ಆರ್ಬಿಐ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ, ಸದ್ಯ ಬ್ಯಾಂಕಿಂಗ್ ವಲಯದಲ್ಲಿ ಉದ್ಭವಿಸಿರುವ ಪಾವತಿಯಾಗದ ಬೃಹತ್ ಸಾಲಗಳ ಬಿಕ್ಕಟ್ಟಿಗೆ 2008 ರಿಂದ 14 ರ ಮಧ್ಯದಲ್ಲಿ ನೀಡಲಾದ ಬೇಕಾಬಿಟ್ಟಿ ಸಾಲಗಳೇ ಕಾರಣ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವ ವಿಷಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಉರ್ಜಿತ್ ಪಟೇಲ್ ಹೇಳಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎನ್ನುವುದು ಆರ್ಥಿಕ ತಜ್ಞರ, ವಿಶ್ಲೇಶಕರ ಅಭಿಪ್ರಾಯ.
ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ ರಾಜನ್ ಅವರು 2016 ರಲ್ಲಿ ಹುದ್ದೆಯಿಂದ ನಿರ್ಗಮಿಸಿದ ನಂತರ ಡೆಪ್ಯುಟಿ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ಆರ್ಬಿಐ ಗವರ್ನರ್ ಆಗಿ ಬಡ್ತಿ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗೂ ಆರ್ಬಿಐ ಮಧ್ಯದ ಜಟಾಪಟಿ ಮುಗಿದೇ ಹೋಯಿತು ಎಂಬ ಭಾವನೆ ಎಲ್ಲೆಡೆ ಮೂಡಿತ್ತು. ನಂತರ 2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನೋಟ್ ಬ್ಯಾನ್ ಕ್ರಮಕ್ಕೆ ಗವರ್ನರ್ ಉರ್ಜಿತ್ ಪಟೇಲ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದಾಗ ಕೇಂದ್ರ ಹಾಗೂ ಆರ್ಬಿಐ ಮಧ್ಯದ ಭಿನ್ನಾಭಿಪ್ರಾಯಗಳು ಸಂಪೂರ್ಣವಾಗಿ ಬಗೆ ಹರಿದಿವೆ ಎಂಬ ನಂಬಿಕೆ ಎಲ್ಲೆಡೆ ಮನೆ ಮಾಡಿತ್ತು.
ಅದಾಗಿ ಎರಡು ವರ್ಷಗಳೇ ಕಳೆದು ಹೋಗಿವೆ. ಆದರೆ ಆಗ ಕೇಂದ್ರ ಸರಕಾರದ ಕ್ರಮಗಳಿಗೆ ಪ್ರಬಲ ಸಮರ್ಥಕನಾಗಿದ್ದ ಗವರ್ನರ್ ಉರ್ಜಿತ್ ಪಟೇಲ ಈಗ ಸರಕಾರದ ಕ್ರಮಗಳಿಗೆ ಕಡು ವಿರೋಧಿಯಾಗಿ ಬದಲಾಗಿದ್ದು ಮಾತ್ರ ಬದಲಾದ ಕಾಲಚಕ್ರದ ದ್ಯೋತಕವಾಗಿದೆ.
ಕೇಂದ್ರ ಸರಕಾರದ ಬಹುತೇಕ ಎಲ್ಲ ಆರ್ಥಿಕ ಸುಧಾರಣಾ ಕ್ರಮಗಳಿಗೆ ತಡೆ ಒಡ್ಡಿದ್ದ ಹಿಂದಿನ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರ ನಿರ್ಗಮನದ ನಂತರ ಗವರ್ನರ್ ಹುದ್ದೆಗೇರಿದ ಉರ್ಜಿತ್ ಪಟೇಲ ಸರಕಾರದ ನೀಲಿ ಕಣ್ಣಿನ ಹುಡುಗನಾಗಿ ಗುರುತಿಸಿಕೊಂಡಿದ್ದರು.
ಪ್ರಸ್ತುತ ಭಾರತದ ಆರ್ಥಿಕತೆಯ ದಿಸೆ ಹಾಗೂ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಸರಕಾರ ಹಾಗೂ ಆರ್‌ಬಿಐ ಎರಡೂ ವಿಭಿನ್ನ ರಾಗದಲ್ಲಿ ಮಾತನಾಡುತ್ತಿವೆ. ಆರ್‌ಬಿಐ ಕಾರ್ಯದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರ್‌ಬಿಐ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಕಳೆದ ಅಕ್ಟೋಬರ್ 26 ರಂದು ಆರೋಪಿಸಿದ್ದು ಈ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.
