ಕರ್ನಾಟಕ ರಾಜ್ಯ ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿದೆ. ಅದರಂತೆ ಈಗ ಎಲ್ಲ ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಕೊನೆಯದಾಗಿ ಜಾರಿ ಮಾಡಲಾದ ಯೋಜನೆ ಯುವನಿಧಿ ಯೋಜನೆಯಾಗಿದೆ.
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಕೂಡಾ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಪ್ರತಿ ತಿಂಗಳು ಸ್ವಯಂಘೋಷಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಕನ್ನಡ ದುನಿಯಾ ವರದಿ ಮಾಡಿದೆ.

ಏನಿದು ದಾಖಲೆ?
ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆ ಯುವ ನಿಧಿ ಯೋಜನೆಯಾಗಿದೆ. ಇದರಿಂದಾಗಿಯೇ ಯುವನಿಧಿ ಯೋಜನೆಯ ಫಲಾನುಭವಿಗಳು ತಾವು ನಿರುದ್ಯೋಗಿಗಳು ಎಂದು ಖಚಿತಪಡಿಸುವುದು ಅತೀ ಮುಖ್ಯವಾಗುತ್ತದೆ.
ಹೌದು, ನೀವು ಪ್ರತಿ ತಿಂಗಳು ಈ ಯೋಜನೆಯ ಮೊತ್ತವನ್ನು ಪಡೆಯಬೇಕಾದರೆ ಪ್ರತಿ ತಿಂಗಳು ಕೂಡಾ ತಮಗೆ ಹಣ ಲಭ್ಯವಾಗಿಲ್ಲ ಎಂದು ತಿಳಿಸಬೇಕಾಗುತ್ತದೆ. ಹೌದು, ನಮಗೆ ಉದ್ಯೋಗ ಸಿಕ್ಕಿಲ್ಲ ಅಥವಾ ನಾವು ಉನ್ನತ ಶಿಕ್ಷಣವನ್ನು ಮಾಡುತ್ತಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಬೇಕು.
ನೀವು ಪ್ರತಿ ತಿಂಗಳು ಕೂಡಾ ಈ ದಾಖಲೆಗಳನ್ನು ಅಪ್‌ಲೋಡ್ ಮಾಡದಿದ್ದರೆ ಯುವನಿಧಿ ಹಣ ಖಾತೆಗೆ ಮೊತ್ತವು ಜಮೆ ಆಗುವುದಿಲ್ಲ. ಆದ್ದರಿಂದಾಗಿ ನೀವು ಪ್ರತಿ ತಿಂಗಳು ಕೂಡಾ ಈ ದಾಖಲೆಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
2023 ರಲ್ಲಿ ಪದವಿ/ ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ/ಖಾಸಗಿ/ಸ್ವಯಂ ಉದ್ಯೋಗ ಪಡೆಯದವರು ಮತ್ತು ಉನ್ನತ ವಿದ್ಯಾಭ್ಯಾಸ ಮಾಡದವರು ಕರ್ನಾಟಕ ಒನ್, ಗ್ರಾಮಒನ್, ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ https://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ "ಯುವನಿಧಿ" ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ.ಗಳು ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ.ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ.
ನೀವು ಅರ್ಹರೆ ತಿಳಿಯಿರಿ
* ಅರ್ಜಿದಾರರು ಕರ್ನಾಟಕದ ನಿವಾಸಿಗಳು ಆಗಿರಬೇಕು.
* ಡಿಪ್ಲೋಮಾ ಅಥವಾ ಪದವಿ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳಬೇಕು.
* ಇಂತಹ ಇತರೆ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
* ಇದರ ಅಡಿಯಲ್ಲಿ 2023 ರಲ್ಲಿ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 12 ರಂದು ಶಿವಮೊಗ್ಗದಲ್ಲಿ ಆರಂಭ ಮಾಡಲಾಗಿದೆ. ಯುವನಿಧಿ ಯೋಜನೆಗೆ ಅಂದಾಜು 5.29 ಲಕ್ಷ ಪದವೀಧರರು ಮತ್ತು ಡಿಪ್ಲೋಮಾದಾರರು ಅರ್ಹರಾಗಿದ್ದಾರೆ.


Click it and Unblock the Notifications