ಪ್ರತಿ ಹೊಸ ವರ್ಷಕ್ಕೂ ಏನೇನೋ ಸಂಕಲ್ಪಗಳು ಮಾಡುವುದು ಉಂಟು. ಅದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುವುದೋ ತಿಳಿಯದು. ಆದರೆ ಈ ವರ್ಷಕ್ಕೆ ದುಡ್ಡು- ಕಾಸಿಗೆ ಸಂಬಂಧಿಸಿದಂತೆ ಕೆಲವು ತೀರ್ಮಾನಗಳನ್ನು ಮಾಡಿ. ಅವುಗಳನ್ನು ಜಾರಿಗೆ ತರಲು ಏನೆಲ್ಲ ಮಾಡಬೇಕೋ ಮನಸಾರೆ ಮಾಡಿ.
ಈ ಲೇಖನದಲ್ಲಿ ಹೊಸ ವರ್ಷದ ಹಣಕಾಸಿನ ಸಲಹೆಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಜಾರಿಗೆ ತಂದರೆ ಪ್ರಯೋಜನ ಆಗುವುದೋ ಇಲ್ಲವೋ ಎಂಬುದನ್ನು ಮೌಲ್ಯಮಾಪನ ಮಾಡಿ. ಒಪ್ಪಿಗೆಯಾದರೆ ಅನುಸರಿಸಿ. ಹೊಸ ವರ್ಷದ ಮೊದಲ ದಿನದಿಂದಲೇ ಇದನ್ನು ಅನುಸರಿಸಿದರೆ ಉತ್ತಮ. ಆಗಲಿಲ್ಲ ಎಂದಲ್ಲಿ ಯಾವಾಗ ಅನುಸರಿಸಿದರೂ ಉತ್ತಮವೇ.
ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಿ
ಬಹಳ ಮಂದಿಗೆ ಕ್ರೆಡಿಟ್ ಸ್ಕೋರ್ ನ ಪ್ರಾಮುಖ್ಯ ಗೊತ್ತಿಲ್ಲ. ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಂಥದ್ದನ್ನು ಸರಿಯಾದ ಸಮಯಕ್ಕೆ ಮಾಡದಿದ್ದಲ್ಲಿ, ತಪ್ಪಿಸಿದಲ್ಲಿ ಅದು ಹೇಗೆ ಸಮಸ್ಯೆ ತರುತ್ತದೆ ಎಂಬ ತಿಳಿವಳಿಕೆ ಕೊರತೆ ಇದೆ. ಇದರ ಜತೆಗೆ ಯಾವ ಸಂಸ್ಥೆ ಸಾಲ ನೀಡಿದರೂ ಅದಕ್ಕಾಗಿ ಅರ್ಜಿ ಹಾಕಿಕೊಳ್ಳುವುದು, ಸಿಕ್ಕಾಪಟ್ಟೆ ಕ್ರೆಡಿಟ್ ಕಾರ್ಡ್ ಗಳನ್ನು ಇಟ್ಟುಕೊಳ್ಳುವುದು, ಸ್ನೇಹಿತರು- ಸಂಬಂಧಿಕರಿಗೆಲ್ಲ ಅದರ ಮೂಲಕವೇ ಖರೀದಿಗೆ ಅವಕಾಶ ನೀಡುವುದು ಹೀಗೆಲ್ಲ ಮಾಡುತ್ತಾರೆ. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಹೊಡೆತ ಬೀಳುತ್ತದೆ. ಹೀಗೆ ಮಾಡುವುದರಿಂದ ನಿಮಗೇ ಅಗತ್ಯ ಇದ್ದಾಗ ಹಣದ ಸಾಲ ಸಿಗದಿರಬಹುದು ಹಾಗೂ ಬಡ್ಡಿದರ ಹೆಚ್ಚಿಗೆ ಹಾಕಬಹುದು. ಆದ್ದರಿಂದ ಹೊಸ ವರ್ಷದಲ್ಲಿ ಕ್ರೆಡಿಟ್ ಸ್ಕೋರ್ ಸರಿಪಡಿಸಿಕೊಳ್ಳುವ ಸಂಕಲ್ಪ ಮಾಡಿ. ಆರ್ಥಿಕ ಅಶಿಸ್ತನ್ನು ದೂರ ಮಾಡಿಕೊಂಡು, ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಮಾಡಿಕೊಳ್ಳಿ.
ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಸ್ವೈಪ್, ಆನ್ ಲೈನ್ ಪಾವತಿ ವೇಳೆ ಎಚ್ಚರ
ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿರ್ಟ್ ಕಾರ್ಡ್ ಮಾಡದಿರುವುದು ಭದ್ರತೆ- ಸುರಕ್ಷತೆ ಕಾರಣಗಳಿಗೆ ಬಹಳ ಮುಖ್ಯ. ಇನ್ನು ಯಾವುದೇ ಆನ್ ಲೈನ್ ಪಾವತಿ ವೇಳೆ ಕೂಡ ಇದನ್ನು ಗಮನಿಸಿ. ಏಕೆಂದರೆ ಸ್ಕಿಮ್ಮಿಂಗ್ ಮಾಡಬಹುದು. ನೀವು ವಂಚನೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಈಗಲೂ ಸೈಬರ್ ಸೆಕ್ಯೂರಿಟಿ ಪರಿಣಾಮಕಾರಿಯಾಗಿ ಇಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಬ್ಯಾಂಕ್ ವೊಂದರ ಹೆಸರು ಹೇಳಿಕೊಂಡು, ಪಂಜಾಬ್ ನ ಮುಖ್ಯಮಂತ್ರಿಗಳ ಪತ್ನಿಯನ್ನೇ ವಂಚಿಸಲಾಗಿತ್ತು. ಅದೃಷ್ಟವಶಾತ್ ಆ ಹಣವನ್ನು ವಾಪಸ್ ಕೊಡಿಸುವಲ್ಲಿ ಪೊಲೀಸರು ಸಫಲರಾದರು. ಆದರೆ ಹಣ ಕಳೆದುಕೊಂಡವರ ಪಟ್ಟಿ ದೊಡ್ಡದಿದೆ. ಆದ್ದರಿಂದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಪಾವತಿ ಹಾಗೂ ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ನಿರ್ಧರಿಸಿ.
ಮೊದಲಿಗೆ ಉಳಿತಾಯ ಮಾಡಿ, ಉಳಿದಿದ್ದರಲ್ಲಿ ಖರ್ಚು ಮಾಡಿ
ಆರ್.ಡಿ., ಪಿಪಿಎಫ್, ಮ್ಯೂಚುವಲ್ ಫಂಡ್, ಈಕ್ವಿಟಿ ಷೇರು, ಗೋಲ್ಡ್ ಇಟಿಎಫ್, ಇನ್ಷೂರೆನ್ಸ್ ಹೀಗೆ ವಿವಿಧ ಬಗೆಯ ಹೂಡಿಕೆಗೆ ಪೋರ್ಟ್ ಫೋಲಿಯೋ ಮಾಡಿ, ಪ್ರತಿ ತಿಂಗಳೂ ಹಣವನ್ನು ಹೂಡಿಕೆ ಮಾಡುತ್ತಾ ಬನ್ನಿ. ಅಲ್ಪಾವಧಿ ಅಗತ್ಯಗಳಿಗೆ (ಮೂರರಿಂದ ಐದು ವರ್ಷದ ಅವಧಿಗೆ), ದೀರ್ಘಾವಧಿ ಅಗತ್ಯಗಳಿಗೆ (ಹದಿನೈದರಿಂದ ಇಪ್ಪತ್ತು ವರ್ಷದ ಅವಧಿಗೆ) ಹಾಗೂ ನಿವೃತ್ತಿ ನಂತರದ ಜೀವನಕ್ಕೆ ಎಂದು ವಿಭಾಗ ಮಾಡಿಕೊಂಡು, ಹಣಕಾಸಿನ ಉಳಿತಾಯದ ಯೋಜನೆ ಮಾಡಿಕೊಳ್ಳಿ. ಆಗ ವಿವಿಧ ಅಗತ್ಯಗಳಿಗೆ ಅವಲಂಬನೆ ಇರುವುದಿಲ್ಲ. ಜೀವನದ ಯಶಸ್ಸು ಶೇಕಡಾ ತೊಂಬತ್ತು ಭಾಗ ಪ್ಲ್ಯಾನಿಂಗ್ ಮೇಲೆ ನಿಂತಿರುತ್ತದೆ. ಇನ್ನು ಹತ್ತು ಭಾಗ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರಲ್ಲಿ ಇರುತ್ತದೆ. ಅನುಭವಿಗಳ ಮಾತು ಅಥವಾ ಸಲಹೆ ಏನು ಗೊತ್ತಾ? "ನಿಮ್ಮ ಕೈಗೆ ಬಂದ ಸಂಪಾದನೆಯಲ್ಲಿ ಮೊದಲಿಗೆ ಉಳಿತಾಯ ಮಾಡಿ, ಆ ನಂತರ ಉಳಿದಿದ್ದರಲ್ಲಿ ಖರ್ಚು ಮಾಡಿ."
ಮನರಂಜನೆ, ಸಿನಿಮಾ, ಹೋಟೆಲ್, ಪ್ರವಾಸಕ್ಕೂ ಬಜೆಟ್ ಇರಲಿ
ದುಡಿದದ್ದು ಎಲ್ಲ ಉಳಿತಾಯ ಅಥವಾ ಮನೆಗೆ ಅಂತಲೇ ಖರ್ಚು ಮಾಡಲು ಸಾಧ್ಯವಾ? ಆದ್ದರಿಂದ ಬಜೆಟ್ ಹಾಕಿಕೊಳ್ಳಿ. ಪ್ರತಿ ತಿಂಗಳು ಇಷ್ಟು ಹಣ ಮನರಂಜನೆಗಾಗಿ, ಹೋಟೆಲ್ ಗೆ, ಪ್ರವಾಸಕ್ಕೆ ಹೀಗೆ ಒಂದು ಪಟ್ಟಿ ಮಾಡಿಟ್ಟುಕೊಳ್ಳಿ. ಪ್ರವಾಸಕ್ಕೆ ಹೊರಡುವ ತಿಂಗಳು ಯಾವುದು ಎಂಬುದನ್ನು ಬಹಳ ಮುಂಚಿತವಾಗಿಯೇ ನಿರ್ಧರಿಸಿ. ವಿಮಾನ, ಹೋಟೆಲ್, ರೈಲು ಅಥವಾ ಬಸ್ ಬುಕ್ಕಿಂಗ್ ಅಥವಾ ಪ್ಯಾಕೇಜ್ ಟೂರ್ ಗಳಾದರೆ ಆರು ತಿಂಗಳು ಮುಂಚಿತವಾಗಿಯೇ ಕಾಯ್ದಿರಿಸಿ. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ ಮೇಲೆ ಬರುವ ಯಾವ ರಿವಾರ್ಡ್ ಪಾಯಿಂಟ್ ಅನ್ನು ವ್ಯರ್ಥ ಮಾಡದಂತೆ ಬಳಸಿಕೊಳ್ಳಿ. ಹೀಗೆಲ್ಲ ಪ್ಲ್ಯಾನ್ ಮಾಡಿದಂತೆ ಖರ್ಚು ಮಾಡಲು, ಎಂಜಾಯ್ ಮಾಡಲು ಸಾಧ್ಯವಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಈ ಹೊಸ ವರ್ಷದಲ್ಲಿ ಇಂಥದ್ದೊಂದು ಪ್ರಯತ್ನ ಮಾಡಿ. ಸರಿ ಎನಿಸಿದರೆ ಹಾಗೇ ಮುಂದುವರಿಸಿ.


Click it and Unblock the Notifications