ವಾಟ್ಸಾಪ್ ಅಪ್ಲಿಕೇಷನ್ ಬಲು ಜನಪ್ರಿಯ. ಸ್ನೇಹಿತರು/ಸ್ನೇಹಿತೆಯರ ಜತೆ ಚಾಟಿಂಗ್ ಅಥವಾ ವಾಟ್ಸಾಪ್ ಗ್ರೂಪ್ ಗಳ ಮೂಲಕ ವ್ಯಾಪಾರ- ವ್ಯವಹಾರಕ್ಕೆ ಕೂಡ ಈ ಆಪ್ ಬಳಕೆ ಆಗುತ್ತಿದೆ. ಇದೀಗ ಬ್ಯಾಂಕಿಂಗ್ ವ್ಯವಹಾರಕ್ಕೂ ವಾಟ್ಸಾಪ್ ಅಪ್ಲಿಕೇಷನ್ ಬಳಸಬಹುದು ಎಂಬ ಸಂಗತಿ ನಿಮಗೆ ಗೊತ್ತಾ? ಬ್ಯಾಂಕಿಂಗ್ ವ್ಯವಹಾರಗಳ ಕೆಲ ಬೇಸಿಕ್ ವಿಚಾರಗಳು ವಾಟ್ಸಾಪ್ ಮೂಲಕವೇ ಮಾಡಿ ಮುಗಿಸಬಹುದು. ಅಷ್ಟೇ ಅಲ್ಲ, ನಿಮ್ಮ ಮನವಿಗಳಿಗೆ ತಕ್ಷಣವೇ ಸ್ಪಂದನೆ ಕೂಡ ದೊರೆಯುತ್ತದೆ.
ಈಗ ಕೊಟಕ್ ಮಹೀಂದ್ರಾ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಂತಾದವು ತಮ್ಮ ಗ್ರಾಹಕರಿಗೆ ಅಪ್ ಡೇಟ್ಸ್ ಗಳನ್ನು ಹಾಗೂ ವಿವಿಧ ಸೇವೆಗಳನ್ನು ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಮೂಲಕವೇ ಒದಗಿಸುತ್ತಿವೆ.
ಹೌದು, ನಮಗೂ ಇದರಲ್ಲಿ ಆಸಕ್ತಿ ಇದೆ. ಏನಿದು ವಾಟ್ಸಾಪ್ ಬ್ಯಾಂಕಿಂಗ್ ಅಂತೀರಾ! ಈ ಲೇಖನದಲ್ಲಿ ವಿವರವಾಗಿ ತಿಳಿಸಿಕೊಡಲಾಗುತ್ತದೆ. ಮುಂದೆ ಓದಿ.
ವಾಟ್ಸಾಪ್ ಬ್ಯಾಂಕಿಂಗ್ ಸೇವೆ ನೋಂದಣಿ ಹೇಗೆ?
ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದಕ್ಕೆ ಆಯಾ ಬ್ಯಾಂಕ್ ಗಳ ವೆಬ್ ಸೈಟ್ ನಲ್ಲಿ ನೀಡಿರುವ ಸಂಬಂಧಪಟ್ಟ ಸಂಖ್ಯೆಗೆ ಮೊದಲು ಮಿಸ್ಡ್ ಕಾಲ್ ನೀಡಬೇಕು. ಈ ಸಂಖ್ಯೆ ಒಂದು ಬ್ಯಾಂಕ್ ನಿಂದ ಮತ್ತೊಂದಕ್ಕೆ ಬೇರೆಯಾಗಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಯಾವ ಮೊಬೈಲ್ ನಂಬರ್ ನೀಡಿದ್ದೀರೋ ಅದೇ ಸಂಖ್ಯೆಯ ಮೂಲಕವೇ ಮಿಸ್ಡ್ ಕಾಲ್ ನೀಡಬೇಕು. ಹೀಗೆ ಮಾಡುವ ಮೂಲಕ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪಡೆಯಲು ನೀವು ಒಪ್ಪಿಗೆ ಸೂಚಿಸಿದಂತೆ ಆಗುತ್ತದೆ. ಆ ನಂತರ ಬ್ಯಾಂಕ್ ನ ವಾಟ್ಸಾಪ್ ಸಂಖ್ಯೆಯಿಂದ ನಿಮ್ಮ ಸಂಖ್ಯೆಗೆ ಸ್ವಾಗತಿಸುವ ಒಂದು ಸಂದೇಶ ಬರುತ್ತದೆ. ಆ ಸಂಖ್ಯೆಯನ್ನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಗೆ ಸೇವ್ ಮಾಡಿಕೊಳ್ಳಬೇಕು. ಆ ನಂತರ ಯಾವುದೇ ಚಾಟ್ ಆರಂಭಿಸುವುದಕ್ಕೆ 'Hi' ಎಂಬ ಸಂದೇಶ ಕಳುಹಿಸಬೇಕು. ಆ ನಂತರ ನಿಮ್ಮ ಫೋನ್ ಸ್ಕ್ರೀನ್ ಮೇಲೆ ಬರುವ ಸೂಚನೆ ಅನುಸರಿಸುತ್ತಾ 1 ಅಥವಾ 2 ಸಂಖ್ಯೆಯನ್ನು ಟೈಪ್ ಮಾಡಿ, ಮುಂದಿನ ಅಗತ್ಯಗಳಿಗೆ ಮೆಸೇಜ್ ಮಾಡುತ್ತಾ ಸಾಗಬೇಕು.
