ವಿಶ್ವದಾದ್ಯಂತ ಹಲವಾರು ತರಕಾರಿಗಳನ್ನು ಜನರು ಸೇವಿಸುತ್ತಾರೆ, ಕೆಲವೊಂದರ ಹೆಸರುಗಳು ನಮಗೆ ತಿಳಿದಿಲ್ಲ. ಇನ್ನು ನಮ್ಮ ದೇಶದಲ್ಲಿರುವ ತರಕಾರಿಗಳು ಕೆಲವು ದೇಶಗಳಲ್ಲಿ ಸೇವನೆ ಮಾಡುವುದಿಲ್ಲ, ಇನ್ನು ಕೆಲವು ದೇಶದಲ್ಲೇ ಬೆಳೆಯುವುದಿಲ್ಲ. ಈ ನಡುವೆ ಹಲವಾರು ತರಕಾರಿಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ.
ಈ ಹಿಂದೆಯೂ ಟೊಮೆಟೊ ಬೆಲೆಯಲ್ಲಿ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ದೇಶದ ಹಲವು ಭಾಗಗಳಲ್ಲಿ ಟೊಮೆಟೊ ಪ್ರತಿ ಕಿಲೋ ಗ್ರಾಂಗೆ 250 ರೂಪಾಯಿವರೆಗೆ ತಲುಪಿದೆ. ಆದರೆ, ಸಾಮಾನ್ಯರು ಅವುಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ವಿಶ್ವದಲ್ಲಿ ಈ ರೀತಿಯೇ ದುಬಾರಿಯಾಗಿರುವ ಐದು ತರಕಾರಿಗಳ ಬಗ್ಗೆ ನಾವು ನಿಮಗೆ ಇಲ್ಲಿ ವಿವರಣೆ ನೀಡಿದ್ದೇವೆ, ಮುಂದೆ ಓದಿ...

ಲಾ ಬೊನೊಟ್ಟೆ ಆಲೂಗಡ್ಡೆ
ಆಲೂಗಡ್ಡೆ ಸಾಮಾನ್ಯವಾಗಿ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಈ ಆಲೂಗಡ್ಡೆಯ ಜಾತಿಗೆ ಸೇರಿದ ಲಾ ಬೊನೊಟ್ಟೆ ಆಲೂಗಡ್ಡೆ ಎಂದು ಕರೆಯಲ್ಪಡುವ ವಿಶಿಷ್ಟ ಪ್ರಕಾರದ ತರಕಾರಿಯ ಬೆಲೆ ಕೆಜಿಗೆ 50,000 ರೂಪಾಯಿಯಿಂದ 90,000 ರೂಪಾಯಿ ಆಗಿದೆ. ಈ ಆಲೂಗಡ್ಡೆ ಜಾತಿಗೆ ಸೇರಿದ ತರಕಾರಿಯು ಅಪರೂಪವಾಗಿದ್ದು, ಫ್ರಾನ್ಸ್‌ನ ಕರಾವಳಿಯಲ್ಲಿ ಮಾತ್ರ ಬೆಳೆಯುತ್ತದೆ. ಇದು ಪ್ರತಿ ವರ್ಷ ಕೇವಲ 10 ದಿನಗಳ ಕಾಲ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎಂಬುವುದನ್ನು ನೀವು ನಂಬಲು ಸಾಧ್ಯವೇ?
ಮತ್ಸುಟೇಕ್ ಮಶ್ರೂಮ್
ಜಪಾನ್‌ನಲ್ಲಿ ಹುಟ್ಟಿಕೊಂಡ ಮತ್ಸುಟೇಕ್ ಮಶ್ರೂಮ್ ಶರತ್ಕಾಲದ ತಿಂಗಳುಗಳಲ್ಲಿ ಮಾತ್ರ ಬೆಳೆಯುತ್ತದೆ. ದುರದೃಷ್ಟವಶಾತ್, ಈ ನಿರ್ದಿಷ್ಟ ಅಣಬೆಯು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಈ ಅಣಬೆಗಳ ವಾರ್ಷಿಕ ಇಳುವರಿ ಈಗ 1000 ಟನ್‌ಗಳಿಗಿಂತ ಕಡಿಮೆಯಾಗಿದೆ. ಪ್ರಸ್ತುತ, ಒಂದು ಪೌಂಡ್‌ಗೆ 75,000 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಅಂದಾಜು ಬೆಲೆ ಇದೆ.
ಹಾಪ್ ಶೂಟ್ಸ್
ಉತ್ತರ ಅಮೆರಿಕಾದಲ್ಲಿ ಹಾಪ್ ಶೂಟ್ಸ್‌ಗಳು ಬೆಳೆಯುತ್ತದೆ. ಹಾಪ್ ಶೂಟ್ಸ್ ಹಸಿರು ಬಣ್ಣವನ್ನು ಹೊಂದಿದ್ದು, ಕೋನ್-ಆಕಾರದ ಹೂವಿನಂತೆ ಇರುತ್ತದೆ. ಪ್ರಾಥಮಿಕವಾಗಿ ಹಾಪ್ ಶೂಟ್ಸ್‌ಗಳನ್ನು ಬಿಯರ್‌ನಂತಹ ಪಾನೀಯಗಳ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ಹಾಪ್ ಶೂಟ್ಸ್ ಅಧಿಕ ಬೇಡಿಕೆಯನ್ನು ಹೊಂದಿದೆ. ಹಾಪ್ ಶೂಟ್ಸ್ ಪ್ರತಿ ಕಿಲೋ ಗ್ರಾಂಗೆ ಅಂದಾಜು 85,000 ರೂಪಾಯಿ ಆಗಿದೆ.
ವಾಸಾಬಿ ರೂಟ್
ವಾಸಾಬಿ ರೂಟ್ ಅತೀ ಹೆಚ್ಚು ಬೇಡಿಕೆಯಿರುವ ತರಕಾರಿಗಳಲ್ಲಿ ಒಂದಾಗಿದ್ದು, ವಿಶ್ವಾದ್ಯಂತ ಇದರ ಕೊರತೆಯು ಕೂಡಾ ಅಧಿಕವಾಗಿದೆ. ರೋಗಗಳಿಗೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಣೆ ಮಾಡುವ ವಾಸಾಬಿ ರೂಟ್ ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತರಕಾರಿಯಾಗಿದೆ. ಇದರ ಮೌಲ್ಯ ಪ್ರತಿ ಕೆಜಿಗೆ 7,000 ಸಾವಿರ ರೂಪಾಯಿಯಿಂದ 8,000 ರೂಪಾಯಿವರೆಗೆ ಇದೆ.
ಯಮಶಿತಾ ಸ್ಪೀನಚ್
ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಅಸಾಫುಮಿ ಯಮಶಿತಾ ಪಾಲಕ್ ಅದರ ಹೇರಳವಾದ ಫೈಬರ್ ಅಂಶಕ್ಕೆ ಹೆಸರುವಾಸಿಯಾಗಿದೆ. ಪ್ರತಿ ಕಿಲೋ ಗ್ರಾಂಗೆ 3,000 ರೂಪಾಯಿ ಬೆಲೆಯನ್ನು ಯಮಶಿತಾ ಸ್ಪೀನಚ್ ಹೊಂದಿದೆ.


Click it and Unblock the Notifications