ಬಹಳ ವರ್ಷಗಳ ನಂತರ ಕಾನೂನು ವ್ಯಾಜ್ಯಗಳನ್ನು ಎದುರಿಸಿದ ವಾಟ್ಸಾಪ್ ನಿಂದ ಅಂತೂ ಗುರುವಾರ (ನವೆಂಬರ್ 5, 2020) ರಾತ್ರಿ ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರವೇಶ ನೀಡಿದೆ. ವಾಟ್ಸಾಪ್ ಗೆ ಅಂದಾಜು ನಲವತ್ತು ಕೋಟಿ ಬಳಕೆದಾರರು ಇದ್ದು, ಆ ಪೈಕಿ ಎರಡು ಕೋಟಿ ಬಳಕೆದಾರರಿಗೆ ಆರಂಭದಲ್ಲಿ ಸೇವೆ ಒದಗಿಸಲು ಅನುಮತಿಯನ್ನು ನೀಡಲಾಗಿದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ)ನಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುತ್ತದೆ. ಹೇಗೆ ಗೂಗಲ್ ಪೇ, ಫೋನ್ ಪೇ ಮತ್ತಿತರ ಅಪ್ಲಿಕೇಷನ್ ಗಳು ಕೆಲಸ ಮಾಡುವಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತವೆ. ನೀವು ವಾಟ್ಸಾಪ್ 'ವ್ಯಾಲೆಟ್'ನಲ್ಲಿ ಹಣ ಇಟ್ಟುಕೊಂಡಿರಬೇಕು ಎಂದೇನಿಲ್ಲ.
ಹಣ ಕಳುಹಿಸಬಹುದು, ಸ್ವೀಕರಿಸಬಹುದು
ಬ್ಯಾಂಕ್ ಖಾತೆಯಲ್ಲಿ ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಇರುವ ಹಣವನ್ನು ವರ್ಗಾವಣೆ ಮಾಡಬಹುದು ಹಾಗೂ ಅದೇ ರೀತಿ ಸ್ವೀಕರಿಸಬಹುದು. ಪಾವತಿಗಾಗಿ ನೋಂದಣಿ ಮಾಡುತ್ತಿದ್ದಂತೆ ವಾಟ್ಸಾಪ್ ನಿಂದ ಹೊಸದಾಗಿ ಯುಪಿಐ ಐಡಿ ಸೃಷ್ಟಿ ಮಾಡುತ್ತದೆ. ಅಪ್ಲಿಕೇಷನ್ ನಲ್ಲಿ 'ಪೇಮೆಂಟ್ಸ್' ವಿಭಾಗಕ್ಕೆ ತೆರಳಿ ಈ ಐಡಿಯನ್ನು ಗುರುತಿಸಬಹುದು.
ನೋಂದಣಿ ಪ್ರಕ್ರಿಯೆ ಹೇಗೆ?
ನಿಮಗೆ ಬ್ಯಾಂಕ್ ಖಾತೆ ಇರಬೇಕು ಮತ್ತು ಅಕೌಂಟ್ ಗೆ ಫೋನ್ ನಂಬರ್ ಅನ್ನು ಲಿಂಕ್ ಮಾಡಿ, ವಾಟ್ಸಾಪ್ ನಲ್ಲಿ ಪಾವತಿ ಸಕ್ರಿಯಗೊಳಿಸಬಹುದು. 'ಅಟ್ಯಾಚ್ ಮೆಂಟ್ಸ್' ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಸಾಮಾನ್ಯವಾಗಿ ಫೋಟೋ, ವಿಡಿಯೋಗಳು ಮುಂತಾದವು ಕಳಿಸುವುದಕ್ಕೆ ಬಳಸುವುದು ಇದನ್ನೇ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನ ಫೋನ್ ಕಾಲ್ ಮಾಡಲು ಹಾಗೂ ಸಂದೇಶ ಓದಲು ಅನುಮತಿ ಕೇಳುತ್ತದೆ. ಜತೆಗೆ ಪಾವತಿ ಮಾಡುವ ಸಲುವಾಗಿ ಯುಪಿಐ ಪಾಸ್ ಕೋಡ್ ಅನ್ನು ನಿಗದಿ ಮಾಡಬೇಕು. ಒಂದು ವೇಳೆ ಈಗಾಗಲೇ ಯುಪಿಐ ಅಪ್ಲಿಕೇಷನ್ ಅನ್ನು ಬಳಸುತ್ತಿದ್ದಲ್ಲಿ ಅದೇ ಪಾಸ್ ಕೋಡ್ ಬಳಬಹುದು.