ಮತ್ತೊಂದೆಡೆ ಆರ್‌ಬಿಐ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ, ಸದ್ಯ ಬ್ಯಾಂಕಿಂಗ್ ವಲಯದಲ್ಲಿ ಉದ್ಭವಿಸಿರುವ ಪಾವತಿಯಾಗದ ಬೃಹತ್ ಸಾಲಗಳ ಬಿಕ್ಕಟ್ಟಿಗೆ 2008 ರಿಂದ 14 ರ ಮಧ್ಯದಲ್ಲಿ ನೀಡಲಾದ ಬೇಕಾಬಿಟ್ಟಿ ಸಾಲಗಳೇ ಕಾರಣ. ಇದನ್ನು ತಡೆಗಟ್ಟು ಆರ್‌ಬಿಐ ವಿಫಲವಾಗಿದ್ದು ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಗಂಭೀರವಾಗಿ ಆರೋಪಿಸಿದರು.
ವಸೂಲಾಗದ ಸಾಲಗಳ ಸಮಸ್ಯೆ (ಎನ್‌ಪಿಎ ಬಿಕ್ಕಟ್ಟು)
ಕಳೆದ ಫೆಬ್ರುವರಿಯಲ್ಲಿ ವಸೂಲಾಗದ ಸಾಲಗಳ ಕುರಿತು ಆರ್‌ಬಿಐ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ನಂತರ ಆರ್‌ಬಿಐ ಹಾಗೂ ಕೇಂದ್ರ ಸರಕಾರದ ಮಧ್ಯದ ಮಾತಿನ ಕೆಸರೆರಚಾಟ ಇನ್ನೂ ಜೋರಾಯಿತು.
ಹೊಸ ಮಾರ್ಗಸೂಚಿಗಳ ಪ್ರಕಾರ 180 ದಿನಗಳವರೆಗೂ ಯಾವುದೇ ಸಾಲ ಮರುಪಾವತಿ ಆಗದಿದ್ದರೆ ಅದನ್ನು ಎನ್‌ಪಿಎ (ವಸೂಲಾಗದ ಸಾಲ-ಎನ್‌ಪಿಎ) ಎಂದು ಪರಿಗಣಿಸಲು ಆರ್‌ಬಿಐ ನಿರ್ಧರಿಸಿತು. 180 ದಿನಗಳ ನಂತರವೂ ಸಾಲ ಮರುಪಾವತಿಸದ ಸಂಸ್ಥೆ ದಿವಾಳಿತನ ಘೋಷಿಸಲು ನ್ಯಾಯಾಲಯದ ಕದ ತಟ್ಟಬೇಕಾಗುತ್ತದೆ ಎಂದು ತಿಳಿಸಲಾಯಿತು. ಆದರೆ ಆರ್‌ಬಿಐನ ಈ ಹೊಸ ನಿಯಮಗಳು ತೀರಾ ಕಠಿಣವಾಗಿದ್ದು, ಇದರಿಂದ ಸಾರ್ವಜನಿಕ ವಲಯದ ಬ್ಯಾಂಕಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಕೇಂದ್ರ ಸರಕಾರ ಆಕ್ಷೇಪ ಎತ್ತಿತು.
ಪ್ರಸ್ತುತ 21 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 11 ಬ್ಯಾಂಕುಗಳು ಆರ್‌ಬಿಐನ ನಿಗಾದಲ್ಲಿದ್ದು, ಅದರಲ್ಲಿ ದೇನಾ ಬ್ಯಾಂಕ್ ಹಾಗೂ ಅಲಹಾಬಾದ ಬ್ಯಾಂಕುಗಳು ತಮ್ಮ ವ್ಯವಹಾರ ವಿಸ್ತರಣೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.
