸಿನಿಮಾಗಳಿಗೆ ಹಲವಾರು ಸ್ಥಳಗಳಲ್ಲಿ ಶೂಟಿಂಗ್ ಅನಿವಾರ್ಯವಾಗುತ್ತದೆ.
ಹಾಗೆಯೇ ನಿಮಗೆ ಮೆಟ್ರೋದಲ್ಲಿ ಶೂಟಿಂಗ್ ಮಾಡಬೇಕಾಗಿದೆಯೇ?. ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಯಾಕೆಂದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ಆವರಣದಲ್ಲಿ ಮತ್ತು ರೋಲಿಂಗ್ ಸ್ಟಾಕ್‌ಗಳಲ್ಲಿ (ರೈಲುಗಳು) ಚಲನಚಿತ್ರ ಚಿತ್ರೀಕರಣಕ್ಕಾಗಿ ನೂತನ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಎಷ್ಟು ಶುಲ್ಕ, ಎಷ್ಟು ಡೆಪಾಸಿಟ್ ಮೊತ್ತ?
ನೂತನ ಮಾರ್ಗಸೂಚಿ ಪ್ರಕಾರ ಚಲನಚಿತ್ರ ನಿರ್ಮಾಪಕರು ಈಗ ಪ್ರತಿ ಗಂಟೆಗೆ 50,000 ರೂಪಾಯಿಗಳ ಪರವಾನಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ ಪ್ರತಿದಿನ ಗರಿಷ್ಠ 6 ಲಕ್ಷ ರೂಪಾಯಿ ಡೆಪಾಸಿಟ್ ಮೊತ್ತ ಇರಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ಸಿನಿಮಾ ಬಿಡುಗಡೆಗೂ ಕೆಲವು ನಿಯಮಗಳಿದೆ.
ಸಿನಿಮಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೊದಲು, ಚಲನಚಿತ್ರ ನಿರ್ಮಾಪಕರು ಅಂತಿಮ ಚಲನಚಿತ್ರವನ್ನು ತೋರಿಸುವ ಮೂಲಕ ಬಿಎಂಆರ್‌ಸಿಎಲ್‌ನ ಒಪ್ಪಿಗೆಯನ್ನು ಪಡೆಯಬೇಕು. ಹಾಗೆಯೇ ನೀವು ಚಿತ್ರೀಕರಣ ಮಾಡುವ ಮೊದಲು ಅರ್ಜಿಯನ್ನು ಕೂಡಾ ಸಲ್ಲಿಸಬೇಕಾಗುತ್ತದೆ.
ನಾವು ನಮ್ಮ ಮೆಟ್ರೋ ಆವರಣದಲ್ಲಿ ಶೂಟಿಂಗ್ ಮಾಡಬೇಕಾದರೆ, ಭಾರತೀಯರಾದರೆ ವಿವರವಾದ ಸ್ಕ್ರಿಪ್ಟ್‌ನೊಂದಿಗೆ 30 ದಿನಗಳ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವವರು ವಿದೇಶಿ ಪ್ರಜೆಗಳಾದರೆ 60 ದಿನಗಳ ಮುಂಚಿತವಾಗಿ ಚಿತ್ರೀಕರಣಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಸುರಕ್ಷತೆ, ರೈಲುಗಳ ಸಾಮಾನ್ಯ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ಸಂಭವನೀಯ ಅಡಚಣೆಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಸ್ಕ್ರಿಪ್ಟ್, ಸ್ಥಳಗಳು ಮತ್ತು ಶೂಟಿಂಗ್ ದಿನಾಂಕವನ್ನು ಮೊದಲೇ ತಿಳಿಸಿ ಅನುಮತಿ ಪಡೆಯುವುದು ಮುಖ್ಯವಾಗಿದೆ.
ನೀವು ಅರ್ಜಿ ಸಲ್ಲಿಸಿದ ಬಳಿಕ ಅನುಮತಿ ಲಭ್ಯವಾದರೆ, ಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕರ್ ಚೆಕ್ ರೂಪದಲ್ಲಿ 6 ಲಕ್ಷ ರೂಪಾಯಿಗಳ ಭದ್ರತಾ ಠೇವಣಿ ಬಿಎಂಆರ್‌ಸಿಎಲ್‌ಗೆ ಪಾವತಿಸಬೇಕು. ಪರವಾನಗಿ ಶುಲ್ಕದ ಹೊರತಾಗಿ, ರೋಲಿಂಗ್ ಸ್ಟಾಕ್‌ಗಳ ಬಳಕೆಗಾಗಿ ಗಂಟೆಗೆ 20,000 ರೂಪಾಯಿ ಬಾಡಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಶೈಕ್ಷಣಿಕ ಉದ್ದೇಶಕ್ಕೆ ಶೂಟಿಂಗ್
ಶೈಕ್ಷಣಿಕ ಉದ್ದೇಶಗಳಿಗಾಗಿ, ಶೂಟ್ ಮಾಡಲು ಬಯಸುವ ವಿದ್ಯಾರ್ಥಿಗಳು ಕಡಿಮೆ ಶುಲ್ಕವನ್ನು ಹೊಂದಿದ್ದಾರೆ. ಈ ವಿದ್ಯಾರ್ಥಿಗಳು 5,000 ರೂಪಾಯಿ ನಾಮಿನಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಕನ್ನಡ ಸಿನಿಮಾಗಳಾದರೆ ಸುಮಾರು ಶೇಕಡ 25 ರಷ್ಟು ವಿನಾಯಿತಿಯನ್ನು ನೀಡಲಾಗುತ್ತದೆ.


Click it and Unblock the Notifications