ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ರಘುರಾಮ್ ಜಿ ರಾಜನ್ ಆರ್ ಬಿಐನ ನೂತನ ಗವರ್ನರ್ ಆಗಿ ನೇಮಕವಾಗಿದ್ದಾರೆ. 50 ವರ್ಷದ ರಾಜನ್ ಡಿ. ಸುಬ್ಬರಾವ್ ನಂತರ ಆರ್ ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೆ.4ಕ್ಕೆ ಸುಬ್ಬರಾವ್ ಅವಧಿ ಮುಗಿಯಲಿದ್ದು, ಮುಂದಿನ 3 ವರ್ಷಗಳ ಕಾಲ ರಾಜನ್ ಆರ್ ಬಿಐ ಚುಕ್ಕಾಣಿ ಹಿಡಿಯಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜನ್ ಹೆಸರಿಗೆ ಒಪ್ಪಿಗೆ ಸೂಚಿಸಿದ ಬಳಿಕ ಈ ಘೋಷಣೆ ಹೊರಡಿಸಲಾಗಿದೆ. 2008ರ ಆರ್ಥಿಕ ಹಿಂಜರಿತದ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದ ರಾಜನ್ ಅವರು, ಐಎಂಎಫ್‌ನಲ್ಲೂ ಮುಖ್ಯ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದ್ದರು.
ರಘುರಾಮ್ ರಾಜನ್ ಅವರ ಮುಂದಿರುವ ಸವಾಲುಗಳೇನು? ರುಪಾಯಿ ಅಪಮೌಲ್ಯ, ಆರ್ಥಿಕ ಪ್ರಗತಿ ಕುಂಠಿತ, ಸಿಪಿಐ ದುಬ್ಬರ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಜನ್ ಒಬ್ಬರೇ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಆರ್ ಬಿಐ ಗರ್ವನರ್ ಆಗಿ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಪೂರಕ ವಾತಾವರಣ ಸೃಷ್ಟಿಸಿ ಪರಿಸ್ಥಿತಿ ಸುಧಾರಣೆಗೆ ಮುಂದಾಗಬಹುದು. ರಘುರಾಮ್ ರಾಜನ್ ಅವರ ಮುಂದಿನ ಐದು ಪ್ರಮುಖ ಸವಾಲುಗಳೇನು? ಇಲ್ಲಿದೆ ನೋಡಿ
ಪ್ರಗತಿ vs ಹಣ ದುಬ್ಬರ
ಆರ್ಥಿಕ ಪ್ರಗತಿ ಕುಂಠಿತವಾಗಿರುವ ಸಂದರ್ಭದಲ್ಲಿ ಹಣ ದುಬ್ಬರದ ಬಿಸಿಯನ್ನು ರಘುರಾಮ್ ರಾಜನ್ ಅವರು ಹೇಗೆ ತಣ್ಣಗೆ ಮಾಡುತ್ತಾರೆ ಕಾದು ನೋಡಬೇಕಿದೆ.
WPI ದುಬ್ಬರ ನಾಲ್ಕು ವರ್ಷಗಳಿಂದ ಕಳಪೆ ಮಟ್ಟದಲ್ಲಿದೆ. CPI ದುಬ್ಬರ ಎರಡಂಕಿ ದಾಟುತ್ತಿದೆ. ರೆಪೋ ದರ ಕಡಿತದಿಂದ ಪ್ರಗತಿ ಸಾಧ್ಯವಿದೆ ಆದರೆ, ಇದು ಹಣ ದುಬ್ಬರ ಏರಿಕೆಗೆ ಕಾರಣವಾಗುತ್ತದೆ. ಬಿಕ್ಕಟ್ಟಿನಲ್ಲಿ ಪರಿಸ್ಥಿತಿಯಲ್ಲಿ ರಾಜನ್ ಕಾರ್ಯ ನಿರ್ವಹಿಸಬೇಕಾಗುತ್ತದೆ.
ವಿದೇಶಿ ವಿನಿಮಯ ಮಾರುಕಟ್ಟೆ
ರುಪಾಯಿ ಐತಿಹಾಸಿಕ ಕುಸಿತ ಕಾಣುತ್ತಿರುವ ಸಂದರ್ಭದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಮೇಲಕ್ಕೇತ್ತಲು ಯಾವ ಕ್ರಮ ಅನುಸರಿಸಬೇಕು ಎಂಬುದು ಕುತೂಹಲಕಾರಿಯಾಗಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ದಿನದಿಂದ ದಿನಕ್ಕೆ ಕೆಳಗಿಳಿಯುತ್ತಿರುವುದು ಆತಂಕಕಾರಿ. ಅದರೆ, ಯಾವುದೇ ಆತುರದ ನಿರ್ಧಾರ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ನಿರಾಶೆ ಮೂಡಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ದೊಡ್ಡ ಮಟ್ಟ ಪ್ರಯತ್ನ ಅಗತ್ಯ
ಹೊಸ ಬ್ಯಾಂಕ್ ಗಳಿಗೆ ಲೈಸನ್ ನೀಡುವ ಅಗತ್ಯವಿದೆ.ಅದರಲ್ಲೂ ಇನ್ನಷ್ಟು ವಿದೇಶಿ ಬ್ಯಾಂಕ್ ಗಳಿಗೆ ಅನುಮತಿ ಸಿಗಬಹುದು. ಆದರೆ, ಸದ್ಯಕೆ ಇರುವ ಬ್ಯಾಂಕುಗಳ ಪರಿಸ್ಥಿತಿ ಸುಧಾರಣೆ, ನಿರ್ವಹಣೆ ಕಷ್ಟಕರವಾಗಿದೆ.
ಡಾಲರ್ ಒಳಹರಿವು ಹೆಚ್ಚಳ
ಭಾರತೀಯ ಮಾರುಕಟ್ಟೆಗಳಲ್ಲಿ ಡಾಲರ್ ಒಳಹರಿವು ಹೆಚ್ಚಳಕ್ಕೆ ರಾಜನ್ ಪ್ರೋತ್ಸಾಹಿಸುವ ಅಗತ್ಯವಿದೆ. ರುಪಾಯಿ ಮೌಲ್ಯ ಸುಧಾರಣೆಯಾಗುವ ತನಕ ಈ ಕ್ರಮ ಅನಿವಾರ್ಯವಾಗಿದೆ. ಕೆಲವು ತಿಂಗಳುಗಳ ಕಾಲ ಕೋಟಿಗಟ್ಟಲೆ ಡಾಲರ್ ಹಣ ಭಾರತದ ಷೇರು ಹಾಗೂ ಸಾಲ ಮಾರುಕಟ್ಟೆಯಿಂದ ಹೊರ ಹಾಕಲ್ಪಟ್ಟಿದೆ.
ಪ್ರಗತಿ ದಶಕದಲ್ಲೇ ಕುಸಿತ
ಆರ್ಥಿಕ ಪ್ರಗತಿ ಕಳೆದ ಹತ್ತು ವರ್ಷಗಳ ಹಿಂದಿನ ದಿನಗಳನ್ನು ಕಾಣುತ್ತಿದೆ. ಆರ್ ಬಿಐ ತನ್ನ ಆರ್ಥಿಕ ಸುಧಾರಣೆ ನೀತಿಯ ಮೂಲಕ ಒಂದಷ್ಟು ಚೇತರಿಕೆ ನೀಡಬಹುದು. ಸರ್ಕಾರದ ನೆರವಿನಿಂದ ಹೆಚ್ಚುವರಿ ನೇಮಕಾತಿಯನ್ನು ಪ್ರೋತ್ಸಾಹಿಸಬಹುದು.


Click it and Unblock the Notifications