ಬೆಂಗಳೂರು, ನ.11: ದೇಶದ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಘಾತ ನೀಡುವಂಥ ಸುದ್ದಿಯೊಂದು ಬಂದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ನೇಮಕಾತಿಯಲ್ಲಿ ಶೇ 50ರಷ್ಟು ಕುಸಿತ ಕಂಡು ಬರಲಿದೆ ಎಂದು ಕ್ರೆಸಿಲ್ ವರದಿ ಮಾಡಿದೆ.
ಐಟಿ ಕ್ಷೇತ್ರಕ್ಕೆ ಸೇರಿ ನಾವು ಟೆಕ್ಕಿಗಳು ಎಂದು ಟ್ಯಾಗ್ ಹಾಕಿಕೊಳ್ಳುವ ಕನಸು ಕಾಣುವ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಧರರಿಗೆ ಇದು ನಿಜಕ್ಕೂ ಆತಂಕಕಾರಿಯಾಗಿದೆ. ಜೊತೆಗೆ ಇಂಜಿನಿಯರಿಂಗ್ ಅಲ್ಲದೆ ಈಗ ಬೇರೆ ಕ್ಷೇತ್ರದ ಇಂಜಿನಿಯರ್ ಗಳು ಕೂಡಾ ಐಟಿ ಜಾಬ್ ಕನಸು ಕಾಣುವ ಮುನ್ನ ಯೋಚಿಸುವುದು ಒಳ್ಳೆಯದು.
ಐಟಿ ನೇಮಕಾತಿ ವಿಷಯಕ್ಕೆ ಬಂದರೆ 2013-14ರಲ್ಲಿ 1.05 ಲಕ್ಷ ನೇಮಕಾತಿ ಕಂಡು ಬಂದಿತ್ತು. ಭಾರತದಲ್ಲಿ ಖಾಸಗಿ ರಂಗದಲ್ಲಿ ಐಟಿ ಕ್ಷೇತ್ರದಲ್ಲಿ ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತದೆ. ಮುಂದಿನ ನಾಲ್ಕು ವರ್ಷ ಅಂದರೆ 2017-18ರ ಹೊತ್ತಿಗೆ ಈ ಸಂಖ್ಯೆ 55,000 ಕ್ಕೆ ಕುಸಿಯಲಿದೆಯಂತೆ.

ಸದ್ಯಕ್ಕೆ ಖಾಸಗಿ ಕ್ಷೇತ್ರದಲ್ಲಿ ಶೇ 24ರಷ್ಟು ನೇಮಕಾತಿಗಳು ಐಟಿ ಕಂಪನಿಗಳಿಂದ ಸಂಘಟಿತ ವಿಭಾಗದಲ್ಲಿ ನಡೆಯುತ್ತಿವೆ. ಐಟಿ ಕ್ಷೇತ್ರದ ನೇಮಕಾತಿಯಲ್ಲಿ ಕುಸಿತವಾದರೆ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಡುವುದರಲ್ಲಿ ಸಂಶಯವಿಲ್ಲ. ಪ್ರತಿ ವರ್ಷ 7 ಲಕ್ಷಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪದವಿ ಪಡೆದು ಕಾಲೇಜಿನ ಹೊರ ಬಂದರೂ ಐಟಿಕ್ಷೇತ್ರಕ್ಕೆ 1 ಲಕ್ಷದಷ್ಟು ಮಂದಿ ಮಾತ್ರ ಸೇರ್ಪಡೆಗೊಳ್ಳುತ್ತಿದ್ದಾರೆ.
ಐಟಿ ನೇಮಕಾತಿ ಕುಸಿತವಾದರೆ 118 ಬಿಲಿಯನ್ ಮೌಲ್ಯದ ಹೊರಗುತ್ತಿಗೆ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ನ ಮುಕ್ಕಾಲು ಪಾಲು ಅದಾಯ ಹೊರ ಗುತ್ತಿಗೆಯಿಂದಲೇ ಬರುತ್ತಿದೆ. ಉತ್ತರ ಅಮೆರಿಕ, ಯುರೋಪಿನಲ್ಲೂ ಆರ್ಥಿಕತೆ ಭಾರಿ ಪೆಟ್ಟು ಬೀಳಲಿದೆ.
ಐಟಿ ಕಂಪನಿಗಳ ಉದ್ಯೋಗಿಗಳಿಗೆ ಕೈತುಂಬ ಸಂಬಳ ಸಿಗುತ್ತಿರುವುದು ಪ್ರತಿ ಉದ್ಯೋಗಿ ಮೇಲೆ ಕಂಪನಿಗಳು ಮಾಡುತ್ತಿರುವ ಖರ್ಚು ವೆಚ್ಚದ ಲೆಕ್ಕಾಚಾರ ಹಾಕಿ ಕ್ರೆಸಿಲ್ ಈ ವರದಿ ನೀಡಿದೆ. ಉದ್ಯೋಗಿಯ ಆದಾಯ ಹಾಗೂ ನೇಮಕಾತಿ ನಡುವಿನ ಅನುಪಾತ ಸರಿ ಪಡಿಸಲು ಐಟಿ ಕಂಪನಿಗಳು ಒದ್ದಾಡುತ್ತಿರುವ ಕಾರಣ ನೇಮಕಾತಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಮುಂಬರುವ ದಿನಗಳಲ್ಲಿ ಐಟಿ ಉದ್ಯೋಗ ಎಂದರೆ ನಡುಕ ಹುಟ್ಟಿಸಲಿದೆ.


Click it and Unblock the Notifications