ಭಾರತದಲ್ಲಿ ಯಾವುದೇ ಸಂಸ್ಥೆಯಾಗಿರಲಿ ಅಥವಾ ಒಬ್ಬ ವ್ಯಕ್ತಿಯಾಗಿರಲಿ ಭಾರತ ಸರ್ಕಾರವು ಆದಾಯದ ಮೇಲೆ ಮತ್ತು ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಭಾರತದಲ್ಲಿನ ಆದಾಯ ತೆರಿಗೆ ಸಂಬಂಧಿತ ನಿಯಮಗಳು ಉಲ್ಲೇಖಿತವಾಗಿರುತ್ತದೆ. ಯಾವುದೇ ವ್ಯಕ್ತಿ ಯಾವ ರೀತಿಯಿಂದಾದರೂ ಆದಾಯ ಗಳಿಸಿದ್ದರೆ, ಆ ಆದಾಯವು ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಬರುತ್ತದೆ. ಆ ವ್ಯಕ್ತಿಯು ಆದಾಯ ತೆರಿಗೆಯನ್ನು ಪಾವತಿಸುವುದು ಕಡ್ಡಾಯವಾಗುತ್ತದೆ.
ಒಂದು ವೇಳೆ ನೀವು ಯಾವುದೇ ಲಾಟರಿಯನ್ನು ಗೆದ್ದರೆ ಅಥವಾ ಯಾವುದೆ ಸ್ಪರ್ಧೆಯಲ್ಲಿ ನಗದು ಬಹುಮಾನವನ್ನು ಗೆದ್ದರೆ, ನೀವು ಗೆದ್ದ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುವುದು ನಿಮ್ಮ ಗಮನದಲ್ಲಿರಬೇಕು. ಲಾಟರಿ ಮೊದಲಾದವುಗಳಿಂದ ಗಳಿಸುವ ಆದಾಯಕ್ಕೆ ಇತರೆ ಆದಾಯ ಮೇಲೆ ವಿಧಿಸುವ ತೆರಿಗೆಗಿಂತ ಅಧಿಕ ತೆರಿಗೆ ಇರುತ್ತದೆ. ಅಂದರೆ ಶೇಕಡ 30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಭಾರತದಲ್ಲೇ ವಾಸವಿರುವವರು ಆಗಲಿ ಅಥವಾ ಅನಿವಾಸಿ ಭಾರತೀಯರಾಗಿರಲಿ ಈ ತೆರಿಗೆಯ ಅನ್ವಯವಾಗುತ್ತದೆ.

ನೀವು ಯಾವ ಸಂಸ್ಥೆಯಿಂದ ಈ ನಗದು ಬಹುಮಾನ ಅಥವಾ ಲಾಟರಿ ಬಹುಮಾನವನ್ನು ಪಡೆಯುತ್ತೀರೋ ಆ ಸಂಸ್ಥೆಯೇ ನಿಮ್ಮ ತೆರಿಗೆಯನ್ನು ಕಡಿತಗೊಳಿಸುತ್ತದೆ. ತೆರಿಗೆ ಎಲ್ಲ ಕಡಿತವಾದ ಬಳಿಕವೇ ನಿಮಗೆ ಮೊತ್ತವು ಲಭ್ಯವಾಗುತ್ತದೆ. 1961ರ ಭಾರತೀಯ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194B ಬಿ ಅಡಿಯಲ್ಲಿ ಲಾಟರಿ, ಕಾರ್ಡ್ ಗೇಮ್, ಟಿವಿ ಪ್ರೋಗ್ರಾಂ, ಕ್ರಾಸ್‌ವರ್ಡ್ ಪಜಲ್, ಇತರೆ ಆಟಗಳ ಮೇಲೆ ಗಳಿಸಿದ ಆದಾಯದ ಮೇಲೆ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ.
ನಿಮ್ಮ ನಗದು ಬಹುಮಾನವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ ಮಾತ್ರ ನಿಮಗೆ ನಗದು ಬಹುಮಾನ ನೀಡುವವರು ಮೊತ್ತದಿಂದ ಶೇಕಡ 30ರಷ್ಟು ತೆರಿಗೆ ಕಡಿತ ಮಾಡಿ ಉಳಿದ ಮೊತ್ತವನ್ನು ನಿಮಗೆ ನೀಡಬೇಕು. ಇನ್ನು ಸರ್‌ಚಾರ್ಜ್ ಮತ್ತು ಸೆಸ್ ಸೇರ್ಪಡೆಯಾಗಿ ನಿಮ್ಮ ನಗದು ಅಥವಾ ಲಾಟರಿ ಬಹುಮಾನದ ಮೇಲೆ ಶೇಕಡ 31.2ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ.
