ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆಯನ್ನು ಮಾರ್ಚ್ 8, 2023ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗಿದೆ. ತಮ್ಮ ಪ್ರೀತಿಪಾತ್ರರಿಗೆ ಶುಭಾಶಯವನ್ನು ನಾವು ಕೋರಿದ್ದೇವೆ. ಮಹಿಳಾ ದಿನಾಚರಣೆಯ ಸಲುವಾಗಿ ಹಲವಾರು ಹಣಕಾಸು ಸಂಸ್ಥೆಗಳು ಮತ್ತು ಹೌಸಿಂಗ್ ಫೈನಾನ್ಸ್ ಸಂಸ್ಥೆಗಳು ಮಹಿಳಾ ಹೂಡಿಕೆದಾರರಿಗೆ ಅಧಿಕ ಬಡ್ಡಿದರವನ್ನು ನೀಡುತ್ತಿದೆ. ಪ್ರಮುಖವಾಗಿ ಫಿಕ್ಸಿಡ್ ಡೆಪಾಸಿಟ್, ಆರ್‌ಡಿ ಮೊದಲಾದ ಯೋಜನೆಗಳಲ್ಲಿ ಮಹಿಳೆಯರಿಗೆ ಅಧಿಕ ಬಡ್ಡಿದರ ನೀಡುತ್ತಿದೆ.
ನಾವು ಸಾಮಾನ್ಯವಾಗಿ ನಾವು ಯಾವುದೇ ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನೀಡುತ್ತೇವೆ. ರಕ್ಷಾ ಬಂಧನ, ದೀಪಾವಳಿ, ನವರಾತ್ರಿ, ಹೋಳಿ, ಯುಗಾದಿ, ರಂಜಾನ್, ಕ್ರಿಸ್‌ಮಸ್ ಹೀಗೆ ಯಾವುದೇ ಹಬ್ಬ ಬಂದಾಗ ನಾವು ನಮ್ಮ ಪ್ರೀತಿಪಾತ್ರರಿಗೆ ಮೌಲ್ಯಯುತವಾದ ಉಡುಗೊರೆಯನ್ನು ನೀಡುತ್ತೇವೆ. ಮಹಿಳಾ ದಿನದಂದು ನೀವು ಗಿಫ್ಟ್ ರೂಪದಲ್ಲಿ ಎಫ್‌ಡಿಯನ್ನು ನೀಡಬಹುದು. ಅಧಿಕ ಬಡ್ಡಿದರ ನೀಡುವ ಎಫ್‌ಡಿಗಳ ಬಗ್ಗೆ ಇಲ್ಲಿದೆ ಮಾಹಿತಿ..

ಮಹಿಳೆಯರಿಗೆ ಎಫ್‌ಡಿ ಮೇಲೆ ಅಧಿಕ ಬಡ್ಡಿದರ ನೀಡುವ ಬ್ಯಾಂಕುಗಳು
ಇಂಡಿಯನ್ ಬ್ಯಾಂಕ್ ಇಂಡ್ ಸೂಪರ್ 400 ಡೇಸ್ ಎಂಬ ವಿಶೇಷ ಎಫ್‌ಡಿಯನ್ನು ಜಾರಿ ಮಾಡಿದೆ. ಇದು 60 ವರ್ಷಕ್ಕಿಂತ ಒಳಗಿನ ಮಹಿಳೆಯರಿಗೆ ಎಫ್‌ಡಿ ಮೇಲೆ ಶೇಕಡ 7.15ರಷ್ಟು ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ, ಅತೀ ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇಕಡ 7.60, ಶೇಕಡ 7.90 ಬಡ್ಡಿದರವನ್ನು ನೀಡುತ್ತದೆ. ಇನ್ನು ಈ 400 ದಿನಗಳ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಮಾನ್ಯ ಜನರಿಗೆ ಶೇಕಡ 7.10ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಪಂಜ್ಬ್ ಆಂಡ್ ಸಿಂಧ್ ಬ್ಯಾಂಕ್ ಪಿಎಬಿ ಗೃಹ ಲಕ್ಷ್ಮೀ ಎಫ್‌ಡಿ ಯೋಜನೆ ಆರಂಭಿಸಿದೆ. ಇದರಲ್ಲಿ 60 ವರ್ಷಕ್ಕಿಂತ ಕೆಳಗಿನ ಮಹಿಳೆಯರಿಗೆ ಆಫ್‌ಲೈನ್ ಹೂಡಿಕೆಗೆ ಶೇಕಡ 6.65ರಷ್ಟು, ಆನ್‌ಲೈನ್ ಹೂಡಿಕೆಗೆ ಶೇಕಡ 6.90ರಷ್ಟು ಬಡ್ಡಿದರವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಮಹಿಳಾ ಹಿರಿಯ ನಾಗರಿಕರಿಗೆ ಆಫ್‌ಲೈನ್ ಹೂಡಿಕೆಗೆ ಶೇಕಡ 7.15ರಷ್ಟು ಮತ್ತು ಆನ್‌ಲೈನ್ ಹೂಡಿಕೆಗೆ ಶೇಕಡ 7.40ರಷ್ಟು ಬಡ್ಡಿದರ ನೀಡುತ್ತದೆ. ಈ ಯೋಜನೆ ಮೆಚ್ಯೂರಿಟಿ ಅವಧಿ 551 ದಿನಗಳು ಆಗಿದೆ.
ಇತರೆ ಬ್ಯಾಂಕುಗಳು ಮಹಿಳಾ ದಿನಾಚರಣೆಯಂದು ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಆರಂಭಿಸಿದಂತೆ ಶ್ರೀ ರಾಮ ಫೈನಾನ್ಸ್ ಸಂಸ್ಥೆ ಕೂಡಾ ಆರಂಭ ಮಾಡಿದೆ. ಈ ಹಣಕಾಸು ಸಂಸ್ಥೆಯಲ್ಲಿ ಪುರುಷ ಹೂಡಿಕೆದಾರರಿಗೆ ಹೋಲಿಕೆ ಮಾಡಿದರೆ ಮಹಿಳಾ ಹೂಡಿಕೆದಾರರಿಗೆ ಅಧಿಕ ಶೇಕಡ 0.10 ಅಧಿಕ ಬಡ್ಡಿದರ ನೀಡಲಾಗುತ್ತದೆ. ಆದರೆ ಮಹಿಳಾ ಹಿರಿಯ ನಾಗರಿಕರು ಈ ಬ್ಯಾಂಕ್‌ನಲ್ಲಿ ಮಾಡುವ ಹೂಡಿಕೆಗೆ ಹೆಚ್ಚುವರಿಯಾಗಿ ಶೇಕಡ 0.60ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್) ಕೇಂದ್ರ ವಿತ್ತ ಸಚಿವೆ ಬಜೆಟ್ 2023ರಂದು ಪರಿಚಯಿಸಿದ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಯಾವುದೇ ವಯೋಮಿತಿಯ ಮಹಿಳೆಯು 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಿ ಶೇಕಡ 7.50ರಷ್ಟು ಬಡ್ಡಿಯನ್ನು ಪಡೆಯಬಹುದು. ಅಂಚೆ ಕಚೇರಿಯ ಮೂಲಕ ಈ ಯೋಜನೆಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications