ಸರ್ಕಾರಿ ಉದ್ಯೋಗ ಎಂದರೆ ಯಾರಿಗೆ ಬೇಡ ಹೇಳಿ?. ಒಂದು ಸರ್ಕಾರಿ ಉದ್ಯೋಗ ಸಿಕ್ಕರೆ ನಮ್ಮ ಲೈಫ್ ಸೆಟಲ್ ಅಂದುಕೊಳ್ಳುವವರು ಇದ್ದಾರೆ. ಈ ನಡುವೆ ಸರ್ಕಾರದ ಒಂದಲ್ಲ ಎರಡಲ್ಲ 2.55 ಲಕ್ಷ ದ್ದೆಗಳು ಖಾಲಿ ಇವೆ. ಅದರಲ್ಲೂ ಅರ್ಧದಷ್ಟು ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಂತಹ ಅತೀ ಮುಖ್ಯವಾದ ಕ್ಷೇತ್ರದಲ್ಲಿ ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಉಳಿದಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಡುವೆ ಸರ್ಕಾರವು ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರುವ ನಿರೀಕ್ಷೆಯಿದೆ. ಹಾಗೆಯೇ ಸರ್ಕಾರ ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಬೇಕು ಮತ್ತು ಕೆಲವು ಹುದ್ದೆಗಳನ್ನು ಹೊರಗುತ್ತಿಗೆ ನೀಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಹುದ್ದೆಗಳು ಈಗಾಗಲೇ ಖಾಲಿಯಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಹುದ್ದೆ ಖಾಲಿ?
ಮಾಹಿತಿಯ ಪ್ರಕಾರ, 2.55 ಲಕ್ಷ ಖಾಲಿ ಹುದ್ದೆಗಳಲ್ಲಿ, 75,000 ಕ್ಕಿಂತ ಹೆಚ್ಚು ಶಿಕ್ಷಣ ಇಲಾಖೆಯಲ್ಲಿ (ಉನ್ನತ ಮತ್ತು ಶಾಲಾ ಶಿಕ್ಷಣ) ಖಾಲಿಯಿದೆ. ಅಂದರೆ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಗಳ ಕೊರತೆಯಿದೆ ಎಂಬುವುದು ಈ ಡೇಟಾ ಮೂಲಕ ಸ್ಪಷ್ಟವಾಗುತ್ತದೆ.
ನಮ್ಮ ಆರೋಗ್ಯ ಹಾಳಾದಾಗ ಅತೀ ಕಡಿಮೆ ಅಥವಾ ಉಚಿತವಾಗಿ ಚಿಕಿತ್ಸೆ ಲಭ್ಯವಾಗುವುದು ಸರ್ಕಾರಿ ಆಸ್ಪತ್ರೆಗಳಲ್ಲಿ. ಆದರೆ ಡೇಟಾ ಪ್ರಕಾರ ಆರೋಗ್ಯ ಇಲಾಖೆಯಲ್ಲಿ 35,196 ಹುದ್ದೆಗಳು ಭರ್ತಿಯಾಗದೆ ಉಳಿದಿದೆ. ಇನ್ನು ಗೃಹ ಇಲಾಖೆಯಲ್ಲಿ 22,069 ಹುದ್ದೆಗಳು ಖಾಲಿಯಿದೆ.
ಒಟ್ಟಾರೆಯಾಗಿ ನೋಡಿದಾಗ ಹೆಚ್ಚಾಗಿ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆ ಖಾಲಿಯಿದೆ. ಇದಲ್ಲದೇ ಕಂದಾಯ, ಆರ್‌ಡಿಪಿಆರ್, ಪಶುಸಂಗೋಪನೆ, ಹಣಕಾಸು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ತಲಾ ಸುಮಾರು 10 ಸಾವಿರ ಹುದ್ದೆಗಳು ಖಾಲಿ ಇವೆ.
ಸರ್ಕಾರ ಹುದ್ದೆ ಭರ್ತಿ ಮಾಡುತ್ತಾ?
ಮುಂದಿನ ಕೆಲವು ವರ್ಷಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 2.55 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಇನ್ನಷ್ಟು ಸವಾಲಿನದ್ದಾಗಿದೆ.
ಈಗಾಗಲೇ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವಾಗ ಈಗ ಖಾಲಿ ಹುದ್ದೆ ಭರ್ತಿ ಮಾಡುವುದು ಮತ್ತು ಆಯೋಗ ಅನುಷ್ಠಾನ ದೊಡ್ಡ ಆರ್ಥಿಕ ಸವಾಲು ಎಂದರೆ ತಪ್ಪಾಗಲಾರದು. ಮಂಜೂರಾದ ಹುದ್ದೆಗಳು 7.2 ಲಕ್ಷ ಆಗಿದ್ದು, ಅದಾದ ಬಳಿಕವೂ 2.55 ಲಕ್ಷ ಹುದ್ದೆಗಳು ಖಾಲಿಯಿದೆ. ಇನ್ನು ನಿವೃತ್ತಿಯಾದಾಗ ಈ ಖಾಲಿ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ.
ರಾಜ್ಯ ಸರಕಾರವು ವಾರ್ಷಿಕ ಸರಾಸರಿ 65 ಸಾವಿರ ಕೋಟಿ ರೂಪಾಯಿಗಳನ್ನು ವೇತನಕ್ಕಾಗಿ ವ್ಯಯಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲ ವೇತನವನ್ನು ಶೇಕಡ 40ರಷ್ಟು ಹೆಚ್ಚಿಸಬೇಕೆಂಬ ಬೇಡಿಕೆ ಇದ್ದು, ಏಳನೇ ವೇತನ ಆಯೋಗದ ಮುಂದಿದೆ. ಸಮಿತಿಯು ಶಿಫಾರಸು ಮಾಡಿದರೆ, ಸರ್ಕಾರಕ್ಕೆ ಇನ್ನೂ 12,000 ಕೋಟಿ ರೂಪಾಯಿ ಬೇಕಾಗಬಹುದು. ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಹಣಕಾಸಿನ ಹೊರೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥರೂ ಆದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾತನಾಡಿ, "ಗ್ರೂಪ್ ಡಿ ಸಿಬ್ಬಂದಿ ಮತ್ತು ಚಾಲಕರ ಹಲವು ಹುದ್ದೆಗಳನ್ನು ಹೊರಗುತ್ತಿಗೆ ನೀಡಿದರೆ ಸ್ವಲ್ಪ ಮಟ್ಟಿಗೆ ಆರ್ಥಿಕ ಹೊರೆ ತಗ್ಗಿಸಬಹುದು. ಅಲ್ಲದೆ, ಹೆಚ್ಚಿನ ಕೆಲಸಗಳು ಕಂಪ್ಯೂಟರೈಸ್ ಆಗಿರುವುದರಿಂದ ಮೊದಲ ವಿಭಾಗದ ಸಹಾಯಕ ಮತ್ತು ಎರಡನೇ ವಿಭಾಗದ ಸಹಾಯಕರಂತಹ ಕೆಲವು ವಿಭಾಗಗಳಲ್ಲಿನ ಪೋಸ್ಟ್‌ಗಳನ್ನು ಮರುಹಂಚಿಕೆ ಮಾಡಬಹುದು," ಎಂದು ಹೇಳುತ್ತಾರೆ.


Click it and Unblock the Notifications