ನೀರವ ಮೋದಿ-ಪಿಎನ್‌ಬಿ ಹಗರಣ
ಆರ್‌ಬಿಐ ಹಾಗೂ ಕೇಂದ್ರದ ಜಟಾಪಟಿ ನಡೆದಾಗಲೇ ಪಂಜಾಬ ನ್ಯಾಷನಲ್ ಬ್ಯಾಂಕಿನ 14 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಹಗರಣ ಬೆಳಕಿಗೆ ಬಂದಿತು. ಉದ್ದಿಮೆದಾರರಾದ ನೀರವ ಮೋದಿ ಮತ್ತು ಮೆಹುಲ್ ಚೋಕ್ಸಿ ತಮ್ಮ ಕೈಚಳಕದಿಂದ ಹಲವಾರು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿದ್ದು ತಿಳಿದು ಬಂದಿತು. ಈ ಹಗರಣಕ್ಕೆ ಆರ್‌ಬಿಐ ಕಾರಣ ಎಂದು ಕೇಂದ್ರ ಸರಕಾರ ನೇರವಾಗಿ ಆಪಾದಿಸಿತು.
ಹಣಕಾಸು ಮಾರ್ಗಸೂಚಿಗಳನ್ನು ಆರ್‌ಬಿಐ ಕಟ್ಟುನಿಟ್ಟಾಗಿ ಜಾರಿಗೊಳಿಸದ್ದರಿಂದಲೇ ಪಿಎನ್‌ಬಿ ಹಗರಣ ನಡೆಯುವಂತಾಯಿತು ಎಂಬ ಗಂಭೀರ ಆರೋಪವನ್ನು ಸರಕಾರ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ, ಸರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಖಾಸಗಿ ವಲಯದ ಬ್ಯಾಂಕುಗಳ ಮೇಲೆ ಆರ್‌ಬಿಐ ಹೆಚ್ಚು ನಿಯಂತ್ರಣ ಹೊಂದಿದೆ. ಆದರೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆಯೂ ಆರ್‌ಬಿಐಗೆ ಹೆಚ್ಚು ಅಧಿಕಾರ ನೀಡಬೇಕೆಂದು ಪಟೇಲ ಇದೇ ಸಂದರ್ಭದಲ್ಲಿ ಬೇಡಿಕೆ ಇಟ್ಟರು.
ಬಡ್ಡಿದರಗಳು
ಬಡ್ಡಿದರಗಳನ್ನು ಆರ್‌ಬಿಐ ಕಡಿತಗೊಳಿಸಬೇಕೆಂದು ಸರಕಾರ ಬಯಸುತ್ತಿದೆ. ಆರ್ಥಿಕತೆಗೆ ವೇಗ ತುಂಬಲು ಇಂಥದೊಂದು ಕ್ರಮ ಅಗತ್ಯವಾಗಿದೆ ಎಂಬುದು ಸರಕಾರದ ನಿಲುವಾಗಿದೆ. ಆದರೆ ಈ ವಿಷಯದಲ್ಲಿ ಆರ್‌ಬಿಐ ವಿಚಾರ ಬೇರೆಯದೇ ಆಗಿದೆ.
ಬಡ್ಡಿದರ ಇಳಿಸಲು ನಿರಾಕರಿಸಿದ್ದಷ್ಟೆ ಅಲ್ಲದೆ ಆರ್‌ಬಿಐ ಬಡ್ಡಿದರಗಳನ್ನು ಮತ್ತೂ ಹೆಚ್ಚಿಸಿ ಸರಕಾರದ ಕೆಂಗಣ್ಣಿಗೆ ಗುರಿಯಾಯಿತು. ಕೇಂದ್ರದ ಹಣಕಾಸು ಸಚಿವಾಲಯದ ಎಲ್ಲ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ಆರ್‌ಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಸರಕಾರ ಭಾವಿಸುವಂತಾಯಿತು.
ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಪ್ರಕರಣದಲ್ಲಿಯೂ ಇದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಯಿತು. ಐಎಲ್ ಆಂಡ್ ಎಫ್‌ಎಸ್ (ಇನಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವಿಸಸ್) ಕಂಪನಿಯ ಪ್ರಕರಣದ ನಂತರ ಈ ಬಿಕ್ಕಟ್ಟು ಮತ್ತಷ್ಟು ತೀವ್ರ ರೂಪ ಪಡೆಯಿತು.
