ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರೋಪಿಗಳಾಗಿರುವವರಿಂದ 15,113 ಕೋಟಿ ರೂಪಾಯಿಗಳನ್ನು ಸರ್ಕಾರ ವಸೂಲಿ ಮಾಡಲಾಗಿದೆ. ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ ಹತ್ತು ಮಂದಿಯನ್ನು ಎಫ್‌ಇಒಗಳು ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ ನೀರವ್ ಮೋದಿ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಪಿಎನ್‌ಬಿ ಹಗರಣದಲ್ಲಿ ನೀರವ್ ಮೋದಿ ಪಾತ್ರ
2 ಬಿಲಿಯನ್ ಡಾಲರ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ನೀವರ್ ಮೋದಿ ವಿರುದ್ಧ ತನಿಖೆ ನಡೆಯುತ್ತಿದೆ. ಕ್ರಿಮಿನಲ್ ಪಿತೂರಿ, ನಂಬಿಕೆ ಮಾಡಿ ಮೋಸ, ವಂಚನೆ, ಭ್ರಷ್ಟಾಚಾರ, ಮನಿ ಲಾಂಡರಿಂಗ್, ವಂಚನೆ, ದುರುಪಯೋಗ ಮತ್ತು ಒಪ್ಪಂದದ ಉಲ್ಲಂಘನೆಗಾಗಿ ಆಗಸ್ಟ್ 2018 ರಲ್ಲಿ ಪಿಎನ್‌ಬಿ ಹಗರಣ ಪ್ರಕರಣದಲ್ಲಿ ಭಾರತ ಸರ್ಕಾರವು ಅವರ ಮೇಲೆ ಆರೋಪ ಹೊರಿಸಿತ್ತು.
ಏನಿದು ಪಿಎನ್‌ಬಿ ಹಗರಣ?
ಮುಂಬೈನ ಫೋರ್ಟ್‌ನಲ್ಲಿರುವ ಬ್ರಾಡಿ ಹೌಸ್ ಶಾಖೆಯಲ್ಲಿ ಪಿಎನ್‌ಬಿ ನೀಡಿದ ನಕಲಿ ಅಂಡರ್‌ಟೇಕಿಂಗ್ ಪತ್ರಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2018 ರಲ್ಲಿ ದೇಶದಿಂದ ಪಲಾಯನ ಮಾಡಿದ ನೀರವ್ ಮೋದಿ, ಅವರ ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಮತ್ತು ಸೋದರ ಮಾವ ಮೆಹುಲ್ ಚೋಕ್ಸಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆಯೇ ಪಿಎನ್‌ಬಿ ಬ್ಯಾಂಕ್ ಉದ್ಯೋಗಿಗಳು ಮತ್ತು ನೀರವ್ ಮೋದಿ ಸಂಸ್ಥೆಯ ನಿರ್ದೇಶಕರು ಸಹಾಯ ಮಾಡಿದ್ದಾರೆ ಎಂಬ ಆರೋಪವಿದೆ.
ಒಂದು ವರ್ಷದ ಅವಧಿಗೆ ಮುತ್ತುಗಳನ್ನು ಆಮದು ಮಾಡಿಕೊಳ್ಳಲು ಭಾರತೀಯ ಬ್ಯಾಂಕ್‌ಗಳ ಶಾಖೆಗಳ ಪರವಾಗಿ ಪತ್ರವನ್ನು ನೀಡಲಾಗಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಪ್ರಕಾರ ಮುತ್ತುಗಳನ್ನು ಸಾಗಣೆಯ ದಿನಾಂಕದಿಂದ 90 ದಿನಗಳ ಅವಧಿಯಲ್ಲಿ ಮಾತ್ರ ಈ ಪತ್ರವನ್ನು ನೀಡಬಹುದಾಗಿದೆ. ಆದರೆ ಈ ಪ್ರಕರಣದಲ್ಲಿ ಒಂದು ವರ್ಷದ ಅವಧಿಗೆ ನಕಲಿ ಅಂಡರ್‌ಟೇಕಿಂಗ್ ಪತ್ರ ನೀಡಲಾಗಿದೆ.