ತೆರಿಗೆ ಪಾವತಿ ಮಾಡುವುದು ಯಾಕೆ ಮುಖ್ಯ?
ಲಾಟರಿ ಮತ್ತು ನಗದು ಬಹುಮಾನದ ಮೇಲೆ ಆದಾಯ ತೆರಿಗೆ ನಿಯಮದಲ್ಲಿ ಅನ್ವಯವಾಗುವಂತೆ ತೆರಿಗೆಯನ್ನು ಪಾವತಿ ಮಾಡುವುದು ಮುಖ್ಯವಾಗುತ್ತದೆ. ದಂಡ ಹಾಗೂ ಇತರೆ ಕಾನೂನು ತೊಂದರೆಗಳನ್ನು ಅನುಭವಿಸುದನ್ನು ನಾವು ತಡೆಯಬೇಕಾದರೆ ನಾವು ಯಾವುದೇ ಆದಾಯಕ್ಕೆ ಅನ್ವಯವಾಗುವ ತೆರಿಗೆಯನ್ನು ಪಾವತಿ ಮಾಡುವುದು ಮುಖ್ಯವಾಗುತ್ತದೆ.
ಅಂತಹ ಲಾಭಗಳು "ಇತರ ಮೂಲಗಳಿಂದ ಆದಾಯ" ಎಂದು ಪರಿಗಣಿಸಲಾಗುತ್ತದೆ ಮತ್ತು ತೆರಿಗೆಗೆ ಒಳಪಟ್ಟಿರುತ್ತವೆ. ಬಾಕಿ ಇರುವ ತೆರಿಗೆಗಳನ್ನು ಪಾವತಿಸದಿದ್ದರೆ ನಿಮ್ಮ ಮೇಲೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ನೀವು ತೆರಿಗೆ ವೃತ್ತಿಪರರಿಂದ ಸಲಹೆಯನ್ನು ಪಡೆಯುವುದು ಉತ್ತಮ. ಇನ್ನು ಪ್ರಸ್ತುತ ಭಾರತದಲ್ಲಿ ಹಲವಾರು ರಾಜ್ಯಗಳಲ್ಲಿ ಲಾಟರಿ ಬ್ಯಾನ್ ಆಗಿದೆ. ಆದರೆ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸರ್ಕಾರದ ಇಲಾಖೆಯೇ ಲಾಟರಿ ನಿರ್ವಹಣೆ ಮಾಡುತ್ತದೆ.
ಸರ್ಕಾರವು ಆದಾಯ ತೆರಿಗೆಯನ್ನು ಸಂಗ್ರಹ ಮಾಡಲು ಒಟ್ಟು ಮೂರು ವಿಧಾನಗಳನ್ನು ಬಳಸುತ್ತದೆ. ಆದಾಯ
ಸ್ವೀಕರಿಸುವವರ ಆದಾಯದಿಂದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಗಳು (ಟಿಡಿಎಸ್), ಮೂಲದಿಂದ ಸಂಗ್ರಹಿಸಲಾದ ತೆರಿಗೆಗಳು (ಟಿಸಿಎಸ್) ಮತ್ತು ಮುಂಗಡ ತೆರಿಗೆ ಮತ್ತು ಸೆಲ್ಫ್ ಅಸೆಸ್‌ಮೆಂಟ್ ಟ್ಯಾಕ್ಸ್ ಈ ಮೂರು ವಿಧಾನಗಳು ಆಗಿದೆ. ಹಣವನ್ನು ಗಳಿಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯವನ್ನು ನಿಖರವಾಗಿ ಲೆಕ್ಕಹಾಕುವುದು ಮತ್ತು ತೆರಿಗೆಯನ್ನು ಪಾವತಿಸುವ ಸಾಂವಿಧಾನಿಕವಾಗಿ ವ್ಯಕ್ತಿಯ ಕರ್ತವ್ಯ ಎಂದು ಪರಿಗಣಿಸಲಾಗುತ್ತದೆ.


Click it and Unblock the Notifications