ವಾಟ್ಸಾಪ್ ಮೂಲಕ ಯಾವೆಲ್ಲ ಸೇವೆ ದೊರೆಯುತ್ತದೆ?
ಒಂದು ಸಲ ವಾಟ್ಸಾಪ್ ಬ್ಯಾಂಕಿಂಗ್ ಗೆ ನೋಂದಣಿಯಾದ ಮೇಲೆ ಬ್ಯಾಂಕ್ ನ ಅಲರ್ಟ್ ಮೆಸೇಜ್ ಅಥವಾ ನೋಟಿಫಿಕೇಷನ್ ಎಸ್ಸೆಮ್ಮೆಸ್ ಮೂಲಕ ಬರುವುದಿಲ್ಲ. ಇನ್ನೇನಿದ್ದರೂ ವಾಟ್ಸಾಪ್ ಗೆ ಬರುತ್ತದೆ. ನಿಮ್ಮ ಕಾರ್ಡ್ ಗಳ ಮಾಹಿತಿ, ಫಿಕ್ಸೆಡ್ ಡೆಪಾಸಿಟ್, ಮಿನಿ ಸ್ಟೇಟ್ ಮೆಂಟ್, ಪ್ರೀ ಅಪ್ರೂವ್ಡ್ ಲೋನ್ ಇತ್ಯಾದಿಗಳ ಬಗ್ಗೆ ಬ್ಯಾಂಕ್ ಜತೆ ಚಾಟ್ ಮಾಡುತ್ತಾ ಮಾಹಿತಿ ಪಡೆಯಬಹುದು. ಉದಾಹರಣೆಗೆ: ಕ್ರೆಡಿಟ್ ಕಾರ್ಡ್ ನ ಬಾಕಿ ಮೊತ್ತ ಎಷ್ಟು ಪಾವತಿಸಬೇಕು, ರಿವಾರ್ಡ್ ಪಾಯಿಂಟ್ ಎಷ್ಟಿದೆ ಎಂಬ ಮಾಹಿತಿ ಬೇಕಿದ್ದಲ್ಲಿ, "credit card outstanding" or "credit card reward points" ಅಂತ ಟೈಪ್ ಮಾಡಬೇಕು ಕಳುಹಿಸಬೇಕು. ಆ ನಂತರ ಕ್ರೆಡಿಟ್ ಕಾರ್ಡ್ ನ ಕೊನೆ ನಾಲ್ಕು ಸಂಖ್ಯೆ ಕಳುಹಿಸಬೇಕು. ಇದೇ ರೀತಿ ಎಫ್. ಡಿ. ಮತ್ತಿತರ ಮಾಹಿತಿ ದೊರೆಯುತ್ತದೆ. ಇನ್ನು ಒಂದು ಬ್ಯಾಂಕ್ ನಿಂದ ಮತ್ತೊಂದಕ್ಕೆ ಮನವಿಯ ವಿಧಾನ ಬೇರೆಯಾಗುತ್ತದೆ. ನೀವು ವಾಟ್ಸಾಪ್ ಬ್ಯಾಂಕಿಂಗ್ ನಲ್ಲಿ ಮಾಹಿತಿ ಪಡೆಯಬಹುದೇ ವಿನಾ ಹಣ ಟ್ರಾನ್ಸ್ ಫರ್ ಅಥವಾ ಬಿಲ್ ಪಾವತಿಸಲು ಸಾಧ್ಯವಿಲ್ಲ.