ಹಣ ಮರುಪಾವತಿಸಲು ವಿಫಲವಾದ ಐಎಲ್ ಆಂಡ್ ಎಫ್‌ಎಸ್ ಕಂಪನಿಯನ್ನು ಆರ್‌ಬಿಯ ರಕ್ಷಿಸಬೇಕೆಂದು ಸರಕಾರ ಬಯಸಿತ್ತು. ಆದರೆ ಆರ್‌ಬಿಐ ಸರಕಾರದ ಬೇಡಿಕೆಗೆ ಯಾವುದೇ ಸೊಪ್ಪು ಹಾಕಲಿಲ್ಲ. ಬ್ಯಾಂಕುಗಳಿಂದ ಹೆಚ್ಚಿನ ಮೊತ್ತದ ಡಿವಿಡೆಂಡ್ ಪಡೆಯುವ ಸರಕಾರದ ಬೇಡಿಕೆಯನ್ನು ಸಹ ಆರ್‌ಬಿಐ ತಿರಸ್ಕರಿಸಿತು.
ವ್ಯಕ್ತಿ ಆಧರಿತ ಜಗಳಗಳು
ಈ ಮಧ್ಯೆ ಕೆಲ ವ್ಯಕ್ತಿ ಆಧರಿತ ಜಗಳಗಳು ಸಹ ಬೆಳಕಿಗೆ ಬಂದವು. ಅದರಲ್ಲೂ ಎರಡು ಪ್ರಮುಖ ಪ್ರಕರಣಗಳನ್ನು ಪರಿಗಣಿಸಲೇಬೇಕು. ಇನ್ನೂ ಎರಡು ವರ್ಷ ಅವಧಿ ಬಾಕಿ ಇರುವಾಗಲೇ ನಚಿಕೇತ ಮೋರ ಅವರನ್ನು ಆರ್‌ಬಿಐ ಆಡಳಿತ ಮಂಡಳಿಯಿಂದ ತೆಗೆದು ಹಾಕಲಾಯಿತು. ಅವರಿಗೆ ಕನಿಷ್ಠ ತಿಳಿಸುವ ಸೌಜನ್ಯವನ್ನೂ ತೋರದೆ ಹೊರಹಾಕಲಾಗಿದೆ ಎಂದು ಆರ್‌ಬಿಐ ಅಸಮಾಧಾನ ವ್ಯಕ್ತಪಡಿಸಿತು.
ರಘುರಾಮ ರಾಜನ್ ಅವಧಿಯಲ್ಲಿ ಗುರುಮೂರ್ತಿ ಅವರು ಆರ್‌ಬಿಐನ ತೀಕ್ಷ್ಣ ಟೀಕಾಕಾರರಾಗಿದ್ದರು. ಭಾರತದ ಆರ್ಥಿಕತೆಯ ಬಗ್ಗೆ ಚಿಂತಿಸಲು ಆರ್‌ಬಿಐಗೆ ಸಾಮರ್ಥ್ಯವೇ ಇಲ್ಲ ಎಂದು ಗುರುಮೂರ್ತಿ ಟ್ವೀಟ್ ಮಾಡಿದ್ದರು. ಮೋದಿ ಸರಕಾರಕ್ಕೆ ನೋಟ್ ಬ್ಯಾನ್ ಐಡಿಯಾ ಕೊಟ್ಟಿದ್ದೇ ತಾನು ಎಂದೂ ಗುರುಮೂರ್ತಿ ಹೇಳಿಕೊಂಡಿದ್ದರು.
ಪರಿಸ್ಥಿತಿ ಹೀಗಿದ್ದಾಗ ಎ.ಡಿ. ಶ್ರಾಫ್ ಮೆಮೊರಿಯಲ್ ಲೆಕ್ಚರ್ ಸಮಾರಂಭದಲ್ಲಿ ಮಾತನಾಡಿದ ಆರ್‌ಬಿಐ ಡೆಪ್ಯೂಟಿ ಗವರ್ನರ್ ವಿರಲ ಆಚಾರ್ಯ, ಆರ್‌ಬಿಐನ ಸ್ವಾಯತ್ತತೆಗೆ ಧಕ್ಕೆ ತರುವುದು ಎಂದರೆ ಸರಕಾರ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತೆ ಎಂದು ವಾಗ್ದಾಳಿ ನಡೆಸಿದರು. ಇದು ಗವರ್ನರ್ ಉರ್ಜಿತ್ ಪಟೇಲ ಅವರ ನಿಲುವನ್ನು ಸಮರ್ಥಿಸುವಂತಿತ್ತು.