ಆರ್‌ಬಿಐನ ಮಾರ್ಗಸೂಚಿಯನ್ನು ಭಾರತೀಯ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಯು ನಿರ್ಲಕ್ಷ್ಯ ಮಾಡಿದೆ. ಸಂಸ್ಥೆಗಳಿಗೆ ಸಾಲವನ್ನು ನೀಡುವ ಸಂದರ್ಭದಲ್ಲಿ ಸಂಸ್ಥೆಯು ನೀಡಿರುವ ದಾಖಲೆಗಳನ್ನು ಪಿಎನ್‌ಬಿಗೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ನೀರವ್ ಮೋದಿ ಮಾರ್ಚ್ 10, 2011 ರಂದು ಮೊದಲ ಬಾರಿಗೆ ನಕಲಿ ಅಂಡರ್‌ಟೇಕಿಂಗ್ ಪತ್ರವನ್ನು ಪಡೆದರು. ಅದಾದ ಬಳಿಕ 74 ತಿಂಗಳುಗಳಲ್ಲಿ 1,212 ಹೆಚ್ಚಿನ ನಕಲಿ ಗ್ಯಾರಂಟಿ ಪತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಎನ್‌ಬಿ ಉದ್ಯೋಗಿಗಳು SWIFT ನೆಟ್‌ವರ್ಕ್ ಅನ್ನು ದುರುಪಯೋಗಪಡಿಸಿಕೊಂಡು ಅಲಹಾಬಾದ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗೆ ನಿಧಿಯ ಅವಶ್ಯಕತೆಯ ಕುರಿತು ಸಂದೇಶಗಳನ್ನು ರವಾನಿಸಿದ್ದಾರೆ.
SWIFT ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ಇದೆಲ್ಲವನ್ನೂ ಮಾಡಲಾಗಿದ್ದರೂ, ವಹಿವಾಟುಗಳನ್ನು ಬ್ಯಾಂಕಿನ ಪ್ರಮುಖ ವ್ಯವಸ್ಥೆಯಲ್ಲಿ ಎಂದಿಗೂ ದಾಖಲಿಸಲಾಗಿಲ್ಲ. ಇದರಿಂದಾಗಿ ಪಿಎನ್‌ಬಿ ಹಲವಾರು ವರ್ಷಗಳ ಕಾಲ ಆರ್‌ಬಿಐನ ಸಂಪೂರ್ಣ ನಿಗದಲ್ಲಿತ್ತು.
ಪಿಎನ್‌ಬಿ ಹಗರಣ ಬಯಲಾಗಿದ್ದು ಹೇಗೆ?
ಡೈಮಂಡ್ ಆರ್ ಯುಎಸ್, ಎಂ/ಎಸ್ ಸೋಲಾರ್ ಎಕ್ಸ್‌ಪೋರ್ಟ್ಸ್ ಮತ್ತು ಎಂ/ಎಸ್ ಸ್ಟೆಲ್ಲರ್ ಡೈಮಂಡ್ಸ್ ಎಂಬ ಮೂರು ಸಂಸ್ಥೆಗಳ ಸಹವರ್ತಿಗಳು ತನ್ನ ಸಾಗರೋತ್ತರ ಪೂರೈಕೆದಾರರಿಗೆ ಪಾವತಿ ಮಾಡಲು ಬ್ಯಾಂಕ್ ಅನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಅಂಡರ್‌ಟೇಕಿಂಗ್ ಪತ್ರಗಳನ್ನು ಪಡೆಯಲು ಕನಿಷ್ಠ ಶೇಕಡ 100 ರಷ್ಟು ಮಾರ್ಜಿನ್ ಅಗತ್ಯವಿದೆ ಎಂದು ಬ್ಯಾಂಕ್ ಹೇಳಿದೆ. ಈ ವೇಳೆ ಅಂತಹ ಯಾವುದೇ ಖಾತರಿಗಳಿಲ್ಲದೆ ಈ ಹಿಂದೆ ಅಂಡರ್‌ಟೇಕಿಂಗ್ ಪತ್ರಗಳನ್ನು (LoU) ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿದೆ.
