
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಜಾಗತಿಕ ಉದ್ಯಮಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಕೆಲ ರೈತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಶುರು ಮಾಡಿದರು. ಪೊಲೀಸರು ಅವರನ್ನು ಬಂಧಿಸಿ ಹೊರಗಡೆ ಕರೆದುಕೊಂಡು ಹೋದರು. ಕರ್ನಾಟಕದ ಅಭಿವೃದ್ಧಿಗೆ ವಿರೋಧವಾಗಿರುವ ಮತ್ತು ರೈತರ ಹಿತಾಸಕ್ತಿಗೆ ಮಾರಕವಾಗಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯಲು ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಬುಧವಾರವೇ ಹೇಳಿದ್ದರು.
ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ರೈತರನ್ನು ತಡೆಗಟ್ಟಲು ಪೊಲೀಸರು ಹರಸಾಹಸಪಡಬೇಕಾಯಿತು. ಬಂಡವಾಳ ಹೂಡಿಕೆ ಸಮಾವೇಶದ ರೂವಾರಿ ಉದ್ಯಮ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧ ಮತ್ತು ಸರಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತ ಮೈದಾನಕ್ಕೆ ರೈತರು ದಾಳಿ ಇಟ್ಟರು. ಪೊಲೀಸರು ತಡೆಯೊಡ್ಡಿದ್ದರಿಂದ ರೈತರು ರಸ್ತೆಗೆ ನುಗ್ಗಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ವಾಹನ ದಟ್ಟಣೆಯುಂಟಾಗಿದೆ.
ಹೂಡಿಕೆ ಸಮಾವೇಶದಲ್ಲಿ ಸುಮಾರು 1 ಲಕ್ಷ ಕೋಟಿ ರು. ಹೂಡಿಕೆಯಾಗುವ ಸಂಭವನೀಯತೆಯಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಿಂಹಪಾಲು ದೊರೆಯುವ ಲಕ್ಷಣಗಳೂ ಇವೆ. ವಿವಿಧ ಉದ್ಯಮಿಗಳಿಗಾಗಿ ದೇವನಹಳ್ಳಿಯ ಬಳಿ 10 ಸಾವಿರ ಎಕರೆಯಷ್ಟು ರೈತರಿಗೆ ಸೇರಿದ ಜಮೀನನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದೆ. ಸುಮಾರು 45ಕ್ಕೂ ಹೆಚ್ಚಿನ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ.
ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲು ಜಪಾನ್, ಮೆಕ್ಸಿಕೋ, ಇಟಲಿ ಮತ್ತಿತರ ದೇಶಗಳಿಂದ ನೂರಾರು ಉದ್ಯಮಿಗಳು ಬಂದಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿ ಉದ್ಯಮ ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಈ ಸಮಾವೇಶವನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಜೂ.6ರಂದು ಉದ್ಘಾಟಿಸಿದರು.
ರೈತರು ಹೇಳುವುದೇನೆಂದರೆ, ಹಿಂದೆ ಮಾಡಲಾಗಿದ್ದ ವಿಶ್ವ ಬಂಡವಾಳ ಹೂಡಿಕ ಸಮಾವೇಶದಲ್ಲಿ ಸಾವಿರಾರು ಎಕರೆಯಷ್ಟು ರೈತರ ಜಮೀನನ್ನು ಸರಕಾರ ವಶಪಡಿಸಿಕೊಂಡಿತ್ತು. ರೈತರ ಮಕ್ಕಳಿಗೆ ಉದ್ಯೋಗ ನೀಡುವುದಾಗಿ ಕಳೆದ ಬಾರಿ ವಾಗ್ದಾನ ನೀಡಲಾಗಿತ್ತು. ಆದರೆ, ರೈತರ ಅಭಿವೃದ್ಧಿಗಾಗಿ ನೀಡಲಾಗಿದ್ದ ಅನೇಕ ಆಶ್ವಾಸನೆಗಳನ್ನು ಸರಕಾರ ಇಂದಿಗೂ ಈಡೇರಿಸಿಲ್ಲ. ಸರಕಾರ ಈಗಲೂ ಪೊಳ್ಳು ಭರವಸೆ ನೀಡುತ್ತಿದ್ದು ಸಮಾವೇಶ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭದ್ರಾವತಿಯ ಕಬ್ಬಿಣ ಕಾರ್ಖಾನೆ, ಪೇಪರ್ ಕಾರ್ಖಾನೆ ಮತ್ತು ಮೈಸೂರಿನ ಸಕ್ಕರೆ ಕಾರ್ಖಾನೆ ಎಲ್ಲವೂ ಮುಚ್ಚಿ ಹೋಗಿವೆ. ಕೃಷಿ ಭೂಮಿ ಕೈಗಾರಿಕೆಗಳಿಗೆ ಬಳಸಿಕೊಳ್ಳಬಾರದು. ಸರಕಾರ ಜನರ, ಅದರಲ್ಲೂ ರೈತರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ರೈತರು ನೀಡುವ ಜಮೀನನ್ನು ಬೇಕಾಬಿಟ್ಟಿ ಬಳಸಿಕೊಳ್ಳಲಾಗುತ್ತಿದೆ. ರೈತರಿಗೆ ಸೂಕ್ತವಾದ ಪರಿಹಾರವನ್ನೂ ದೊರಕಿಸಿಕೊಡಲು ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರೈತರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications