ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎನ್ನುವುದು ಅತ್ಯಂತ ಮಹತ್ವದ ದಿನವಾಗಿರುತ್ತದೆ. ನಮ್ಮ ಆತ್ಮೀಯರು ಹಾಗೂ ಗೆಳೆಯರನ್ನು ಒಟ್ಟಿಗೆ ಸೇರಿಸುವ ಮೂಲಕ ಬದುಕಿನ ಹೊಸದೊಂದು ಪಯಣಕ್ಕೆ ನಾಂದಿ ಹಾಡುವ ಸುಸಂದರ್ಭವಿದು. ಆದರೆ ಈ ಮದುವೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎನ್ನುವಲ್ಲಿ ಅದಕ್ಕೆ ಬಹಳ ಪ್ರಮುಖವಾಗಿ ಹಣಕಾಸಿನ ಲೆಕ್ಕಾಚಾರ ಕೂಡ ಬೇಕಾಗುತ್ತದೆ.
ಹೀಗಿರುವಾಗ, ಕೆಲವೊಮ್ಮೆ ಅನಿರೀಕ್ಷಿತ ಸಂದರ್ಭಗಳು ಎದುರಾದಾಗ ಅನಿವಾರ್ಯವಾಗಿ ಮದುವೆಯನ್ನೇ ನಿಲ್ಲಿಸಬೇಕಾಗುತ್ತದೆ ಅಥವಾ ಮುಂದೂಡಬೇಕಾಗುತ್ತದೆ. ಆದರೆ, ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮದುವೆ ವಿಮೆಯೂ ನಮ್ಮ ರಕ್ಷಣೆಗೆ ಬರುತ್ತದೆ.
ಮದುವೆಯಂಥಹ ಭಾರೀ ವೆಚ್ಚದ ಸಮಾರಂಭದಲ್ಲಿನ ರಿಸ್ಕ್‌ಗಳಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಮದುವೆ ವಿಮೆ ಮಾಡುವುದು ಒಂದು ಉತ್ತಮ ಉಪಾಯವಾಗಿದೆ. ಈ ವಿವಾಹ ವಿಮೆ ಮಾಡುವುದಕ್ಕೆ ಬೇಕಾದ ತಯಾರಿಗಳು ಈ ಕೆಳಕಂಡಂತೆ ಇವೆ, ಮುಂದೆ ಓದಿ...
ರದ್ದು ಅಥವಾ ಮುಂದೂಡಿಕೆ
ರದ್ದು, ಮುಂದೂಡಿಕೆ: ಒಂದು ವೇಳೆ ಮದುವೆ ರದ್ದು, ಮುಂದೂಡಿಕೆ ಅಥವಾ ಮರು ಆಯೋಜನೆಯಾಗುವುದಾದರೆ, ಈ ವಿಮೆಯು ಡೆಕೊರೇಷನ್ ಸಂಸ್ಥೆ, ಅಡುಗೆ ತಯಾರಕರು, ಹೋಟೆಲ್ಸ್, ಟ್ರಾವೆಲ್ ಏಜೆನ್ಸಿಗಳು, ಮನರಂಜನಾ ಕಲಾವಿದರು ಹಾಗೂ ಇತರರಿಗೆ ನೀಡಿರುವ ಮುಂಗಡ ಪಾವತಿ ಹಣವನ್ನು ಕವರ್ ಮಾಡುತ್ತದೆ.
ಆಸ್ತಿ/ಸಂಪತ್ತಿಗೆ ಹಾನಿ: ಇದು ಕಳವು ಅಥವಾ ಕಳ್ಳತನವಾಗುವ ಬೆಲೆಬಾಳುವ ವಸ್ತುವಿನ ನಷ್ಟವನ್ನು ಒಳಗೊಂಡಿರುತ್ತದೆ. ಜತೆಗೆ ಬೆಂಕಿ, ಸ್ಫೋಟ, ಭೂಕಂಪದಂತಹ ಸಂದರ್ಭದಲ್ಲಿ ಮನೆ, ಮದುವೆ ಮಂಟಪ, ಮದುವೆ ಸೆಟ್ಸ್, ರಂಗಪರಿಕರಗಳಿಗೆ ಆಗುವ ಹಾನಿಯನ್ನೂ ಕವರ್ ಮಾಡುತ್ತದೆ.
