ಇತ್ತೀಚೆಗೆ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಲವಾರು ರಾಜ್ಯಗಳಲ್ಲಿ ರಾಜಕೀಯ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತ ಸಿನಿಮಾ ಎಂದು ಘೋಷಣೆ ಮಾಡಲಾಗಿದೆ. ಒಂದು ಸಿನಿಮಾಕ್ಕೆ ಸರ್ಕಾರವು ತೆರಿಗೆ ವಿನಾಯಿತಿ ಘೋಷಣೆ ಮಾಡಿದಾಗ ಆ ಸಿನಿಮಾದ ಪ್ರಚಾರವು ಇನ್ನಷ್ಟು ಹೆಚ್ಚಾಗಲಿದೆ. ತೆರಿಗೆ ವಿನಾಯಿತಿ ಪಡೆದ ಸಿನಿಮಾ ಎಂಬ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಗಳಿಸಲಿದೆ.
ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಗೋವಾ, ಕರ್ನಾಟಕ, ತ್ರಿಪುರಾ, ಉತ್ತರ ಪ್ರದೇಶ ಹಾಗೂ ಉತ್ತಾರಖಂಡದಲ್ಲಿ ಈ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಆದರೆ ಯಾವ ಸಂದರ್ಭದಲ್ಲಿ ಒಂದು ಸಿನಿಮಾವನ್ನು ತೆರಿಗೆ ಮುಕ್ತ ಸಿನಿಮಾ ಎಂದು ಘೋಷಣೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು. ಈ ಬಗ್ಗೆ ಇಲ್ಲಿದೆ ವಿವರ....
2012ರಿಂದ ಈವರೆಗೆ ಹಲವಾರು ಸಿನಿಮಾಗಳನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ 16 ಸಿನಿಮಾಗಳನ್ನು ಕಳೆದ ಹತ್ತು ವರ್ಷದಲ್ಲಿ ತೆರಿಗೆ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ 777 ಚಾರ್ಲಿ ಸಿನಿಮಾಕ್ಕೆ ಕರ್ನಾಟಕ ಸರ್ಕಾರವು ತೆರಿಗೆ ಮುಕ್ತ ಸಿನಿಮಾವೆಂದು ಘೋಷಣೆ ಮಾಡಿದೆ. ಸಿನಿಮಾವನ್ನು ವೀಕ್ಷಿಸಿದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾರ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿ ಘೋಷಣೆ ಮಾಡಿದ್ದಾರೆ. ಯಾವ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಬಹುದು, ತೆರಿಗೆ ಮುಕ್ತ ಸಿನಿಮಾದ ಇತಿಹಾಸ ಹೇಗಿದೆ ಎಂದು ತಿಳಿಯಲು ಮುಂದೆ ಓದಿ.....
ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸುವುದು ಯಾವಾಗ?
ಒಂದು ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲು ಅಥವಾ ತೆರಿಗೆ ವಿನಾಯಿತಿ ಪಡೆಯಲು ಯಾವುದೇ ಒಂದು ಮಾನದಂಡ ಎಂಬುವುದು ಇಲ್ಲ. ಒಂದು ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕೇ ಅಥವಾ ತೆರಿಗೆ ಮುಕ್ತಗೊಳಿಸಬೇಕೇ ಎಂದು ನಿರ್ಧಾರ ಮಾಡುವುದು ರಾಜ್ಯ ಸರ್ಕಾರವಾಗಿದೆ. ರಾಜ್ಯ ಸರ್ಕಾರವು ಆ ಸಿನಿಮಾದಲ್ಲಿ ಯಾವ ವಿಚಾರವನ್ನು ಪ್ರಸ್ತುತಪಡಿಸಲಾಗಿದೆ ಎಂಬ ಆಧಾರದಲ್ಲಿ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡುತ್ತದೆ. ಸಾಮಾನ್ಯವಾಗಿ ಒಂದು ಸಿನಿಮಾವು ಸಾಮಾಜಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಾಗ, ಸ್ಪೂರ್ತಿದಾಯಕ ಕಥೆ ಸಿನಿಮಾದಲ್ಲಿ ಇದ್ದಾಗ ರಾಜ್ಯ ಸರ್ಕಾರವು ಸಿನಿಮಾವನ್ನು ತೆರಿಗೆ ವಿನಾಯಿತಿ ಅಥವಾ ತೆರಿಗೆ ಮುಕ್ತ ಎಂದು ಘೋಷಣೆ ಮಾಡಬಹುದು.
ಸಿನಿಮಾ ಟಿಕೆಟ್ ಅಗ್ಗವಾಗುವುದು ಯಾವಾಗ?
2017ರಲ್ಲಿ ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ವಿಧಿಸುವುದಕ್ಕೂ ಮೊದಲೇ ಸರ್ಕಾರವು ಮನರಂಜನೆ ತೆರಿಗೆಯನ್ನು ಸಿನಿಮಾದ ಮೇಲೆ ವಿಧಿಸುತ್ತಿದ್ದವು. ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ತೆರಿಗೆ ಇರುತ್ತಿತ್ತು. ಮಹಾರಾಷ್ಟ್ರ್ ಹಾಗೂ ಉತ್ತರ ಪ್ರದೇಶದಲ್ಲಿ ಈ ತೆರಿಗೆ ಹೆಚ್ಚಾಗಿದೆ. ಒಂದು ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡಿದಾಗ ಟಿಕೆಟ್ ದರವು ಅಗ್ಗವಾಗುತ್ತದೆ.
ಸಿನಿಮಾ ಟಿಕೆಟ್ ಎಷ್ಟು ಅಗ್ಗವಾಗಿ ದೊರೆಯುತ್ತದೆ?
ಜಿಎಸ್‌ಟಿ ನಿಯಮದ ಪ್ರಕಾರ ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಲ್ಲೂ ಹಲವಾರು ನಿಯಮಗಳು ಇದೆ. ನೂರು ರೂಪಾಯಿಗಿಂತ ಕಡಿಮೆ ಟಿಕೆಟ್‌ಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ನೂರು ರೂಪಾಯಿಗಿಂತ ಅಧಿಕ ಮೊತ್ತದ ಟಿಕೆಟ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಹಣವನ್ನು ರಾಜ್ಯ, ಕೇಂದ್ರಕ್ಕೆ ಸಮನಾಗಿ ಹಂಚಿಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಒಂದು ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡಿದಾಗ ರಾಜ್ಯದ ಜಿಎಸ್‌ಟಿ ಮಾತ್ರ ಕಡಿತವಾಗುತ್ತದೆ. ಕೇಂದ್ರ ಸರ್ಕಾರದ ಜಿಎಸ್‌ಟಿ ಹಾಗೆಯೇ ಇರುತ್ತದೆ. ಟಿಕೆಟ್ ದರದ ಆಧಾರದಲ್ಲಿ ಸುಮಾರು ಶೇಕಡ 6ರಿಂದ ಶೇಕಡ 9ರವರೆಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.
ತೆರಿಗೆ ಮುಕ್ತ ಸಿನಿಮಾದ ಇತಿಹಾಸ ತಿಳಿಯಿರಿ
1982ರಲ್ಲಿ ಬಿಡುಗಡೆಯಾದ 'ಗಾಂಧಿ'ಯಂತಹ ಸಿನಿಮಾಗಳು ತೆರಿಗೆ ವಿನಾಯಿತಿಯನ್ನು ಪಡೆದಿದೆ. ಆದರೆ ಜಿಎಸ್‌ಟಿ ಆರಂಭವಾದ ಬಳಿಕ ತೆರಿಗೆ ವಿನಾಯಿತಿಯನ್ನು ಮೊದಲು ಪಡೆದ ಸಿನಿಮಾ Toilet: Ek Prem Katha (2017). ಉತ್ತರ ಪ್ರದೇಶ ಸರ್ಕಾರ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಛಪಾಕ್ (2020), ಮೇರಿ ಕೋಮ್ (2014), ತಾರೆ ಝಮೀನ್ ಪರ್ (2007), ಮರ್ದಾನಿ (2014), ನೀಲ್ ಬತ್ತೆ ಸನ್ನಾಟ (2014) ಸಿನಿಮಾ ತೆರಿಗೆ ವಿನಾಯಿತಿ ಪಡೆದಿದೆ.


Click it and Unblock the Notifications