ಆರ್‌ಬಿಐ ಕಾಯಿದೆ ಸೆಕ್ಷನ್ 7
ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 7 (1) ಹೀಗೆ ಹೇಳುತ್ತದೆ-
ಸಾರ್ವಜನಿಕ ಹಿತಾಸಕ್ತಿಗೆ ಅಗತ್ಯವಾಗಿರುವಂತೆ ಕಂಡು ಬಂದಲ್ಲಿ, ಆರ್‌ಬಿಐ ಗವರ್ನರ್ ಜೊತೆ ಚರ್ಚಿಸಿ ಆರ್‌ಬಿಐಗೆ ಕೇಂದ್ರ ಸರಕಾರ ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ನೀಡಬಹುದು.
ಇನ್ನು ಸೆಕ್ಷನ್ 7 (2), ಆರ್‌ಬಿಐ ಆಡಳಿತ ಮಂಡಳಿಗೆ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಿದೆ.
ಆರ್‌ಬಿಐನ ಹಣಕಾಸು ರಿಸರ್ವಗಳು
ಆರ್‌ಬಿಐ ತಿಜೋರಿಯಲ್ಲಿ ಬೃಹತ್ ಮೊತ್ತದ ಹಣಕಾಸು ರಿಸರ್ವ ಇವೆ. ಇದರಲ್ಲಿ ಕೈಯಾಡಿಸಿ ಅದನ್ನು ಆರ್ಥಿಕತೆಯಲ್ಲಿ ತರಬೇಕೆಂದು ಕೇಂದ್ರ ಬಯಸುತ್ತದೆ ಎಂಬುದು ಹಣಕಾಸು ತಜ್ಞರ ವಾದವಾಗಿದೆ. ಆರ್‌ಬಿಐ ಬಳಿ ಇರುವ ಬೃಹತ್ ರಿಸರ್ವಗಳನ್ನು ಆರ್ಥಿಕತೆಯ ಉತ್ತೇಜನಕ್ಕೆ ಬಳಸಬಹುದು ಎನ್ನುವುದು ಸರಕಾರದ ವಾದವಾಗಿದೆ. ಆದರೆ ಆರ್‌ಬಿಐ ಅನ್ನು ಕಟ್ಟ ಕಡೆಯ ಸಾಲ ನೀಡುವಾತ ಎಂದು ಹೇಳಲಾಗುತ್ತದೆ. ಅಂದರೆ ದೇಶದ ಇಡೀ ಆರ್ಥಿಕ ಪರಿಸ್ಥಿತಿ ಕುಸಿದಾಗ ಮಾತ್ರ ಆರ್‌ಬಿಐ ಮಧ್ಯ ಪ್ರವೇಶಿಸಿ ತನ್ನಲ್ಲಿನ ರಿಸರ್ವಗಳನ್ನು ಬಳಸುತ್ತದೆ.
ಸರಕಾರಕ್ಕೆ ಡಿವಿಡೆಂಡ್ ಪಾವತಿ
ಸದ್ಯ ಆರ್‌ಬಿಐ ಬಳಿ 28,724 ಬಿಲಿಯನ್ ರೂಪಾಯಿಗಳಷ್ಟು ಕ್ಯಾಶ್ ರಿಸರ್ವ ಇದೆ. ಇದರಲ್ಲಿ ವಿದೇಶಿ ಆಸ್ತಿಗಳು, ಚಿನ್ನ ಮತ್ತು ಸರಕಾರದ ಡೆಬ್ಟ್ ಪಾವತಿಗಳು ಸಹ ಸೇರಿವೆ. ತನ್ನ ಬಾಂಡ್‌ಗಳಿಂದ ಆರ್‌ಬಿಐ ಗಳಿಸುವ ಲಾಭದಲ್ಲಿನ ಕೆಲ ಅಂಶವನ್ನು ಸರಕಾರಕ್ಕೆ ನೀಡುತ್ತದೆ. ಆದರೆ ಸಾರ್ವಜನಿಕ ಹಿತಾಸಕ್ತಿ ಕಾರಣ ಮುಂದಿಟ್ಟುಕೊಂಡು, ಆರ್‌ಬಿಐ ಇನ್ನೂ ಹೆಚ್ಚಿನ ಲಾಭಾಂಶವನ್ನು ನೀಡಬೇಕು ಎಂದು ಸರಕಾರ ಬಯಸುತ್ತಿದೆ ಎನ್ನಲಾಗಿದೆ. ಚುನಾವಣಾ ವರ್ಷವಾಗಿರುವ ಕಾರಣದಿಂದ ಸರಕಾರದ ಹೆಚ್ಚುವರಿ ಹಣಕಾಸು ಬಯಸುತ್ತಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ.