ವೈಯಕ್ತಿಕ ಅಪಘಾತ
ವೈಯಕ್ತಿಕ ಅಪಘಾತ: ಇದು ಸದಸ್ಯರ ಪೂರ್ವ ಉದ್ದೇಶಿತವಲ್ಲದ ಭಾಗಶಃ ಅಥವಾ ಅಂಗವೈಕಲ್ಯದ ಅಥವಾ ಮರಣಕ್ಕೆ ಸಂಬಂಧಪಟ್ಟಿರುತ್ತದೆ. ಇದು ಮದುವೆಯಲ್ಲಿನ ಯಾವುದೇ ದುರ್ಘಟನೆಯಿಂದ ಮೂರನೇ ವ್ಯಕ್ತಿಗೆ ಆಗುವ ಹಾನಿ ಅಥವಾ ನಷ್ಟದಿಂದ ರಕ್ಷಣೆಯನ್ನು ನೀಡುತ್ತದೆ. ಈ ವಿಮಾ ಪಾಲಿಸಿಯು ಜನ್ಮತಾ ಅನಾರೋಗ್ಯ, ಯುದ್ಧ, ಭಯೋತ್ಪಾದನೆ, ಆತ್ಮಹತ್ಯೆ, ಅಪಹರಣ ಅಥವಾ ಮಾಲಿನ್ಯದಿಂದ ಉಂಟಾಗುವ ನಷ್ಟ, ಗಾಯ ಅಥವಾ ಪ್ರಾಣಹಾನಿಯನ್ನು ಒಳಗೊಂಡಿರುವುದಿಲ್ಲ. ಅಲ್ಲದೆ, ವಿಮಾದಾರನು ಅವನ ಅಥವಾ ಅವಳ ಅಸಾಮರ್ಥ್ಯದಿಂದಾಗಿ ನಿಗದಿತ ಸಮಯದೊಳಗೆ ಈ ಮದುವೆ ಸಮಾರಂಭವನ್ನು ಆಯೋಜಿಸುವುದಕ್ಕೆ ವಿಫಲಗೊಂಡರೆ ಈ ವಿಮೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ಹಣದ ಕೊರತೆ, ಸುಸ್ತಿದಾರರ ಮತ್ತಿತರ ಹಣಕಾಸಿನ ಮುಗ್ಗಟ್ಟಿನಿಂದಾಗಿ ಉಂಟಾಗುವ ಅಡಚಣೆಗಳ ಸಂದರ್ಭಗಳಲ್ಲಿ ಈ ಪಾಲಿಸಿ ಕವರ್ ಆಗುವುದಿಲ್ಲ.
ಏಳು ದಿನಗಳವರೆಗೆ ಅನ್ವಯ
ಮದುವೆ ಪಾಲಿಸಿಯು ಸಾಮಾನ್ಯವಾಗಿ ಸಂಪೂರ್ಣ ಮದುವೆ ಸಮಾರಂಭದ ಏಳು ದಿನಗಳವರೆಗೆ ಅನ್ವಯಿಸಲಿದ್ದು, ಮದುವೆಯ ಕೊನೆಯ ದಿನದಂದು ಇದು ಮುಕ್ತಾಯಗೊಳ್ಳುತ್ತದೆ. ಈ ಪಾಲಿಸಿಯ ಫ್ರೀಮಿಯಂ ಸಾಮಾನ್ಯವಾಗಿ ಒಟ್ಟು ವಿಮೆಯ ಶೇ.0.2-0.4ರಷ್ಟು ಆಗಿದ್ದು, ಆಯ್ಕೆ ಮಾಡಿಕೊಳ್ಳುವ ಕವರೇಜ್‌ನ ಪ್ರಮಾಣ ಮತ್ತು ವಿಧಗಳಿಗೆ ಹೊಂದಿಕೊಂಡು ಬದಲಾಗುತ್ತದೆ. ಉದಾಹರಣೆಗೆ ಫ್ಯೂಚರ್ ಜನರಲಿನ 40 ಲಕ್ಷದ ಕವರೇಜ್‌ಗೆ 10000 ಹಾಗೂ 15000 ರೂ. ನಡುವೆ ಪ್ರೀಮಿಯಂ ಇರುತ್ತದೆ. ಭಾರತದಲ್ಲಿ ಈ ವಿವಾಹ ವಿಮೆಯು ವ್ಯಾಪಕವಾಗಿ ಲಭ್ಯವಿರುವುದಿಲ್ಲ. ಫ್ಯೂಚರ್ ಜೆನರಲಿ, ಐಸಿಐಸಿಐ ಲೊಂಬಾರ್ಡ್, ಬಜಾಜ್ ಅಲಿಯಾನ್ಸ್, ಓರಿಯಂಟಲ್ ಇನ್ಶೂರೆನ್ಸ್ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಗಳು ವಿವಾಹ ಅಥವಾ ಮದುವೆ ವಿಮೆ ಒದಗಿಸುವ ಕೆಲವು ಕಂಪೆನಿಗಳಾಗಿವೆ.


Click it and Unblock the Notifications