ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಬಡ್ಡಿ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿದೆ. ದಶಕದ ಅತಿ ಕಡಿಮೆ ವೃದ್ಧಿ ದರ ಹೊಂದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಕಳೆದ ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಲಾಗಿದೆ.
ಆರ್‌ಬಿಐ ಗವರ್ನರ್ ಡಿ. ಸುಬ್ಬರಾವ್ ಅವರು ಮಂಗಳವಾರ ತೃತೀಯ ತ್ತೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದರು. ಆರ್‌ಬಿಐನ ಕಿರು ಅವಧಿಯ ಸಾಲ ಬಡ್ಡಿ ದರವನ್ನು ಶೇ. 0.25 ರಷ್ಟು ಕಡಿತಗೊಳಿಸಲಾಗಿದ್ದು ಅದೀಗ ಶೇಕಡಾ 7.75ಕ್ಕೆ ನಿಗದಿಗೊಂಡಿದೆ.
ಇದೇ ವೇಳೆ ನಗದು ಮೀಸಲು ಅನುಪಾತ, ಅಂದರೆ ಸಿಆರ್‌ಆರ್ ಅನ್ನು ಕೂಡ ಶೇ. 0.25 ರಷ್ಟು ಕಡಿತಗೊಳಿಸಲಾಗಿದ್ದು ಅದನ್ನು ಶೇ.4ಕ್ಕೆ ನಿಗದಿಗೊಳಿಸಲಾಗಿದೆ.
ಬ್ಯಾಂಕ್‌ಗಳು ತಮಗೆ ಹಣದ ಅಗತ್ಯ ಬಂದಾಗ ಆರ್ ಬಿಐನಿಂದ ನೆರವು ಕೇಳಬಹುದು. ಇಂತಹ ಸಮಯದಲ್ಲಿ ಬ್ಯಾಂಕ್‌ಗಳ ನೆರವಿಗೆ ಧಾವಿಸುವ ಕೇಂದ್ರ ಬ್ಯಾಂಕ್ ತಾನು ನೀಡುವ ಹಣಕ್ಕೆ ಬಡ್ಡಿ ವಿಧಿಸುತ್ತದೆ. ಅದೇ ರೆಪೊ ದರ. ಈ ದರವನ್ನು ಕಡಿತಗೊಳಿಸಿರುವುದರಿಂದ ಅದರ ಲಾಭ ಗ್ರಾಹಕರಿಗೆ ತಲುಪಲಿದೆ.
ಇದು ಗೃಹಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಲಿದೆ. ಕೆಂದ್ರ ಬ್ಯಾಂಕ್‌ನ ಈ ಕ್ರಮ ಮನೆ ಕಟ್ಟುವವರಿಗೆ ವರದಾನವಾಗಲಿದ್ದು, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಲಭ್ಯವಾಗಲಿದೆ.
ಬಡ್ಡಿ ದರವನ್ನು ಎಷ್ಟು ಇಳಿಸಬೇಕೆನ್ನುವುದನ್ನು ಕೇಂದ್ರ ವಿತ್ತ ಇಲಾಖೆ ನಿರ್ಧರಿಸಿಲ್ಲ, ಅದು ಆಯಾಯ ಬ್ಯಾಂಕ್ ಗಳಿಗೆ ಬಿಟ್ಟ ವಿಚಾರ ಎಂದು ಎ.ಎಲ್.ಸಿ.ಒ (Asset Liability Committee) ತಿಳಿಸಿದೆ.
ಬ್ಯಾಂಕ್‌ಗಳು ಆರ್ ಬಿಐನಲ್ಲಿ ಇಡಬೇಕಾಗಿರುವ ಇಡುಗಂಟಿನ ಪ್ರಮಾಣ ಅಂದರೆ ಸಿಆರ್‌ಆರ್ ಅನ್ನೂ ಕಡಿತಗೊಳಿಸಿದೆ. ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 18 ಸಾವಿರ ಕೋಟಿ ಹಣವನ್ನು ತುಂಬಲಿದ್ದು, ಬ್ಯಾಂಕ್ ಗಳ ವಹಿವಾಹಿಟಿಗೆ ಇನ್ನಷ್ಟು ಚೇತರಿಕೆ ನೀಡಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ನೀತಿಗೆ ಆರ್‌ಬಿಐನ ಈ ಕ್ರಮ ನೆರವಾಗಲಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ
ಕರ್ನಾಟಕ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಶನ್ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳು ಬಡ್ಡಿದರ ಇಳಿಕೆ ಬಗ್ಗೆ ಚಿಂತನೆ ನಡೆಸಿರುವ ಸುದ್ದಿ ಬಂದಿದೆ. ಆರ್ ಬಿಐ ಬಡ್ಡಿದರ ಇಳಿಕೆ ಪಂಚ ಪರಿಣಾಮಗಳು ಇಲ್ಲಿವೆ
ಕಡಿಮೆ ಬಡ್ಡಿದರದಲ್ಲಿ ಗೃಹಸಾಲ
ಆರ್ ಬಿಐ ರೆಪೋ ದರ (ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ) ಇದು 25 ಮುಲಾಂಶಗಳು ಕಡಿಮೆಯಾಗಿರುವುದರಿಂದ ಬ್ಯಾಂಕ್ ಸಾಲಗಳ ಬಡ್ಡಿದರ ಕಡಿಮೆಯಾಗಲಿದೆ. ಶಿಕ್ಷಣ, ವೈಯಕ್ತಿಕ ಸಾಲ,ವಾಹನ ಮತ್ತು ಗೃಹಸಾಲದ ಬಡ್ಡಿದರವನ್ನು ಬ್ಯಾಂಕ್ ಗಳು ಕಡಿತಗೊಳಿಸುವ ಸಾಧ್ಯತೆ ಇದೆ.