ಅಂತಹ ಯಾವುದೇ ವಿನಂತಿಯನ್ನು ಸಂಸ್ಥೆಗಳಿಗೆ ನೀಡಲಾಗಿಲ್ಲ ಎಂದು ಶಾಖೆಯ ದಾಖಲೆಗಳು ತೋರಿಸಿವೆ. ಈ ವೇಳೆ ಇದು ವಂಚನೆ ಆಗಿರಬಹುದು ಎಂದು ಬ್ಯಾಂಕ್‌ಗೆ ಶಂಕೆ ಉಂಟಾಗಿದೆ. ಈ ವೇಳೆ ವಹಿವಾಟಿನ ಎಲ್ಲ ಮಾಹಿತಿಯನ್ನು ಸಿಬ್ಬಂದಿಗಳು ಪರಿಶೀಲನೆ ಮಾಡಿದ್ದಾರೆ. ಈ ಬಳಿಕ ಬ್ಯಾಂಕ್ ಜನವರಿ 29, 2018 ರಂದು ನೀರವ್ ಮೋದಿ, ಅಮಿ ಮೋದಿ, ನಿಶಾಲ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮತ್ತು ಇಬ್ಬರು ಪಿಎನ್‌ಬಿ ಉದ್ಯೋಗಿಗಳ ವಿರುದ್ಧ ವಂಚನೆ ಮತ್ತು ಅನ್ಯಾಯದಿಂದ ನಷ್ಟ ಉಂಟು ಮಾಡಿದ ಬಗ್ಗೆ ಸಿಬಿಐಗೆ ದೂರು ಸಲ್ಲಿಸಲಾಗಿದೆ.
ಪಿಎನ್‌ಬಿ ಹಗರಣ ಬಯಲಾದ ನಂತರ ನೀರವ್ ಮೋದಿ....
2018 ರಲ್ಲಿ, ನೀರವ್ ಮೋದಿ ನ್ಯೂಯಾರ್ಕ್‌ನ ಮ್ಯಾನ್ಹ್ಯಾಟನ್‌ನಲ್ಲಿ ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದರು. ಮೇ 2018 ರಲ್ಲಿ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನೀರವ್ ಮೋದಿ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದೆ. ಮೋದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮುನ್ನವೇ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಜೂನ್ 2018 ರಲ್ಲಿ, ಮೋದಿ ಬ್ರಿಟನ್‌ನಲ್ಲಿ ಇದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 2019 ರಲ್ಲಿ ಯುಕೆ ಅಧಿಕಾರಿಗಳು ಮಧ್ಯ ಲಂಡನ್‌ನಲ್ಲಿ ಮೋದಿಯನ್ನು ಬಂಧಿಸಿದರು. 2019 ರಲ್ಲಿ, ಸ್ವಿಸ್ ಅಧಿಕಾರಿಗಳು ಮೋದಿಯವರ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 6 ಮಿಲಿಯನ್ ಡಾಲರ್ ಅನ್ನು ಫ್ರೀಜ್ ಮಾಡಲಾಗಿದೆ. ಲಾಸ್ ಏಂಜಲೀಸ್ ಉದ್ಯಮಿ ಪಾಲ್ ಅಲ್ಫೊನ್ಸೊರನ್ನು ವಂಚಿಸಿದ್ದಕ್ಕಾಗಿ ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನೀರವ್ ಮೋದಿ ಮೇಲೆ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಪಿಎನ್‌ಬಿ ಹಗರಣವು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ಅತಿದೊಡ್ಡ ವಂಚನೆ ಪ್ರಕರಣವಾಗಿದೆ. ಸುಮಾರು 14,000 ಕೋಟಿ ರೂಪಾಯಿ ವಂಚನೆ ಪ್ರಕರಣೆ ಇದಾಗಿದೆ. ಇಲ್ಲಿಯವರೆಗೆ, ಭಾರತದಲ್ಲಿನ ಸರ್ಕಾರಿ ಅಧಿಕಾರಿಗಳು ಹಲವಾರು ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ನಡುವೆ ನೀರವ್ ಮೋದಿ ಬ್ರ್ಯಾಂಡ್ ಹಾಗೂ ಸಂಪತ್ತು ಎರಡೂ ಕುಸಿತ ಕಂಡಿದೆ.
2017 ರಲ್ಲಿ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 57 ನೇ ಸ್ಥಾನದಲ್ಲಿದ್ದರು, ಆದರೆ ಪ್ರಸ್ತುತ 100 ಮಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ನೀರವ್ ಮೋದಿ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ.


Click it and Unblock the Notifications