ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಬ್ಯಾಂಕ್ ಠೇವಣಿ ಪರಿಹಾರ ಮೊತ್ತವನ್ನು 1 ಲಕ್ಷ ರುಪಾಯಿನಿಂದ 5 ಲಕ್ಷ ರುಪಾಯಿಗೆ ಏರಿಕೆ ಮಾಡಿತು. ಈ ಕುರಿತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ಗೂ ಮುಂಚೆಯೇ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸುಳಿವು ನೀಡಿದ್ದರು.
ಹಣಕಾಸು ಸಂಸ್ಥೆ, ಸಹಕಾರಿ ಬ್ಯಾಂಕ್‌ಗಳು ದಿವಾಳಿ ಎದ್ದ ಅಥವಾ ಆರ್‌ಬಿಐ ಅವುಗಳ ಲೈಸೆನ್ಸ್ ರದ್ದುಪಡಿಸಿದ ಸಂದರ್ಭದಲ್ಲಿ ಠೇವಣಿ ಮೇಲಿನ ವಿಮೆ ಪರಿಹಾರ 1 ಲಕ್ಷ ರುಪಾಯಿ ಇದೆ. ಈ ಹಿಂದೆ 1993ರಲ್ಲಿ 30 ಸಾವಿರದಿಂದ 1 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿತ್ತು. ಆದರೆ ಈಗ 26 ವರ್ಷಗಳ ಬಳಿಕ ವಿಮೆ ಮೊತ್ತವನ್ನು ಹೆಚ್ಚಿಸಲಾಗಿದೆ.
ವಿಮಾ ರಕ್ಷಣೆಯನ್ನು ಏಕೆ ಹೆಚ್ಚಿಸಲಾಯಿತು?
2019 ರ ಸೆಪ್ಟೆಂಬರ್‌ನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ದಿವಾಳಿ ಎದ್ದಿದ್ದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ಗೆ ಕಡಿವಾಣ ಹಾಕಿತು ಮತ್ತು ನಿರ್ವಾಹಕರನ್ನು ನೇಮಿಸಿತ್ತು, ಆದರೆ ನಿರ್ದೇಶಕರ ಮಂಡಳಿಯನ್ನು ಮೀರಿಸಿತು. ಇದು ಠೇವಣಿದಾರರಲ್ಲಿ ಆತಂಕಕ್ಕೆ ಕಾರಣವಾಯಿತು. ಗ್ರಾಹಕರು ಬ್ಯಾಂಕ್‌ಗಳಿಗೆ ಧಾವಿಸಿದರೂ 1,000 ರುಪಾಯಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ, ಇದು ಪ್ರತಿಭಟನೆಗೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಹೀಗಾಗಿಯೇ ಹಿಂದಿನ 1 ಲಕ್ಷ ಪರಿಹಾರವನ್ನು 5 ಲಕ್ಷ ರುಪಾಯಿಗೆ ಏರಿಕೆ ಮಾಡಿದೆ.
DICGC ಎಂದರೇನು?
ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (DICGC) ಆರ್‌ಬಿಐನ ಅಂಗಸಂಸ್ಥೆಯಾಗಿದೆ. ಇದು ಪ್ರತಿ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ 1 ಲಕ್ಷ ರುಪಾಯಿ ಪರಿಹಾರವನ್ನು ನೀಡುತ್ತಿತ್ತು. ಆದರೆ ಇದೀಗ ಬ್ಯಾಂಕುಗಳು 5 ಲಕ್ಷ ರುಪಾಯಿ ಪರಿಹಾರ ಮೊತ್ತವನ್ನು ಪರಿಹಾರವಾಗಿ ನೀಡುವ ಸಾಮರ್ಥ್ಯ ಹೊಂದಿವೆ.
ಠೇವಣಿದಾರರಿಗೆ ಇದರಿಂದ ಅನುಕೂಲ ಹೇಗೆ?
ಬ್ಯಾಂಕ್ ದಿವಾಳಿಯಾದಾಗ, ಅಥವಾ ಆರ್‌ಬಿಐ ಅವುಗಳ ಲೈಸೆನ್ಸ್ ರದ್ದುಪಡಿಸಿದ ಸಂದರ್ಭದಲ್ಲಿ, ಠೇವಣಿದಾರರಿಗೆ ನಿಗಮದಿಂದ 5 ಲಕ್ಷ ರುಪಾಯಿ ಪರಿಹಾರ ಸಿಗುತ್ತದೆ. ಆದರೆ ಠೇವಣಿದಾರರು ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಗ್ರಾಹಕನು ಎಷ್ಟೇ ಮೊತ್ತದ ಹಣವನ್ನು ಠೇವಣಿ ಮಾಡಿದ್ದರೂ ಕೇವಲ 5 ಲಕ್ಷ ರುಪಾಯಿಗಳ ವಿಮಾ ರಕ್ಷಣೆಗೆ ಮಾತ್ರ ಅರ್ಹತೆ ಹೊಂದಿರುತ್ತಾನೆ.


Click it and Unblock the Notifications