ಹೂಡಿಕೆ ದರ ಇಳಿಕೆ
ನಿಶ್ಚಿತ ಠೇವಣಿ(fixed deposit) ಮುಂತಾದ ದೀರ್ಘಕಾಲಿಕ ಹೂಡಿಕೆಯಿಂದ ಆದಾಯ ನಿರೀಕ್ಷಿಸುವ ಗ್ರಾಹಕರಿಗೆ ಕಹಿ ಸುದ್ದಿ ಕಾದಿದೆ. ನಿಖರ ಠೇವಣಿ ಮೇಲಿನ ಬಡ್ಡಿದರ ಇಳಿಕೆ ಮಾಡುವುದು ಖಾತ್ರಿಯಾಗಿದೆ. ಹೀಗಾಗಿ ಹೆಚ್ಚಿನ ರಿಟರ್ನ್ ನಿರೀಕ್ಷೆ ಇಟ್ಟುಕೊಂಡರೆ ನಿರಾಶೆ ಕಾದಿದೆ.
GDP ದರದಲ್ಲಿ ಬದಲಾವಣೆ
ಆರ್‌ಬಿಐ, ಪ್ರಸಕ್ತ ವರ್ಷಕ್ಕೆ ನಿರೀಕ್ಷಿತ ವೃದ್ಧಿ ದರ(GDP)ವನ್ನು 5.8ರಿಂದ 5.5 ಕ್ಕೆ ಇಳಿಸಿದೆ. ಕೆಲಮುಖವಾಗಿ ದರವಿದ್ದರೂ ಮಾರ್ಚ್ 31,2013ಕ್ಕೆ WPI ಹಣದುಬ್ಬರ ಪ್ರಮಾಣವನ್ನು ಶೇ 7.5 ರಿಂದ ಶೇ 6.8ಕ್ಕೆ ಬರುವ ಅಂದಾಜು ಹಾಕಲಾಗಿದೆ.
ಹೂಡಿಕೆಗೆ ಸಕಾಲ
ಬ್ಯಾಂಕ್ ಗಳು, ಆರ್ಥಿಕ ಸಂಸ್ಥೆಗಳು ನಿಖರ ಠೇವಣಿಯ ಹೂಡಿಕೆ ದರ ಇಳಿಕೆ ಮಾಡುವ ಮೊದಲು ದೀರ್ಘಾವಧಿಗೆ ಹಣ ಹೂಡಿಕೆ ಮಾಡುವುದು ಒಳ್ಳೆಯದು. ಈಗಲೇ ಹೂಡಿಕೆ ಮಾಡಿದರೆ ಪ್ರಸ್ತುತ ಬಡ್ಡಿದರದಂತೆ ರಿಟರ್ನ್ಸ್ ಪಡೆಯಲು ಸಾಧ್ಯ.
ಅವಳಿ ವಿತ್ತೀಯ ಕೊರತೆ ಆತಂಕ
ವಿಸ್ತೃತ ವಿತ್ತೀಯ ಕೊರತೆ ಹಾಗೂ ನಿಧಾನಗತಿಯ ಬೆಳವಣಿಗೆಯ ಅಂಶಗಳನ್ನು ಪ್ರಸ್ತುತ ಖಾತೆ ಕೊರತೆ (current account deficit) ಅಂತರ ಐತಿಹಾಸಿಕ ಮಟ್ಟದಲ್ಲಿ ಏರಿಕೆ ಕಾಣಲಿದ್ದು, ಆರ್ಥಿಕತೆಯನ್ನು ಅವಳಿ ವಿತ್ತೀಯ ಕೊರತೆಗೆ ದೂಡಲಿದೆ ಎಂಬ ಆತಂಕ ಆರ್ ಬಿಐ ಗವರ್ನರ್ ಸುಬ್ಬರಾವ್ ಅವರು ವ್ಯಕ್ತಪಡಿಸಿದ್ದಾರೆ.


Click it and Unblock the Notifications