ಯುಪಿಐ ಐಡಿ ನಮೂದು ಮಾಡುವ ಆಯ್ಕೆ
ಯುಪಿಐ ಎನೇಬಲ್ಡ್ ಆಗಿರುವ ಬೇರೆ ಯಾವುದೇ ಅಪ್ಲಿಕೇಷನ್ ಬಳಸುತ್ತಿರುವವರಿಗೆ ವಾಟ್ಸಾಪ್ ಪೇಮೆಂಟ್ ಬಳಸಿ, ಹಣ ಕಳುಹಿಸಬಹುದು. ಒಂದು ವೇಳೆ ಹಣ ಸ್ವೀಕರಿಸಬೇಕಾದ ವ್ಯಕ್ತಿಯ ಬಳಿ ವಾಟ್ಸಾಪ್ ಪೇಮೆಂಟ್ಸ್ ಖಾತೆ ಇರದಿದ್ದಲ್ಲಿ ಯುಪಿಐ ಐಡಿ ನಮೂದು ಮಾಡುವ ಆಯ್ಕೆ ಬರುತ್ತದೆ. ಆ ನಂತರ ಗೂಗಲ್ ಪೇ, ಫೋನ್ ಪೇ ಅಥವಾ ಮತ್ಯಾವುದೇ ಐಡಿ ನಮೂದಿಸಿ ಪಾವತಿ ಮಾಡಬಹುದು. ಅದಕ್ಕೆ ಪರ್ಯಾಯವಾಗಿ, ವ್ಯವಹಾರ ಆರಂಭಿಸಲು ವಾಟ್ಸಾಪ್ ನೋಂದಣಿ ಪ್ರಕ್ರಿಯೆ ಮಾಡಬಹುದು. ಬ್ಯಾಂಕ್ ಖಾತೆ ಹಾಗೂ ಫೋನ್ ನಂಬರ್ ಎರಡೂ ವೆರಿಫಿಕೇಷನ್ ಆಗಬೇಕಾಗುತ್ತದೆ. ಎರಡೂ ಕಡೆಯವರು ಈ ಪ್ರಕ್ರಿಯೆ ಪೂರ್ಣಗೊಳಿಸಿದ ಮೇಲೆ ನಿಮ್ಮ ಫೋನ್ ನಲ್ಲಿನ ಕಾಂಟ್ಯಾಕ್ಟ್ ಗಳ ಮೇಲೆ ಕ್ಲಿಕ್ ಮಾಡಿ, ಹಣ ಸ್ವೀಕಾರ ಹಾಗೂ ಪಾವತಿ ಮಾಡಬಹುದು. ಮೊದಲೇ ಹೇಳಿದಂತೆ ಅಟ್ಯಾಚ್ ಮೆಂಟ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಆಯಿತು.
ಭಾರತೀಯ ಫೋನ್ ನಂಬರ್, ಬ್ಯಾಂಕ್ ಖಾತೆಯಲ್ಲಿ ಮಾತ್ರ
ವಾಟ್ಸಾಪ್ ಪೇ ಅನ್ನು ಭಾರತೀಯ ನಂಬರ್ ಗಳಿಗೆ ಹಾಗೂ ಭಾರತೀಯ ಬ್ಯಾಕ್ ಖಾತೆಗಳಿಗೆ ಜೋಡಣೆ ಆಗಿದ್ದಲ್ಲಿ ಮಾತ್ರ ಬಳಸುವುದಕ್ಕೆ ಸಾಧ್ಯ. ಯಾರು ಅಂತರರಾಷ್ಟ್ರೀಯ ಸಂಖ್ಯೆಗೆ ವಾಟ್ಸಾಪ್ ಹೊಂದಿರುತ್ತಾರೋ ಅವರು ಬಳಸುವುದು ಸಾಧ್ಯವಿಲ್ಲ.
ಒಂದು ಲಕ್ಷ ರುಪಾಯಿ ವ್ಯವಹಾರದ ಮಿತಿ
ವಾಟ್ಸಾಪ್ ಪೇ ನಲ್ಲಿ ಕೂಡ ಯುಪಿಐನಲ್ಲಿ ಇರುವಂತೆ ಒಂದು ಲಕ್ಷ ರುಪಾಯಿ ವ್ಯವಹಾರದ ಮಿತಿ ಅನ್ವಯ ಆಗುತ್ತದೆ. ಯುಪಿಐ ಎಂಬುದು ಉಚಿತ ಸೇವೆ. ಅದರ ಮೂಲಕ ಮಾಡುವ ವ್ಯವಹಾರಗಳಿಗೆ ಶುಲ್ಕ ಹಾಕುವುದಿಲ್ಲ. ಕೆಲವು ಯುಪಿಐ ಅಪ್ಲಿಕೇಷನ್ ಗಳಲ್ಲಿ ಯಾರಿಗೆ ಹಣ ಕಳುಹಿಸಬೇಕೋ ಅವರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ನಮೂದಿಸಿದರೂ ಸಾಕು, ಹಣ ಕಳುಹಿಸಬಹುದು. ಈ ಫೀಚರ್ ವಾಟ್ಸಾಪ್ ನಲ್ಲಿ ಇನ್ನೂ ತಂದಿಲ್ಲ.


Click it and Unblock the Notifications