ಶುಲ್ಕ ಎಷ್ಟು ವಿಧಿಸಲಾಗುತ್ತದೆ?
ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗೆ ಬ್ಯಾಂಕ್ ಗಳಿಂದ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ. ಬ್ಯಾಂಕ್ ನ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಈ ಸೇವೆ ಬಳಸಲಾಗುತ್ತದೆ. ಆಯಾ ಬ್ಯಾಂಕ್ ನ ಗ್ರಾಹಕರು ಹೌದೋ ಅಥವಾ ಅಲ್ಲವೋ ರಿಯಲ್ ಟೈಮ್ ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ. ಈ ಸೇವೆ ಮೂಲಕ ಬ್ಯಾಂಕ್ ನ ಶಾಖೆಗಳು ಹಾಗೂ ಫೋನ್ ಬ್ಯಾಂಕಿಂಗ್ ವಿಭಾಗದ ಮೇಲಿನ ಒತ್ತಡ ನಿವಾರಣೆಯಾಗುತ್ತದೆ.
ಸುರಕ್ಷೆ ಮತ್ತು ಅಪಾಯ
ವಾಟ್ಸಾಪ್ ಬ್ಯಾಂಕಿಂಗ್ ಸುರಕ್ಷಿತವಾದದ್ದು. ಜತೆಗೆ ಖಾತೆಯ ಮಾಹಿತಿಯನ್ನು ಬೇರೆ ಯಾವ ವ್ಯಕ್ತಿಗಳ ಜತೆಗೂ ಹಂಚಿಕೊಳ್ಳುವುದಿಲ್ಲ. ಇನ್ನು ಪಿನ್ ಅಥವಾ ಪಾಸ್ ವರ್ಡ್ ಇಂಥ ಯವ ಮಾಹಿತಿಯನ್ನೂ ನೀಡಬೇಕಿಲ್ಲ. ಏಕೆಂದರೆ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಹಣಕಾಸು ವ್ಯವಹಾರ ಮಾಡುವುದಿಲ್ಲ. ಇಲ್ಲೇನಿದ್ದರೂ ವ್ಯವಹಾರದ ಮಾಹಿತಿ ಮಾತ್ರ ದೊರೆಯುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಕಳ್ಳತನವಾದರೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಬ್ಯಾಂಕ್ ಗೆ ಮಾಹಿತಿ ನೀಡಬೇಕು.
ಮೊಬೈಲ್ ಫೋನ್ ಕಳೆದರೆ ಏನಾಗುತ್ತದೆ?
ಒಂದು ವೇಳೆ ಮೊಬೈಲ್ ಫೋನ್ ಕಳೆದರೆ ತಕ್ಷಣವೇ ವಾಟ್ಸಾಪ್ ಅಕೌಂಟ್ ಅನ್ನು ಸ್ಥಗಿತಗೊಳಿಸಬೇಕು. [email protected] ಮೇಲ್ ಐ. ಡಿ.ಗೆ ಮಾಹಿತಿ ನೀಡುವ ಮೂಲಕ ಸ್ಥಗಿತಗೊಳಿಸಬಹುದು. ಮಾಹಿತಿ ನೀಡಿದ ತಕ್ಷಣ ವಾಟ್ಸಾಪ್ ಸೇವೆಯನ್ನು ನಿಲ್ಲಿಸಲಾಗುತ್ತದೆ. ಅದರೆ ನೆಟ್ ಬ್ಯಾಂಕಿಂಗ್/ ಶಾಖೆಗೆ ಭೇಟಿ ನೀಡುವ ಮೂಲಕ/ಫೋನ್ ಬ್ಯಾಂಕಿಂಗ್ ಮೂಲಕ ಸ್ಥಗಿತ ಮಾಡಲು ಸಾಧ್ಯವಿಲ್ಲ. ಒಟ್ಟಾರೆ ಈ ಪ್ರಕ್ರಿಯೆ ಸ್ವಲ್ಪ ದೀರ್ಘವಾದದ್ದು.


Click it and Unblock the Notifications