ಕಾರ್ಮಿಕರು ಮತ್ತು ಉದ್ಯೋಗಿಗಳ ಭವಿಷ್ಯ ಭದ್ರತೆಗಾಗಿ ಪ್ರಾವಿಡೆಂಟ್ ಫಂಡ್ ಯೋಜನೆ ಇದೆ. ನಿವೃತ್ತರಾದ ಬಳಿಕ ಉದ್ಯೋಗಿಗಳಿಗೆ ನೆರವಾಗಲೆಂಬ ಕಲ್ಪನೆಯಲ್ಲಿ ಇಪಿಎಫ್ ಅನ್ನು ರೂಪಿಸಲಾಗಿತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಉದ್ಯೋಗನಷ್ಟ, ಕೆಲಸ ಬದಲಾವಣೆ ಪ್ರಮಾಣ ಹೆಚ್ಚಾಗಿದೆ. ಪಿಎಫ್ ಹಣವನ್ನು ಹಿಂಪಡೆಯುವ ಅನಿವಾರ್ಯತೆಯ ಸನ್ನಿವೇಶ ಹೆಚ್ಚಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆ ಅಡಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರಿಗೆ ಪಿಎಫ್ ಸೌಲಭ್ಯ ನೀಡಬೇಕು. ಕೆಲಸಕ್ಕೆ ನೇಮಕವಾದಾಗಲೇ ಉದ್ಯೋಗಿಗೆ ಪಿಎಫ್ ಖಾತೆ ತೆರೆಯಲಾಗುತ್ತದೆ. ಮೂಲವೇತನದ ಆಧಾರದ ಮೇಲೆ ಪಿಎಫ್ ಹಣ ನಿಗದಿ ಮಾಡಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಇಂತಿಷ್ಟು ಹಣವನ್ನು ಪಿಎಫ್ ಖಾತೆಗೆ ಪ್ರತಿ ತಿಂಗಳು ಜಮೆ ಮಾಡಲಾಗುತ್ತದೆ. ಕಂಪನಿಯೂ ನಿರ್ದಿಷ್ಟ ಹಣವನ್ನು ಸೇರಿಸಿಕೊಡುತ್ತದೆ. ಸರಕಾರದಿಂದಲೂ ಒಂದಷ್ಟು ಹಣ ಈ ಖಾತೆಗೆ ಹೋಗುತ್ತದೆ.
ಉದ್ಯೋಗಿ ನಿವೃತ್ತರಾದಾಗ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಅಲ್ಲಿಯವರೆಗೆ ಅವರ ಖಾತೆಗೆ ಜಮೆಯಾದ ಹಣ ಹಾಗೂ ಅದಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿ ಹಣ ಸಿಗುತ್ತದೆ. ಇಪಿಎಫ್ ಕಾಯ್ದೆ ಪ್ರಕಾರ ಹಣ ಹಿಂಪಡೆಯಲು ಉದ್ಯೋಗಿ ನಿವೃತ್ತರಾಗಿರಬೇಕು. ಆದರೆ, ಈಗ ನಿವೃತ್ತರಾಗುವ ಮುನ್ನ ಕೆಲಸ ಬಿಟ್ಟಾಗ ಅಥವಾ ಕೆಲಸ ಬದಲಿಸಿದಾಗ ಪಿಎಫ್ ಹಣ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶ ಇದೆ. ಹಾಗೆಯೇ, ಕೆಲಸದಲ್ಲಿದ್ದಾಗಲೇ ತುರ್ತಾಗಿ ಹಣ ಬೇಕೆಂದರೆ ಪಿಎಫ್ ಖಾತೆಯಿಂದ ಮುಂಗಡವಾಗಿ ಒಂದಷ್ಟು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಅನುಮತಿ ಇದೆ.
ಈ ವಿಷಯ ಗಮನದಲ್ಲಿರಲಿ
ನೀವು ಕೆಲಸ ಬಿಟ್ಟು ಎರಡು ತಿಂಗಳವರೆಗೆ ಪಿಎಫ್ ವಿತ್‌ಡ್ರಾಗೆ ಅರ್ಜಿ ಸಲ್ಲಿಸಲು ಹೋಗದಿರಿ. ಕೊನೆಯ ಸಂಬಳದಲ್ಲಿ ನಿಮ್ಮ ಪಿಎಫ್ ಖಾತೆಗೆ ನಿಮ್ಮ ಸಂಬಳದಲ್ಲಿ ಎಷ್ಟು ಮುರಿದುಕೊಳ್ಳಲಾಗಿತ್ತು, ಕಂಪನಿಯಿಂದ ಎಷ್ಟು ಜಮೆಯಾಗಿತ್ತು ಎಂಬ ವಿವರ ತಿಳಿದಿರಿ. ನೀವು ನಮೂದಿಸುವ ವಿಳಾಸ ಇತ್ಯಾದಿ ಮಾಹಿತಿ ಎಲ್ಲವೂ ಚಾಲ್ತಿಯಲ್ಲಿರಬೇಕು.
ನೀವು ನಿವೃತ್ತಿಗೆ ಮುಂಚೆ ಪಿಎಫ್ ಹಣ ವಿತ್‌ಡ್ರಾ ಮಾಡಿಕೊಳ್ಳುತ್ತಿರುವುದರಿಂದ ಖಾತೆಯಲ್ಲಿರುವ ಎಲ್ಲಾ ಹಣವನ್ನೂ ಹಿಂಪಡೆಯದಿರುವುದು ಒಳ್ಳೆಯದು. ಖಾತೆಯಲ್ಲಿ ಒಂದಷ್ಟು ಹಣ ಇದ್ದು ಸಕ್ರಿಯವಾಗಿರಲಿ. ನೀವು ಬೇರೆ ಕಡೆ ಕೆಲಸ ಸೇರಿದಾಗ ಆ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳಬಹುದು. ನೀವು ಸಂಪೂರ್ಣ ನಿವೃತ್ತರಾದಾಗ ಇದು ಉಪಯೋಗಕ್ಕೆ ಬರುತ್ತದೆ.
ಆನ್‌ಲೈನ್‌ನಲ್ಲಿ ವಿತ್‌ಡ್ರಾ ಮಾಡುವುದು ಹೀಗೆ:
ನೀವು ಇಪಿಎಫ್‌ಒ ಪೋರ್ಟಲ್‌ನಲ್ಲಿ ನಿಮ್ಮ ಯುಎಎನ್ ನಂಬರ್ ಅನ್ನು ಸಕ್ರಿಯಗೊಳಿಸಬೇಕು. ಯುಎಎನ್ ಮತ್ತು ಆಧಾರ್ ನಂಬರ್ ಅನ್ನು ಜೋಡಿಸಬೇಕು. ಇದರಿಂದ ಆನ್‌ಲೈನ್‌ನಲ್ಲಿ ನಿಮ್ಮ ಪಿಎಫ್ ಖಾತೆಗಳ ವಿವರವನ್ನು ಕಾಣಬಹುದು. ಪಿಎಫ್ ಹಣ ಹಿಂಪಡೆಯುವ ಕಾರ್ಯವೂ ಸರಳವಾಗುತ್ತದೆ. ಇಪಿಎಫ್‌ಒ ಪೋರ್ಟಲ್‌ನಲ್ಲಿ ನೀವು ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿ ಕೆವೈಸಿಯನ್ನು ಭರ್ತಿ ಮಾಡಿರಬೇಕು.
ಇಪಿಎಫ್‌ಒ ಪೋರ್ಟಲ್‌ನಲ್ಲಿ 'ಅವರ್ ಸರ್ವಿಸಸ್' ಟ್ಯಾಬ್‌ನಲ್ಲಿ 'ಕ್ಲೇಮ್' ಅನ್ನು ಆಯ್ದುಕೊಳ್ಳುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಕ್ಯಾನ್ಸಲ್ಡ್ ಚೆಕ್ ಕೇಳುತ್ತದೆ. ಅದರ ಸ್ಕ್ಯಾನ್ಡ್ ಕಾಪಿಯನ್ನು ಅಪ್‌ಲೋಡ್ ಮಾಡಬಹುದು. ನಿಮ್ಮ ಅರ್ಜಿ ಅನುಮೋದನೆಗೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಪಿಎಫ್ ಹಣ ನೇರವಾಗಿ ಜಮೆಯಾಗುತ್ತದೆ.
ಪಿಎಫ್ ಕಚೇರಿಗೆ ಹೋಗಿ ಪಡೆಯಬಹುದು
ನಿಮ್ಮ ಪಿಎಫ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡದೇ ಹೋಗಿದ್ದು, ಹಣ ವಿತ್‌ಡ್ರಾ ಮಾಡಬೇಕೆಂದಿದ್ದರೆ ಇಪಿಎಫ್‌ಒ ಕಚೇರಿಗೆ ಹೋಗಬೇಕಾಗುತ್ತದೆ. ಆಧಾರ್ ಇಲ್ಲದವರಿಗೆಂದು ಪ್ರತ್ಯೇಕ ಕ್ಲೇಮ್ ಫಾರ್ಮ್ ಸಿಗುತ್ತದೆ. ಪಿಎಫ್ ನಂಬರ್ ಗೊತ್ತಿದ್ದರೆ ಸಾಕು. ಅರ್ಜಿಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಬ್ಯಾಂಕ್‌ನ ಕ್ಯಾನ್ಸಲ್ಡ್ ಚೆಕ್ ಅನ್ನು ಅರ್ಜಿಯೊಂದಿಗೆ ಸೇರಿಸಿ ಕೊಡಬೇಕು.
ಐದು ವರ್ಷಕ್ಕಿಂತ ಕಡಿಮೆ ಅವಧಿಯ ಪಿಎಫ್ ಖಾತೆಯಾದರೆ ಪ್ಯಾನ್ ನಂಬರ್ ಅನ್ನು ನೀಡಬೇಕಾಗುತ್ತದೆ. 15ಜಿ ಮತ್ತು ಫಾರ್ಮ್ 15ಎಚ್ ಅರ್ಜಿಗಳನ್ನು ನೀಡಬೇಕಾಗಬಹುದು.
ನೀವು ಯುಎಎನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿದ್ದರೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಬೇಕೆಂದರೆ ಕಚೇರಿಗೂ ಹೋಗಿ ಅರ್ಜಿ ಸಲ್ಲಿಸಬಹುದು.


Click it and Unblock the Notifications