ಫೆಬ್ರವರಿ 1 (ಶನಿವಾರ) ರಂದು 2020 ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಬಂದಾಕ್ಷಣ ಜನರು ಎದುರು ನೋಡೋದು ಆದಾಯ ತೆರಿಗೆಯನ್ನು ಕಡಿತಗೊಳಿಸುತ್ತಾರಾ? ನೇರ ತೆರಿಗೆಯಲ್ಲಿ ಏನಾದರೂ ಬದಲಾಗುತ್ತಾ? ಹೀಗೆ ಬಹುತೇಕ ಜನರು ಈ ವಿಚಾರಗಳ ಕುರಿತು ಹೆಚ್ಚು ಗಮನ ವಹಿಸುತ್ತಾರೆ.
ಈ ಬಾರಿ ಬಜೆಟ್‌ನಲ್ಲೂ ನೇರ ತೆರಿಗೆ ಕಡಿತವಾಗಬಹುದಾ? ಎಂದು ತೆರಿಗೆದಾರರು ಎದುರು ನೋಡುತ್ತಿದ್ದಾರೆ. ಬಜೆಟ್‌ನಲ್ಲಿ ಪದೇ ಪದೇ ಕೇಳಿ ಬರುವ ಈ ನೇರ ತೆರಿಗೆ ಎಂದರೇನು? ಯಾರಿಗೆಲ್ಲಾ ಅನ್ವಯಿಸುತ್ತದೆ ಎಂದು ತಿಳಿಯಲು ಈ ಕೆಳಗಿನ ಮಾಹಿತಿ ಓದಿ.
ನೇರ ತೆರಿಗೆ ಎಂದರೇನು?
ಸರ್ಕಾರವು ನೇರವಾಗಿ ತೆರಿಗೆದಾರರಿಗೆ ಮತ್ತು ಸ್ವತ್ತುಗಳ ಮೇಲೆ ಮೂಲದಲ್ಲಿಯೇ ಕಡಿತಗೊಳಿಸುವ ತೆರಿಗೆಯನ್ನು ನೇರ ತೆರಿಗೆ ಎನ್ನಲಾಗುತ್ತದೆ. ವ್ಯಕ್ತಿಯ ಆದಾಯ ಅಥವಾ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ನೇರ ತೆರಿಗೆ ವ್ಯವಸ್ಥೆಯಡಿಯಲ್ಲಿ ಬರುತ್ತವೆ.
ಆದಾಯ ತೆರಿಗೆ
ಆದಾಯ ತೆರಿಗೆ ಎನ್ನುವುದು ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳು ಮತ್ತು ವ್ಯವಹಾರಗಳಿಂದ ಬರುವ ಆದಾಯದ ಮೇಲೆ ವಿಧಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ ಸರ್ಕಾರಗಳಿಗೆ ಆದಾಯದ ಮೂಲವಾಗಿದೆ. ಈ ಆದಾಯ ತೆರಿಗೆಯನ್ನು ಸರ್ಕಾರದ ಬಾಧ್ಯತೆಗಳನ್ನು ಪಾವತಿಸಲು, ಸಾರ್ವಜನಿಕ ಸೇವೆಗಳಿಗೆ ಹಣ ಒದಗಿಸಲು ಮತ್ತು ನಾಗರೀಕರಿಗೆ ಸರಕುಗಳನ್ನು ಒದಗಿಸಲು ಬಳಸಲಾಗುತ್ತದೆ.
ವಾರ್ಷಿಕ 5 ಲಕ್ಷ ಮತ್ತು ಹೆಚ್ಚು ವೇತನ ಪಡೆಯುವ ಉದ್ಯೋಗಿಗಳಿಗೆ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮಾಡಲಾಗುತ್ತದೆ.
ಆಸ್ತಿ ಮೇಲಿನ ತೆರಿಗೆ
ಪುರಸಭೆ, ಪಟ್ಟಣ ಅಥವಾ ಗ್ರಾಮ ಪಂಚಾಯಿತಿ, ಕಾರ್ಪೋರೇಷನ್‌ಗಳಲ್ಲಿ ವ್ಯಕ್ತಿ ಹೊಂದಿರುವ ಭೂವಿ, ಕಟ್ಟಡ ಸಂಬಂಧಪಟ್ಟಂತೆ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತದೆ. ದೇಶದಲ್ಲಿ ರಾಜ್ಯವಾರು ತೆರಿಗೆ ದರದಲ್ಲಿ ವ್ಯತ್ಯಾಸವಾಗುತ್ತದೆ. ಆಸ್ತಿ ತೆರಿಗೆಯು ಪ್ರತಿ ರಾಜ್ಯಗಳ ಖಜಾನೆಯ ಆದಾಯ ಪ್ರಮುಖ ಭಾಗವಾಗಿದೆ.
ಕಾರ್ಪೋರೇಟ್ ತೆರಿಗೆ
ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೋರೇಟ್ ತೆರಿಗೆಯು ಪ್ರಮುಖ ಅಂಶವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 20 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಪೋರೇಟ್ ತೆರಿಗೆಯನ್ನು 30 ಪರ್ಸೆಂಟ್‌ನಿಂದ 20 ಪರ್ಸೆಂಟ್‌ಗೆ ಇಳಿಸಿದರು. ಕಾರ್ಪೋರೇಟ್ ತೆರಿಗೆಯಲ್ಲಿ ಹಲವು ರೀತಿಯನ್ನು ಒಳಗೊಂಡಿದೆ.
- ಶೂನ್ಯ ಅಥವಾ ಕಡಿಮೆ ಆದಾಯ ತೋರಿಸುವ ಕಂಪನಿಗಳಿಗೆ ನಿರ್ದಿಷ್ಟ ತೆರಿಗೆ ವಿಧಿಸುವುದು ಕನಿಷ್ಟ ಪರ್ಯಾಯ ತೆರಿಗೆಯಿಂದ ಸಾಧ್ಯವಾಗಿದೆ.
- ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುವ ಸವಲತ್ತುಗಳಿಗೆ ಪಾವತಿಸಬೇಕಾದುದು ಹೆಚ್ಚುವರಿ ಸೌಲಭ್ಯ ತೆರಿಗೆ (ಎಫ್‌ಬಿಟಿ)
-ಷೇರುಗಳ ಖರೀದಿ ಮತ್ತು ಮಾರಾಟದ ಮೇಲೆ ವಿಧಿಸಲಾಗುವ ಷೇರು ವರ್ಗಾವಣೆ ತೆರಿಗೆ (ಎಸ್‌ಟಿಟಿ)
- ಷೇರುದಾರರಿಗೆ ಕಂಪನಿ ನೀಡುವ ಲಾಭಾಂಶದ ಮೇಲೆ ವಿಧಿಸಲಾಗುವ ತೆರಿಗೆ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ)
ಬಂಡವಾಳ ವೃದ್ಧಿ ತೆರಿಗೆ
ವ್ಯಕ್ತಿ ಅಥವಾ ಸಂಸ್ಥೆಗಳು ಆಸ್ತಿ ಮಾರಾಟದಿಂದ ಬರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮೂಲ ಬೆಲೆ ಮತ್ತು ಮಾರಾಟ ಮಾಡಿದ ಬೆಲೆಯ ವ್ಯತ್ತಾಸಕ್ಕೆ ಬಂಡವಾಳ ವೃದ್ಧಿ ತೆರಿಗೆ ವಿಧಿಸಲಾಗುತ್ತದೆ.


Click it and Unblock the Notifications