ಆರ್‌ಬಿಐ ಸ್ವಾಯತ್ತತೆ ಮಹತ್ವದ್ದು: ಹಣಕಾಸು ಸಚಿವಾಲಯ
ಆರ್‌ಬಿಐ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುವಂತೆ ಆರ್‌ಬಿಐ ಸ್ವಾಯತ್ತತೆಯನ್ನು ಕೇಂದ್ರ ಸರಕಾರ ಗೌರವಿಸುತ್ತದೆ. ಭಾರತ ಸರಕಾರ ಆರ್‌ಬಿಐನ ಸ್ವಾಯತ್ತತೆಯನ್ನು ಕಾಲಕಾಲಕ್ಕೆ ಸಂರಕ್ಷಿಸಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿತು.
ಸರಕಾರ, ಆರ್‌ಬಿಐ ಮಧ್ಯದ ಸಂವಹನ ಬಹಿರಂಗಪಡಿಸಲಾಗದು: ಜೇಟ್ಲಿ
ಸರಕಾರ ಹಾಗೂ ಆರ್‌ಬಿಐ ಮಧ್ಯೆ ವಿವಿಧ ಸ್ತರಗಳಲ್ಲಿ ನಡೆಯುವ ಮಾತುಕತೆಗಳು, ಅವುಗಳ ಸ್ವರೂಪಗಳನ್ನು ಯಾವತ್ತಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಸಚಿವ ಅರುಣ ಜೇಟ್ಲಿ ಪ್ರತಿಪಾದಿಸಿದರು.
ಸಾರ್ವಜನಿಕ ವಲಯದ ಬ್ಯಾಂಕುಗಳ ದುರ್ಬಲ ನಿರ್ವಹಣೆ
ಪಿಸಿಎ ನಿಯಮಾವಳಿಗಳ ಪ್ರಕಾರ ಸಾರ್ವಜನಿಕ ವಲಯದ ದುರ್ಬಲ ಬ್ಯಾಂಕುಗಳ ನಿರ್ವಹಣೆ ಹಾಗೂ ಇಂಧನ ಕ್ಷೇತ್ರದಲ್ಲಿನ ಮರುಪಾವತಿಯಾಗದ ಸಾಲಗಳ ಬಿಕ್ಕಟ್ಟು ನಿರ್ವಹಣೆ ಕುರಿತು ಹಾಗೂ ಇನ್ನೂ ಹಲವಾರು ವಿಷಯಗಳಲ್ಲಿ ಸರಕಾರ ಹಾಗೂ ಆರ್‌ಬಿಐ ಮಧ್ಯೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಲೇ ನಡೆದಿವೆ. ಸ್ವಾಯತ್ತ ಹಣಕಾಸು ಪಾವತಿ ನಿರ್ವಹಣೆ ಪ್ರಾಧಿಕಾರ ರಚನೆ ಹಾಗೂ ನಗದು ಕುರಿತ ಬಿಗಿ ನಿಯಮಗಳ ಕುರಿತಾಗಿಯೂ ಎರಡರ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಯಗಳು ಮೂಡಿವೆ.
ನ. 19 ರಂದು ಆರ್‌ಬಿಐ ಮೀಟಿಂಗ್
ಗವರ್ನರ್ ಉರ್ಜಿತ್ ಪಟೇಲ ನೇತೃತ್ವದಲ್ಲಿ ನವೆಂಬರ್ 19 ರಂದು ಮುಂಬೈನಲ್ಲಿ ಆರ್‌ಬಿಐ ಸೆಂಟ್ರಲ್ ಬೋರ್ಡ್ ಮೀಟಿಂಗ್ ನಡೆಯಲಿದೆ. ಆರ್‌ಬಿಐ ಸ್ವಾಯತ್ತತೆಯ ಬಗ್ಗೆ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಅವರ ಟೀಕಾ ಪ್ರಹಾರದ ನಂತರ ನಡೆಯುತ್ತಿರುವ ಮೊದಲ ಮೀಟಿಂಗ್ ಇದಾಗಿದೆ. ಕೇಂದ್ರ ಸರಕಾರ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡು ಒಟ್ಟು 18 ಜನ ಸದಸ್ಯರು ಆರ್‌ಬಿಐ ಆಡಳಿತ ಮಂಡಳಿಯಲ್ಲಿ ಇದ್ದಾರೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications